Advertisement

ಕಟ್ಟಲು ಬೇಕು ಹತ್ತು ವರ್ಷ ಕೆಡವಲು ಒಂದೇ ದಿವಸ!

03:09 PM May 11, 2020 | mahesh |

ಒಳ್ಳೆಯ ವಸ್ತು ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ, 15 ನಿಮಿಷ ಕಾದು ನಿಲ್ಲಲು ಜನ ತಯಾರಿರುವುದಿಲ್ಲ. ಬ್ಯುಸಿನೆಸ್‌ ಆರಂಭಿಸಿದವರಿಗೆ ಇದು ಗೊತ್ತಿರಬೇಕು…

Advertisement

ಅದು ಹೋಟೆಲ್‌ ಇರಬಹುದು, ಬೇಕರಿ ಆಗಿರಬಹುದು ಅಥವಾ ಪ್ರಾವಿಶನ್‌ ಸ್ಟೋರ್‌, ಹೇರ್‌ ಸಲೂನ್‌, ಸ್ಟುಡಿಯೋ… ಹೀಗೆ ಯಾವುದೇ ಒಂದು ಉದ್ಯಮ ಆರಂಭವಾದಾಗ, ಗ್ರಾಹಕರಿಗೂ ಕುತೂಹಲ ಉಂಟಾಗುತ್ತದೆ. ಈ ಹೊಸ ಅಂಗಡಿ ಹೇಗಿರಬಹುದು, ಇಲ್ಲಿ ವ್ಯವಹಾರ ಮಾಡಿದರೆ ಏನೆಲ್ಲಾ ಅನುಕೂಲ ಇದೆ ಎಂದೆಲ್ಲಾ ಜನ ಖಂಡಿತ ಯೋಚನೆ ಮಾಡುತ್ತಾರೆ. ಯಾವುದೇ ಕೆಲಸ, ಗ್ರಾಹಕರು ಹೇಳಿದ ಕೆಲವೇ ಕ್ಷಣದಲ್ಲಿ ಆಗಿಬಿಟ್ಟರೆ- ಈ ಶಾಪ್‌ಲಿ ಸರ್ವಿಸ್‌ ತುಂಬಾ ಚೆನ್ನಾಗಿದೆ, ಎರಡೇ ನಿಮಿಷದಲ್ಲಿ ಸಪ್ಲೈ ಆಗುತ್ತೆ ಎಂದು ಮೆಚ್ಚುಗೆಯ ಮಾತಾಡುತ್ತಾರೆ. ಇಷ್ಟಾದರೆ, ಮೌತ್‌ ಪಬ್ಲಿಸಿಟಿ ಸಿಕ್ಕಿತು, ಆ ಮೂಲಕ ಲಾಭದ ಹಾದಿ ತೆರೆದುಕೊಂಡಿತು, ಎಂದೇ ಅರ್ಥ. ಸಂತೋಷ ಇರುವ ಕಡೆಯೇ ದುಃಖವೂ  ಇರುತ್ತದೆ. ಹಾಗೆಯೇ, ಗೆಲುವು ಎಂಬುದರಿಂದ ಕೆಲವೇ ಹೆಜ್ಜೆ ದೂರದಲ್ಲೇ ಸೋಲು ಎಂಬುದೂ ಅಡಗಿ ಕುಳಿತಿರುತ್ತದೆ. ಬ್ಯುಸಿನೆಸ್‌ಗೆ ಹೊರಟವರು, ದುಡ್ಡು ಮಾಡಬೇಕು ಅಂದುಕೊಂಡವರು ಇದನ್ನು ನೆನಪಲ್ಲಿ ಇಟ್ಟುಕೊಳ್ಳಬೇಕು. ಕೆಲಸ ಬೇಗ ಆಗುತ್ತೆ ಎಂದು ಗೊತ್ತಾದರೆ, ಗ್ರಾಹಕರೂ ಜಾಸ್ತಿ ಆಗುತ್ತಾರೆ. ಆ ಮೂಲಕ ಸಂಪಾದನೆ ಕೂಡಾ ಹೆಚ್ಚುತ್ತದೆ. ಅದು ಸಹಜ ಕೂಡ.

ಎಷ್ಟೋ ಜನ ಮೈ ಮರೆಯುವುದೇ ಈ ಸಮಯದಲ್ಲಿ. ಜನ ನಮ್ಮ ಅಂಗಡಿಯನ್ನು ಇಷ್ಟ ಪಡುತ್ತಿದ್ದಾರೆ ಅಂತ ಗೊತ್ತಾದ ನಂತರ, ಎಷ್ಟೋ ಜನರಿಗೆ ಹೆಗಲ ಮೇಲೆ ತಲೆ ನಿಲ್ಲುವುದಿಲ್ಲ. ನಮ್ಮ ಶಾಪ್‌ಲಿ ಉತ್ತಮ ಗುಣಮಟ್ಟದ ವಸ್ತು ಕೊಡ್ತಾ ಇದ್ದೇವೆ. ಹಾಗಾಗಿ, ಜನ ಬಂದೇ ಬರ್ತಾರೆ ಎಂದು ಭಾವಿಸುತ್ತಾರೆ. ಜೊತೆಗೆ, ಒಳ್ಳೆಯ ವಸ್ತು ಬೇಕಾದರೆ ಸ್ವಲ್ಪ ಹೊತ್ತು ಕಾಯಲಿ ಎಂದೂ ಯೋಚಿಸುತ್ತಾರೆ. ಸೋಲು ಎಂಬುದು ಒಳಮನೆಗೆ ಬಂದು ಕೂರುವುದೇ ಆಗ! ಕೇಳಿದ ತಕ್ಷಣ ಸಪ್ಲೈ ಆಗುತ್ತದೆ ಅಂದಾಗ ಸಹಜವಾಗಿಯೇ ರಶ್‌ ಕೂಡ ಜಾಸ್ತಿ ಆಗುತ್ತದೆ. ಉದ್ಯಮ ಆರಂಭಿಸಿದವನಿಗೆ ಇದು ಗೊತ್ತಿರಬೇಕು. ಒಳ್ಳೆಯ ವಸ್ತು ಸಿಗುತ್ತದೆ ಎಂಬ ಕಾರಣಕ್ಕೆ 15 ನಿಮಿಷ ಕಾದು ನಿಲ್ಲಲು ಜನ ತಯಾರಿರುವುದಿಲ್ಲ. ರಶ್‌ ಹೆಚ್ಚಾಗುತ್ತಿದೆ ಎಂದು ಗೊತ್ತಾದ ತಕ್ಷಣ, ಕೆಲಸಗಾರರನ್ನು ಹೆಚ್ಚಿಸಿಕೊಳ್ಳುವ, ರಶ್‌ ತಗ್ಗಿಸಲು 3-4 ಕೌಂಟರ್‌ ಮಾಡುವ ಕೆಲಸ ಆಗಬೇಕು. ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಕ್ಯೂ ಹೆಚ್ಚುತ್ತಿದೆ ಅನಿಸಿದರೆ, ಕಾಯಲಿ ಬಿಡಿ ಅನ್ನಬಾರದು. ಮಧ್ಯಾಹ್ನ 12.30 ರಿಂದ 1 ಗಂಟೆಯ ಒಳಗೆ ಬಂದರೆ, ಒಂದು ಐಸ್‌ ಕ್ರೀಮ್/ ಬಾಳೆಹಣ್ಣು ಉಚಿತ ಎಂದೋ ನಿಯಮ ಮಾಡಬೇಕು. ಆಗ, ಎರಡು ಗಂಟೆಗೆ ಬರುತ್ತಿದ್ದವರು ಒಂದು ಗಂಟೆಗೆ, ಮೂರು ಗಂಟೆಗೆ ಬರುತ್ತಿದ್ದವರು ಎರಡು ಗಂಟೆಗೆ ಬರಲು ಶುರು ಮಾಡುತ್ತಾರೆ! ರಶ್‌ ತಂತಾನೇ ಕಡಿಮೆ ಆಗುತ್ತದೆ. ಲಾಭದ ಹಣ ಹೆಚ್ಚುತ್ತಾ ಹೋಗುತ್ತದೆ.

ಇಂಥವೇ ಜಾಣತನದ ಟ್ರಿಕ್‌ ಗಳನ್ನು ಮಾಡಿದರೆ, ಆಯಾ ಉದ್ಯಮಕ್ಕೆ ಅನುಗುಣವಾಗಿ ಮಾಡಿದರೆ ಮಾತ್ರ, ವ್ಯವಹಾರದಲ್ಲಿ ದೀರ್ಘ‌ ಅವಧಿಯವರೆಗೆ ಗೆಲುವು ಕಾಣಬಹುದು. ಇಲ್ಲವಾದರೆ, ಏರಿದಷ್ಟೇ ಬೇಗನೆ ಕೆಳಕ್ಕೂ ಇಳಿಯಬಹುದು!

Advertisement

Udayavani is now on Telegram. Click here to join our channel and stay updated with the latest news.

Next