Advertisement

ರಂಗ ಕಲಾವಿದರಿಗೆ ಬಡಾವಣೆ ನಿರ್ಮಿಸಿ

01:08 AM Jul 14, 2019 | Team Udayavani |

ಬೆಂಗಳೂರು: ವಾಸಿಸಲು ಮನೆಯಿಲ್ಲದೆ ಬಹಳಷ್ಟು ಮಂದಿ ರಂಗಭೂಮಿ ಕಲಾವಿದರು ಕಣ್ಣೀರಿಡುತ್ತಿದ್ದಾರೆ. ಅಂತಹ ಕಲಾವಿದರ ಬದುಕಿಗೆ ಆಸರೆಯಾಗಲು ಸರ್ಕಾರ “ರಂಗಭೂಮಿ ಬಡಾವಣೆ’ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ ಹಾಗೂ ಬೆಂಗಳೂರು ನಗರ ಜಿಲ್ಲೆಯ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್‌.ಜಿ.ಸೋಮಶೇಖರರಾವ್‌ ಒತ್ತಾಯಿಸಿದರು.

Advertisement

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಶನಿವಾರದಿಂದ ಎರಡು ದಿನಗಳ ಕಾಲ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಂಗಭೂಮಿ ಸೇವೆ ಮಾಡಿ ಬದುಕಿನ ಇಳಿಸಂಜೆಯಲ್ಲಿರುವ ಹಲವು ಹಿರಿಯ ಕಲಾವಿದರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿ ಬದುಕು ಕಳೆಯುತ್ತಿದ್ದಾರೆ. ಅಂತವರಿಗೆ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಿದರು.

ರಂಗಮಂದಿರ ನಿರ್ಮಾಣಕ್ಕೆ ಒತ್ತಾಯ: ರಂಗಭೂಮಿ ಹಲವು ರೀತಿಯ ಬದಲಾವಣೆಗೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಮಾಂತರ ಪ್ರದೇಶಕ್ಕೆ ಅನುಕೂಲವಾಗುವಂತಹ ಸಣ್ಣ ರಂಗಮಂದಿರಗಳ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೆ ಈ ಸಂಬಂಧ ರಂಗತಜ್ಞರನ್ನು ನೇಮಕ ಮಾಡಿ ರಂಗಭೂಮಿ ಬೆಳವಣಿಗೆಗೆ ಮತ್ತಷ್ಟು ಸಹಕಾರ ನೀಡಬೇಕು ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಾಣ್ಣ, ಹಿರಿಯ ನಟ ದತ್ತಣ್ಣ, ರಮಾದೇವಿ, ಹಿರಿಯ ವಿಮರ್ಶಕ ಬೈರಮಂಗಲ ರಾಮೇಗೌಡ, ಎಂ.ತಿಮ್ಮಯ್ಯ ಇದ್ದರು. ಮಧ್ಯಾಹ್ನದಿಂದ ಸಂಜೆ ವರೆಗೂ “ರಂಗಭೂಮಿ ಮತ್ತು ಚಿತ್ರರಂಗ’ ಕುರಿತ ಗೋಷ್ಠಿಗಳು ನಡೆದವು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಬಸವನಗುಡಿಯ ನ್ಯಾಷನಲ್‌ ಕಾಲೇಜು ಸಮೀಪ ಇರುವ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ನಿವೇಶನದಲ್ಲಿ ಭುವನೇಶ್ವರಿ ದೇವಿ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ ಬೆಳಗ್ಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಸದ ತೇಜಸ್ವಿ ಸೂರ್ಯ, ಡಾ.ಜಯಶ್ರೀ ಕಂಬಾರ, ಚಾಮುಂಡಿ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದಾದ ಬಳಿಕ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ರಸ್ತೆಗಳ ಮೂಲಕ ಸಾಗಿ ರವೀಂದ್ರ ಕಲಾ ಕ್ಷೇತ್ರ ತಲುಪಿತು.

Advertisement

ಕಾರು ನಿಲ್ಲಿಸಿ ಸಮಸ್ಯೆ ಆಲಿಸಿದ ಸಿಎಂ: ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ರಸ್ತೆಗಳ ಮೂಲಕ ಸಾಗಿ ಮಿನರ್ವ ವೃತ್ತಕ್ಕೆ ಬರುತ್ತಿದ್ದ ವೇಳೆ, ಮುಖ್ಯಮಂತ್ರಿ ಎಚ್‌.ಡಿ ಕುಮಾರ ಸ್ವಾಮಿ ಅವರು ಕೂಡ ಅದೇ ರಸ್ತೆಯಲ್ಲೆ ಬೆಂಗಾವಲಿನೊಂದಿಗೆ ಸಾಗಿ ಬಂದರು. ದಾರಿಯಲ್ಲೇ ಕಾರು ನಿಲ್ಲಿಸಿದ ಮುಖ್ಯಮಂತ್ರಿಗಳು, ಕನ್ನಡ ಪರ ಹೋರಾಟಗಾರರ ಸಮಸ್ಯೆ ಆಲಿಸಿದರು.

ಸಾಂಸ್ಕೃತಿಕ ಭಯೋತ್ಪಾದನೆಗೆ ಕಡಿವಾಣ ಹಾಕಿ: ಸಾಂಸ್ಕೃತಿಕ ಲೋಕದಲ್ಲಿ ಖೋಟಾ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಅವುಗಳಿಗೆ ಸರ್ಕಾರದ ಅನುದಾನ ಕೊಡುವುದರಿಂದ ಯಾವುದೇ ಪ್ರಯೋಜನವಾಗದು. ಸಾಂಸ್ಕೃತಿಕ ಹೆಸರಿನ ಮುಖವಾಡ ಧರಿಸಿಕೊಂಡು ಸವಲತ್ತು ಪಡೆಯುತ್ತಿರುವವರು ಅನೇಕ ಮಂದಿ ಇದ್ದಾರೆ.

ಇಂತಹ “ಸಂಸ್ಕೃತಿ ಭಯೋತ್ಪಾದನೆ’ಗೆ ಕಡಿವಾಣ ಬೀಳಬೇಕು. ಭ್ರಷ್ಟಾಚಾರಕ್ಕೆ ದಾರಿಯಾಗಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಿಜವಾದ ರಂಗಯಾತ್ರಿಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್‌.ಜಿ. ಸೋಮಶೇಖರರಾವ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next