ದೇವನಹಳ್ಳಿ: ಮಕ್ಕಳಿಗೆ ಚಿಕ್ಕವರಿರುವಾಗಲೇ ಪರಿಸರ ಹಾಗೂ ಕೈತೋಟ ನಿರ್ವಹಣೆ ಕುರಿತು ಅರಿವು ಮೂಡಿಸಬೇಕು. ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಗಳ ಅಂಗಳದಲ್ಲಿ ಕೈತೋಟ ನಿರ್ಮಾಣಕ್ಕೆ ಆದ್ಯತೆ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿ ಇರುವ ಜಿಲ್ಲಾ ಸಂಕೀರ್ಣದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲದಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಉತ್ತೇಜಿಸಲು ತೋಟಗಾರಿಕೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರಿಗೆ ನಿರ್ದೇಶಿಸಿದರು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ಅವಶ್ಯವಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಸ್ಥಳ ಮಂಜೂರು ಮಾಡಿಸಿಕೊಳ್ಳಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಸಂಗ್ರಹ ಹಾಗೂ ಪ್ರತಿ ಅಂಗನವಾಡಿ ಮಕ್ಕಳು ಶಾಲೆಗೆ ದಾಖಲಾಗಿರುವ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಮತ್ತು ಅಂಗನವಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಗಳು ತಲುಪಿದೆಯೇ ಎಂಬುದರ ಖಾತ್ರಿಗಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನರೇಗಾ ಯೋಜನೆ, ಜಿಪಂ ಕಾರ್ಯಕ್ರಮಗಳು, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಕರೀಗೌಡ, ಜಿಪಂ ಮುಖ್ಯ ನಿರ್ವಾಹಣಾಧಿಕಾರಿ ಆರ್. ಲತಾ, ಉಪಕಾರ್ಯದರ್ಶಿ ಕರಿಯಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.