Advertisement
ಪಾವೂರು ಉಳಿಯ ಪ್ರದೇಶ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಒಂದು ತೀರದಲ್ಲಿ ಪಾವೂರು ಇನ್ನೊಂದು ತೀರದಲ್ಲಿ ಅಡ್ಯಾರ್ ಪ್ರದೇಶವಿದ್ದು ಇಲ್ಲಿನ ಜನರ ನಿತ್ಯ ಸಂಚಾರ ಹೆಚ್ಚಾಗಿರುವುದು ಅಡ್ಯಾರ್ ಮೂಲಕ. ಸುಮಾರು 50 ವರ್ಷಗಳ ಇತಿಹಾಸವಿರುವ ಇನ್‌ಫೆಂಟ್ ಜೀಸಸ್ ಚರ್ಚ್, 40ಕ್ಕೂ ಹೆಚ್ಚು ಕುಟುಂಬಗಳ ಸುಮಾರು 150ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಾವೂರು ಉಳಿಯ ಪ್ರದೇಶದ ಜನರ ಮುಖ್ಯ ಉದ್ಯೋಗ ಮೀನುಗಾರಿಕೆ ಮತ್ತು ಕೃಷಿಯಾದರೂ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಅರಸಿಕೊಂಡು ನದಿ ದಾಟಿ ಅಡ್ಯಾರ್ ಮೂಲಕ ಮಂಗಳೂರನ್ನು ತಲುಪುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪಾವೂರು ಉಳಿಯದಲ್ಲಿ ಮಳೆಗಾಲ ಹೊರತು ಪಡಿಸಿದರೆ ಬೇಸಗೆ ಕಾಲದಲ್ಲಿ ಜನರು ಯಾವುದೇ ತೊಂದರೆ ಇಲ್ಲದೆ ನದಿಯಲ್ಲಿ ನಡೆದಾಡಿಕೊಂಡು ಅಡ್ಯಾರ್‌ಗೆ ತೆರಳುತ್ತಿದ್ದರು. ನದಿ ಉಬ್ಬರದ ಸಂದರ್ಭದಲ್ಲಿ ಜನರಿಗೆ ನಡೆದಾಡಲು ಮರದ ದಿಮ್ಮಿ ಮತ್ತು ಮರಳು ಚೀಲವನ್ನು ಬಳಸಲಾಗುತ್ತಿತ್ತು. ಕಳೆದ 7 ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭವಾಗಿದ್ದು, ಸಮಸ್ಯೆಗಳು ಹೆಚ್ಚಾಗಿದೆ. ಕೆಲವೆಡೆ ನದಿ 8 ಅಡಿ ಅಳವಾದರೆ, ಇನ್ನು ಕೆಲವೆಡೆ ಸುಮಾರು 15 ಅಡಿ ಅಳವಾಗಿದೆ. ಇದರಿಂದ ಬೇಸಗೆಯಲ್ಲೂ ದೋಣಿಯನ್ನೇ ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿತ್ತು.
Related Articles
Advertisement
ಕನಸು ನನಸಾಯ್ತುಕಳೆದ ಆರು ವರ್ಷದ ಹಿಂದೆ ಸ್ಥಳೀಯ ಚರ್ಚ್ ಗೆ ಧರ್ಮಗುರುವಾಗಿ ಆಗಮಿಸಿದ್ದ ಫಾ| ಜೆರಾಲ್ಡ್ ಲೋಬೋ ಸ್ಥಳೀಯರಿಗೆ ಮಾರ್ಗದರ್ಶಕರಾಗಿ ನಿಂತು ಸೇತುವೆ ನಿರ್ಮಾಣದ ಕನಸನ್ನು ಬಿತ್ತಿದ್ದರು. ಕಳೆದ ಆರು ವರ್ಷಗಳಿಂದ ಜನರ ಬೇಡಿಕೆ ಈಡೇ ರಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ಸಂಪರ್ಕಿ ಸಲು ಪ್ರಯತ್ನಪಟ್ಟರು. 2018ರಲ್ಲಿ ಚರ್ಚ್‌ನ 50ನೇ ವರ್ಷದ ಆಚರಣೆ ಸಂದರ್ಭದಲ್ಲಿ ಹೊರಗಿನ ದಾನಿಗಳಿಂದ ಹಣ ಸಂಗ್ರಹಿಸಿ ಸುಮಾರು 300 ಮೀ. ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾದರು. ಕಳೆದ ಬೇಸಗೆಯಲ್ಲಿ 300 ಮೀಟರ್ ಸೇತುವೆ ನಿರ್ಮಾಣದ ಮೂಲಕ ಪ್ರೇರಿತರಾದ ಸ್ಥಳೀಯರು ಈ ಬಾರಿ 800ಮೀ. ವರೆಗೆ ಸಂಪೂರ್ಣ ಸೇತುವೆ ನಿರ್ಮಾಣಕ್ಕೆ ಹಣ ಸಂಗ್ರಹಿಸಿದ್ದು, ಈಗ ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲದಲ್ಲಿ ಬಿಚ್ಚಿ, ಬೇಸಗೆ ಕಾಲದಲ್ಲಿ ಮಾತ್ರ ಉಪಯೋಗ ಮಾಡುವಂತ ಈ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸುಮಾರು 18 ಲಕ್ಷ ರೂ. ವೆಚ್ಚವಾಗಿದ್ದು, ರಾಡ್‌ಗಳ ಸಹಕಾರದೊಂದಿಗೆ ಲಾಕ್ ಸಿಸ್ಟಮ್ ಅಳವಡಿಸಲಾಗಿದೆ. ಕಳೆದ ಬಾರಿ ರಾಡ್‌ಗಳ ಮೇಲೆ ಮರಳು ಚೀಲವನ್ನು ಹಾಕಿ ಫುಟ್ಪಾತ್ ಆಗಿ ಬಳಸಿದ್ದು, ಈ ಬಾರಿ ಮರದ ಹಲಗೆಗಳನ್ನು ಜೋಡಿಸಲಾಗಿದೆ. ಮರೀಚಿಕೆಯಾದ ಬೇಡಿಕೆ
ಹಿಂದೆ ಪಾವೂರು ಉಳಿಯದಲ್ಲಿ ಎಪ್ರಿಲ್ ಅನಂತರ ಉಪ್ಪು ನೀರು ಬರುತ್ತಿತ್ತು. ಆದರೆ ಮರಳುಗಾರಿಕೆಯ ಎಫೆಕ್ಟ್ನಿಂದ ಡಿಸೆಂಬರ್ ತಿಂಗಳಲ್ಲೇ ಉಪ್ಪು ನೀರು ಆವರಿಸುತ್ತಿದೆ. ಸ್ಥಳೀಯರ ಮನವಿಗೆ ಸ್ಪಂದಿಸಿದ ಹಿಂದಿನ ಜಿ.ಪಂ. ಸಿಇಒ ಡಾ| ರವಿ ಬಾವಿ ನಿರ್ಮಾಣಕ್ಕೆ ಅನುದಾನ ಮತ್ತು ನದಿ ದಾಟಲು ಬೋಟ್‌ನ ವ್ಯವಸ್ಥೆ ಮಾಡಿದ್ದರು. ಬಾವಿ ನಿರ್ಮಾಣಗೊಂಡರು ನೀರು ಸರಬರಾಜಿಗೆ ಜಿ.ಪಂ. ಯಾವುದೇ ಕ್ರಮ ಕೈಗೊಂಡಿಲ್ಲ. ಬೋಟ್‌ಗೆ ಬೇಕಾದ ಸೀಮೆ ಎಣ್ಣೆಯ ಬೇಡಿಕೆ ಬೇಡಿಕೆಯಾಗಿ ಉಳಿದಿದೆ. ಅನುದಾನ ಬಂದಿಲ್ಲ
ಪಾವೂರು ಉಳಿಯಕ್ಕೆ ಸಂಪರ್ಕ ಸೇತುವೆಗೆ 1.5 ಕೋಟಿ ಬಿಡುಗಡೆಯಾಗಿರುವುದಾಗಿ ಪತ್ರಿಕೆಗಳಲ್ಲಿ ಸುದ್ದಿ ಬಂದಿದ್ದರೂ ಸೇತುವೆಗೆ ಬೇಕಾದ 3 ಕೋಟಿ ರೂ. ಅನುದಾನ ಬಿಡುಗಡೆಯಾಗದೆ ಕಾಮಗಾರಿ ಆರಂಭಿಸುವಂತಿಲ್ಲ ಎಂದು ಸ್ಥಳೀಯ ಜನಪ್ರತಿಧಿಗಳು ತಿಳಿಸಿದ್ದರಿಂದ ಸೇತುವೆ ಕನಸು ಕನಸಾಗಿಯೇ ಉಳಿತ್ತು. ಈಗ ಧರ್ಮಗುರುಗಳ ನೇತೃತ್ವದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣವಾಗುತ್ತಿದೆ.
– ಗಿಲ್ಬರ್ಟ್ ಡಿ’ಸೋಜಾ, ನಿವಾಸಿ ಶೀಘ್ರ ಪರಿಹಾರ
ಜನರ ಸಹಭಾಗಿತ್ವದಲ್ಲಿ ಫಾದರ್ ಜೆರಾಲ್ಡ್ ಲೋಬೋ ಅವರ ನೇತೃತ್ವದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ. ಈ ಯೋಜನೆಗೆ ತಾಲೂಕು ಪಂಚಾಯತ್ ಮತ್ತು ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಈ ಪ್ರದೇಶಕ್ಕೆ ಶಾಶ್ವತ ತೂಗು ಸೇತುವೆ ನಿರ್ಮಾಣಕ್ಕೆ ಈ ಹಿಂದೆ 3 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನಾ ವೆಚ್ಚ ಹೆಚ್ಚಾಗುವುದರಿಂದ 6 ಕೋಟಿ ರೂ. ಅನುದಾನಕ್ಕೆ ಮುಖ್ಯಮಂತ್ರಿಯವರಿಗೆ ಮರು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
– ಯು.ಟಿ. ಖಾದರ್,
ಜಿಲ್ಲಾ ಉಸ್ತುವಾರಿ ಸಚಿವ ಸ್ಥಳೀಯರ ಸಹಕಾರ
ಸುಮಾರು 300 ವರ್ಷಗಳ ಇತಿಹಾಸವಿರುವ ಪಾವೂರು ಉಳಿಯ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಸ್ಮಾರ್ಟ್ ಸಿಟಿಯಲ್ಲಿ ಈ ಪ್ರದೇಶದ ಅಭಿವೃದ್ಧಿಯಾಗಬೇಕಾಗಿದ್ದು, ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳನ್ನು, ಜಿಲ್ಲಾಡಳಿತ, ಸರಕಾರಕ್ಕೆ ಮನವಿ ಮಾಡಿದರೂ ಸ್ಪಂದನೆ ದೊರಕದೆ ಇದ್ದಾಗ ಪರ್ಯಾಯವಾಗಿ ದಾನಿಗಳಿಂದ ಮತ್ತು ಸ್ಥಳೀಯ ನಿವಾಸಿಗಳಿಂದ ಹಣ ಸಂಗ್ರಹಿಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಸ್ಥಳೀಯರ ಸಹಕಾರ ಮತ್ತು ದಾನಿಗಳ ನೆರೆವಿನಿಂದ ಈಗಾಗಲೇ 15 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಇನ್ನೂ ಹಣದ ಆವಶ್ಯಕತೆಯಿದೆ. ಸೇತುವೆ ಪೂರ್ಣಗೊಳ್ಳಬೇಕಾದರೆ 18 ಲಕ್ಷ ರೂ. ಅಂದಾಜಿಸಲಾಗಿದೆ.
– ವಂ| ಜೆರಾಲ್ಡ್ ಲೋಬೋ,
ಧರ್ಮಗುರುಗಳು, ಇನ್‌ಫೆಂಟ್ ಜೀಸಸ್‌ಚರ್ಚ್ ಪಾವೂರು ಉಳಿಯ