Advertisement

‘ಸವಾಲು ಎದುರಿಸಿ ಸದೃಢ ಭಾರತ ಕಟ್ಟೋಣ’

11:00 AM Aug 16, 2018 | |

ಪುತ್ತೂರು: ದೇಶದಲ್ಲಿ ಉಳಿದು ಕೊಂಡಿರುವ ಸಮಸ್ಯೆ, ಸವಾಲುಗಳನ್ನು ಎದುರಿಸಿ ಸದೃಢ ಭಾರತವನ್ನು ಕಟ್ಟುವ ಕಡೆಗೆ ನಮ್ಮ ಚಿತ್ತವಿರಬೇಕು. ಆರ್ಥಿಕ, ಸಾಮಾಜಿಕ, ಭೌತಿಕ ಮಟ್ಟದಲ್ಲಿ ದೇಶವನ್ನು ಬಲಿಷ್ಠವಾಗಿ ಮುನ್ನಡೆಸಲು ಯುವ ಸಮುದಾಯ ಮುಂದೆ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಆಶಯ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವತಿಯಿಂದ ಮಂಗಲ್‌ ಪಾಂಡೆ ಚೌಕದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

Advertisement

ಸಮಾನತೆ, ಸಾರ್ವಭೌಮತ್ವ ಸಾರಿದ, ವಿಭಿನ್ನತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು. ಇಂತಹ ಹೆಮ್ಮೆ ಅನುಭವಿಸುವ ಅವಕಾಶ ನಮ್ಮೆಲ್ಲರ ಪುಣ್ಯ. ಈ ಘನತೆಯ ವೈಭವವನ್ನು ಮತ್ತಷ್ಟು ಉನ್ನತಿಗೆ ಏರಿಸುವ ಕೆಲಸ ಪ್ರತಿಯೊಬ್ಬ ಪ್ರಜೆಯಿಂದ ಆಗಬೇಕು. 21ನೇ ಶತಮಾನ ಭಾರತದ ಶತಮಾನ ಎನ್ನುವುದಕ್ಕೆ ಪೂರಕವಾಗಿ ನಮ್ಮ ಪಾಲಿನ ಸೇವೆಯನ್ನೂ ನೀಡಬೇಕು ಎಂದರು.

ಸೈನಿಕ ಪ್ರಜ್ಞೆಯಿರಲಿ
ಪ್ರತಿ ವ್ಯಕ್ತಿಯಲ್ಲಿ ಸೈನಿಕ ಪ್ರಜ್ಞೆ ಜಾಗೃತವಾಗಿರಬೇಕು. ಸ್ವತ್ಛ ಭಾರತ, ಸ್ವಚ್ಛ  ಪರಿಸರ ಮೊದಲಾದ ಜಾಗೃತ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ಮಾತಿನ ಮೂಲಕ ಮಾತ್ರವಾಗಿರದೆ ಕೃತಿಯ ಮೂಲಕವೂ ದೇಶಪ್ರೇಮ ಕಾರ್ಯ ರೂಪಕ್ಕೆ ಬರಬೇಕು. ಸರಕಾರಗಳು ಮಾಡುವುದಕ್ಕಿಂತ ನಾವು ಮಾಡೋಣ ಎಂಬ ಸಂಕಲ್ಪ ತೊಡಬೇಕು ಎಂದು ಉಪ ವಿಭಾಗಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು.

ಏಕತೆಗೆ ಎಲ್ಲರ ಸಹಭಾಗಿತ್ವ  ಅತ್ಯಗತ್ಯ: ಅಂಗಾರ
ಸುಳ್ಯ : ಸಮಾಜದಲ್ಲಿ ಏಕತೆ ಮೂಡಿಸಲು ಒಬ್ಬರಿಂದ ಸಾಧ್ಯವಿಲ್ಲ. ಅದು ಸರ್ವರ ಪ್ರಯತ್ನದ ಫಲ. ಇದರಲ್ಲಿ ಎಲ್ಲರ ಹೊಣೆಗಾರಿಕೆ ಇದೆ ಎಂದು ಶಾಸಕ ಎಸ್‌. ಅಂಗಾರ ಹೇಳಿದರು.

ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಬುಧವಾರ ಸ.ಪ.ಪೂ. ಕಾಲೇಜಿನ ಮೈದಾನದಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಪ್ರಕೃತಿ ವಿರೋಧಿ ಧೋರಣೆ ಸಲ್ಲದು
ಪ್ರಾಕೃತಿಕ ವಿಕೋಪದಿಂದ ಆಗುತ್ತಿರುವ ತಲ್ಲಣಗಳನ್ನು ಗಮನಿಸುತ್ತಿದ್ದೇವೆ. ಇದಕ್ಕೆ ಅನೇಕ ಬಾರಿ ಜನರೂ ಕಾರಣಕರ್ತರು. ಪ್ರಕೃತಿ ವಿರೋಧಿ ನಡೆಯಿಂದ ಪ್ರಕೃತಿಯೇ ನಮ್ಮ ವಿರುದ್ಧ ತಿರುಗಿ ಬೀಳುವ ಸ್ಥಿತಿ ಸೃಷ್ಟಿಯಾಗಿದೆ. ಹಾಗಾಗಿ ಪ್ರಕೃತಿ ವಿರೋಧಿ ಧೋರಣೆ ಸಲ್ಲದು. ನದಿ, ಕೆರೆಗಳನ್ನು ಒತ್ತುವರಿ ಮಾಡಿದ ಪರಿಣಾಮ ಮಳೆ ನೀರು ಹರಿದು ಹೋಗದ ಸ್ಥಿತಿ ಇದೆ. ಇದನ್ನು ನಿಯಂತ್ರಿಸುವ ಆಡಳಿತ ಯಂತ್ರ ಎಚ್ಚರ ಮರೆತರೆ ಇಂತಹ ಅನಾಹುತಗಳು ಪದೇ-ಪದೇ ಮರುಕಳಿಸುತ್ತವೆ ಎಂದರು. ಧ್ವಜಾರೋಹಣ ನೆರವೇರಿಸಿ ಗೌರವವಂದನೆ ಸ್ವೀಕರಿಸಿ ಸಂದೇಶ ನೀಡಿದ ತಹಸೀಲ್ದಾರ್‌ ಕುಂಞಮ್ಮ, ಸಂಕುಚಿತ ಮನೋಭಾವ ಒಂದು ರಾಷ್ಟ್ರದ ಬೆಳವಣಿಗೆಗೆ ಮಾರಕ. ದೇಶ ಎಷ್ಟೇ ಅಭಿವೃದ್ದಿ ಕಂಡಿದ್ದರೂ ಶಾಂತಿ ಮತ್ತು ನೆಮ್ಮದಿ ಕಾಣಬೇಕಾದರೆ ದೇಶಕ್ಕೆ ಸರ್ವರಲ್ಲಿ ಸಮಾನತೆ, ಪ್ರೀತಿ, ಗೌರವ ಕಾಣುವ ಪ್ರಜೆಗಳ ನಿರ್ಮಾಣ ಆಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next