Advertisement
ವಿವಾದಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ, ಮುಸ್ಲಿಂ ಬಾಹುಳ್ಯವಿರುವಂಥ ಪ್ರದೇಶದಲ್ಲಿ ಮಸೀದಿ ನಿರ್ಮಿಸಿ ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ.
ರಾಮಮಂದಿರ ಹಾಗೂ ಮಸೀದಿ ಎರಡೂ ಅಕ್ಕ-ಪಕ್ಕ ಇದ್ದರೆ ಅದು ಕೋಮು ಸೌಹಾರ್ದತೆ ಕದಡಬಹುದು. ಮತ್ತೂಮ್ಮೆ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು. ಹೀಗಾಗಿ ಈಗ ರಾಮಜನ್ಮ ಭೂಮಿ ಇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಸೀದಿಗೆ ಸೂಕ್ತ ಸ್ಥಳ ಗುರುತಿಸಿದರೆ ಅಭ್ಯಂತರವಿಲ್ಲ ಎಂದಿರುವ ಶಿಯಾ ಮಂಡಳಿ, ದಶಕಗಳಿಂದ ಇರುವ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಸೂಚನೆ ನೀಡಿದೆ. ಜತೆಗೆ, ಸಂಧಾನ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಸಮಿತಿ ರಚಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆಯೂ ಮಂಡಳಿ ನ್ಯಾಯಾಲಯವನ್ನು ಕೋರಿದೆ. ಆದರೆ ಹಿಂದೂ ಸಂಘಟನೆಗಳು, ಸುನ್ನಿ ಮಂಡಳಿ ಸಹಿತ ಇತರ ಅರ್ಜಿದಾರರು ಕೂಡ ಇದಕ್ಕೆ ಸಮ್ಮತಿಸಿದರೆ ಬಾಬ್ರಿ ಮಸೀದಿ ಅಥವಾ ರಾಮ ಜನ್ಮಭೂಮಿ ವಿವಾದ ಸುಖಾಂತ್ಯಗೊಳ್ಳುವ ಸಾಧ್ಯತೆಗಳಿವೆ.
Related Articles
ಶಿಯಾ ವಕ್ಫ್ ಮಂಡಳಿಯ ಈ 30 ಪುಟಗಳ ಅಫಿದವಿತ್‌ಗೆ ಸುನ್ನಿ ಕೇಂದ್ರೀಯ ವಕ್ಫ್ ಬೋರ್ಡ್ ಒಪ್ಪುತ್ತದಾ ಎಂಬ ಪ್ರಶ್ನೆಯೂ ಎದುರಾಗಿದೆ. ಈ ವಿಚಾರದಲ್ಲಿ ಎರಡೂ ಮಂಡಳಿಗಳ ನಡುವೆ ಭಿನ್ನಾಭಿಪ್ರಾಯ ವಿದೆ. ಸುನ್ನಿ ಬೋರ್ಡ್‌ನ ನಡೆಯನ್ನು ವಿರೋಧಿಸಿರುವ ಶಿಯಾ ಮಂಡಳಿ, “ಬಾಬ್ರಿ ಮಸೀದಿ ಇರುವ ವಿವಾದಿತ ಸ್ಥಳ ತನಗೇ ಸೇರಿದ್ದು, ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಅಧಿಕಾರ ಇರುವುದು ಶಿಯಾ ಮಂಡ ಳಿಗೆ ಮಾತ್ರ’ ಎಂದು ಹೇಳಿದೆ. ಜತೆಗೆ, ನಮ್ಮ ಸಲಹೆಗೆ ಸುನ್ನಿ ಮಂಡಳಿಯೂ ಸಮ್ಮತಿಸಬೇಕು ಎಂದು ಹೇಳಿದೆ.
Advertisement
ತ್ರಿಸದಸ್ಯ ಪೀಠಎರಡು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಅವರನ್ನೊಳಗೊಂಡ ಪೀಠವು, ಅಯೋಧ್ಯೆ ವಿವಾದ ಕುರಿತು ಅರ್ಜಿಗಳ ತ್ವರಿತ ವಿಚಾರಣೆಗೆಂದು ನ್ಯಾ|ದೀಪಕ್ ಮಿಶ್ರಾ, ನ್ಯಾ| ಅಶೋಕ್ ಭೂಷಣ್ ಮತ್ತು ನ್ಯಾ| ಎಸ್.ಎ. ನಜೀರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿತ್ತು. ಜತೆಗೆ, ಆಗಸ್ಟ್ 11ರಿಂದಲೇ ವಿಚಾರಣೆ ಆರಂಭಿಸುವಂತೆ ಹೇಳಿತ್ತು.