Advertisement

ದಲಿತತ್ವದಿಂದ ದೇಶ ನಿರ್ಮಾಣ ಮಾಡಿ

12:29 PM Oct 06, 2017 | Team Udayavani |

ಹುಬ್ಬಳ್ಳಿ: ಹಿಂದುತ್ವದಿಂದಲ್ಲ, ದಲಿತತ್ವದಿಂದ ದೇಶ ನಿರ್ಮಾಣ ಮಾಡುವುದು ಅವಶ್ಯಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ದಲಿತ ಸಾಹಿತಿ, ಪತ್ರಕರ್ತರ ದ್ವಿತೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಹಿಂದುತ್ವ ತತ್ವದಿಂದ ದೇಶ ನಿರ್ಮಾಣ ಮಾಡಬೇಕೆಂದು ಮೇಲ್ವರ್ಗದ ಕೆಲ ಮುಖಂಡರು ಹೇಳುತ್ತಾರೆ. ಆದರೆ  ದಲಿತತ್ವದಿಂದ ದೇಶವನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಬೇಕು. ನಮ್ಮದು ದಲಿತರ ರಾಷ್ಟ್ರ, ದ್ರಾವಿಡರ ರಾಷ್ಟ್ರ, ದಲಿತತ್ವದಿಂದ ದೇಶ ಕಟ್ಟುವುದು ಅಗತ್ಯ. ನಮಗೆ ಬೇಕಿರುವುದು ಹಿಂದುತ್ವದ ದೇಶವಲ್ಲ, ರಾಷ್ಟ್ರೀಯ ಭಾವೈಕ್ಯತೆಯ ದೇಶ ಎಂದರು. 

ದಲಿತರು ವೈದಿಕ ಸಂಪ್ರದಾಯದಿಂದ ಹೊರಗೆ ಬರಬೇಕು. ವೈದಿಕ ಸಂಪ್ರದಾಯ ಆಚರಣೆ ಮಾಡುವವರೆಗೂ ಶೋಷಣೆ ನಿಲ್ಲುವುದಿಲ್ಲ. ಮನೆಯಲ್ಲಿ ಗದ್ದುಗೆ ಮೇಲಿನ ಎಲ್ಲ ದೇವರ ಮೂರ್ತಿಗಳನ್ನು ಹೊರಗಿಟ್ಟು ದಲಿತರಿಗೆ ನ್ಯಾಯ ನೀಡಿದ ಬುದ್ಧ,  ಬಸವ, ಅಂಬೇಡ್ಕರ ಫೋಟೋಗಳನ್ನು ಮಾತ್ರ ಪೂಜೆ ಮಾಡಬೇಕು.

ಆಗ ಮಾತ್ರ ವಿಚಾರಗಳು ಸೃಷ್ಟಿಯಾಗಲು ಸಾಧ್ಯ ಎಂದು ತಿಳಿಸಿದರು. ಗಣೇಶ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಆದರೆ ದಲಿತ ಕೇರಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಪ್ರೇರೇಪಿಸಲಾಗುತ್ತದೆ. ಇದೆಲ್ಲ ಮತೀಯ ವಾದಿಗಳ ಷಡ್ಯಂತ್ರವಾಗಿದ್ದು, ಇದನ್ನು ದಲಿತರು ಅರಿತುಕೊಳ್ಳಬೇಕು. ಧರ್ಮದ ಆಚರಣೆ ಧಿಕ್ಕರಿಸಬೇಕು ಎಂದರು.

ಮೀಸಲಾತಿ ದಲಿತರಾಗಬೇಡಿ: ಮೀಸಲಾತಿ ದಲಿತರಾಗದೇ ನಾವು ಅಂಬೇಡ್ಕರ ದಲಿತರಾಗಬೇಕು. ಆಗ ಅಂಬೇಡ್ಕರ ಅವರು ಅನುಭವಿಸಿದ ನೋವು ನಮಗೆ ಗೊತ್ತಾಗುತ್ತದೆ. ನಮ್ಮ ಹಿರಿಯರು ಅನುಭವಿಸಿದ ಶೋಷಣೆ ನಮ್ಮ ಅರಿವಿಗೆ ಬರುತ್ತದೆ ಎಂದರು.

Advertisement

ಬುದ್ಧ, ಬಸವಣ್ಣನಿಂದ ನ್ಯಾಯ ಸಿಕ್ಕಿದೆ: ದಲಿತರಿಗೆ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರಿಂದ ನ್ಯಾಯ ಸಿಕ್ಕಿಲ್ಲ. ಹೋಮ ಹವನ, ಗುಡಿಗಳಲ್ಲಿರುವ ಕಲ್ಲುಗಳಿಂದ ನ್ಯಾಯ ಸಿಕ್ಕಿಲ್ಲ. ಆದರೆ ಬುದ್ಧ, ಬಸವನಿಂದ ನ್ಯಾಯ ಸಿಕ್ಕಿದೆ. ಸಹಸ್ರಾರು ವರ್ಷಗಳಿಂದ ಶೋಷಣೆಗೊಳಗಾದವರಿಗೆ ಡಾ| ಬಿ.ಆರ್‌.ಅಂಬೇಡ್ಕರನಿಂದ ಅನ್ನ ಸಿಕ್ಕಿದೆ ಎಂದರು. 

ಹಿರಿಯ ಕವಿ ಡಾ| ಸಿದ್ದಲಿಂಗಯ್ಯ ಮಾತನಾಡಿ, ದಲಿತರು ಕೀಳರಿಮೆಯಿಂದ ಹೊರಬಂದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೇಲ್ವರ್ಗದ ಶಿಕ್ಷಣ ಪದ್ಧತಿಯೇ ದಲಿತರಲ್ಲಿ ಕೀಳರಿಮೆ ಮೂಡಲು ಮುಖ್ಯ ಕಾರಣ. ಪಠ್ಯಪುಸ್ತಕದಲ್ಲಿನ ಪಾಠಗಳು ಮೇಲ್ವರ್ಗದವರ ಪರವಾಗಿವೆ. ಶಿಕ್ಷಣದ ಮಾನದಂಡ ಬದಲಾಗದ ಹೊರತು ಹಿಂದುಳಿದವರಿಗೆ ನ್ಯಾಯ ಸಿಗುವುದಿಲ್ಲ ಎಂದರು. 

ಬಿಡಿಎಸ್‌ಎ ರಾಷ್ಟ್ರೀಯ ಅಧ್ಯಕ್ಷ ಡಾ| ಎಸ್‌.ಪಿ. ಸುಮನಾಕ್ಷರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾರಾಷ್ಟ್ರ ಮಾಜಿ ಸಚಿವ ಬಬನರಾವ್‌ ಫ‌ೂಲಪ್‌, ಜಿತೇಂದರ್‌ ಮನು, ಮಾಜಿ ಸಂಸದ ಐ.ಜಿ. ಸನದಿ, ಉಮೇಶ ಬಮ್ಮಕ್ಕನವರ, ಜಯ ಸುಮನಾಕ್ಷರ, ಎಸ್‌.ಎಚ್‌. ಬಿಸನಳ್ಳಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next