ಬೆಂಗಳೂರು: ರಾಜ್ಯದಲ್ಲಿ ತಲಾ 100 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಔಷಧೀಯ ಉತ್ಪನ್ನ ತಯಾರಿಕಾ ಪಾರ್ಕ್ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.
ಬೆಂಗಳೂರಿನ ಬಳಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಚಿಂತಿಸಲಾಗಿದೆ. ಔಷಧೀಯ ಉತ್ಪನ್ನಗಳ ಪಾರ್ಕ್‌ಗೆ ಸೂಕ್ತ ಸ್ಥಳ ಗುರುತಿಸಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೂಲ ಸೌಕರ್ಯ ಕಲ್ಪಿಸಿದರೆ ಶೇ.30 ವೆಚ್ಚ ತಗ್ಗಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಟ್ಯಾಲಿ ಸೊಲ್ಯೂಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಗೋಯೆಂಕಾರಿಗೆ 2017ನೇ ಸಾಲಿನ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ರೈಲು ಸಂಪರ್ಕ: ಬೆಂಗಳೂರು ಹಾಗೂ ರಾಜ್ಯದ ಇತರೆ ಪ್ರದೇಶಗಳಲ್ಲಿ ರೈಲು ಸಂಪರ್ಕಕ್ಕಾಗಿ 30,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ 10,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮೆಟ್ರೋ 2 ಮತ್ತು 3ನೇ ಹಂತಕ್ಕೆ 10,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಉಪನಗರ ರೈಲು ಸಂಪರ್ಕ ಸಂಪೂರ್ಣ ಕಾರ್ಯಾಚರಣೆಗೊಳ್ಳಲಿದೆ. 2,000 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭರತ್ ಗೋಯೆಂಕಾ, “ಉದ್ಯಮಿಗಳ ಸಲಹೆಗಳನ್ನು ಪಡೆಯುವ ಆಡಳಿತವನ್ನು ಉದ್ಯಮ ವಲಯ ನಿರೀಕ್ಷಿಸುತ್ತದೆ. ಜಿಎಸ್‌ಟಿಯು ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ನಿರೀಕ್ಷೆಗಳಿದ್ದು, ತಕ್ಷಣವೇ ಯಾವುದೇ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ. ಬದಲಾವಣೆಗಳ ಬಗ್ಗೆ ನಂಬಿಕೆ ಇರಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ ಮಾತನಾಡಿ, “ದಾಬಸ್‌ಪೇಟೆ ಬಳಿ 1.5 ಎಕರೆ ಪ್ರದೇಶದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ಜಿಎಸ್‌ಟಿಗೆ ಸಂಬಂಧಪಟ್ಟಂತೆ ಉದ್ಯಮಿಗಳಲ್ಲಿನ ಗೊಂದಲಗಳನ್ನು ಜಿಲ್ಲಾ ಮಟ್ಟದಲ್ಲಿ ನಿವಾರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಉಪಾಧ್ಯಕ್ಷ ಸಿ.ಆರ್.ಜನಾರ್ದನ್, ಮಾಜಿ ಅಧ್ಯಕ್ಷ ಎಂ.ಸಿ.ದಿನೇಶ್ ಇದ್ದರು.
ಜಿಎಸ್‌ಟಿ ಬಗ್ಗೆ ಈಗಲೇ ಟೀಕೆ ಬೇಡ. ಹೊಸ ತೆರಿಗೆ ಪದ್ಧತಿ ಜಾರಿಯಾಗಿ 75 ದಿನವಷ್ಟೇ ಕಳೆದಿದೆ. ಜಿಎಸ್‌ಟಿಯಿಂದ ಸಾಕಷ್ಟು ಅನುಕೂಲಗಳಿವೆ. ಯಾವುದೇ ಸಮಸ್ಯೆಗಳಿದ್ದರೂ ಪ್ರಧಾನಿಯವರ ಗಮನ ಸೆಳೆಯಲು ಸಿದ್ಧ. ಕೇಂದ್ರ ಬಜೆಟ್‌ನಲ್ಲಿ ಉದ್ಯಮಕ್ಕೆ ಪೂರಕ ಅಂಶಗಳ ಬಗ್ಗೆ ಎಫ್ಕೆಸಿಸಿಐ ಸಲಹೆ ನೀಡುವುದಾದರೆ ಸ್ವಾಗತ.
-ಅನಂತಕುಮಾರ್, ಕೇಂದ್ರ ಸಚಿವ