ಮೊಳಕಾಲ್ಮೂರು: ತಾಲೂಕಿನಲ್ಲಿ ಹೆಚ್ಚಿನ ಹಳ್ಳಗಳು ಹರಿಯುತ್ತಿರುವುದರಿಂದ ಅಂತರ್ಜಲ ವೃದ್ಧಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಪಂಚಾಯತ್ ರಾಜ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ರಾಂಪುರ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಮಲ್ಟಿ ಆರ್ ಚೆಕ್ ಡ್ಯಾಂಗೆ ಭೇಟಿ ನೀಡಿ ಪೂರ್ಣಗೊಂಡ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಸತತವಾಗಿ ಮಳೆಯ ಕೊರತೆಯಿದ್ದರೂ ಅಲ್ಪ ಮಳೆಗೆ ಕೆಲವೆಡೆ ನಿರ್ಮಾಣಗೊಂಡ ಮಲ್ಟಿ ಆರ್ ಚೆಕ್ ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣ ನೀರು ಸಂಗ್ರಹವಾಗಿದೆ. ಹೆಚ್ಚಿನ ಹಳ್ಳಗಳು ಹರಿಯುತ್ತಿರುವ ಪರಿಣಾಮ ಮಳೆಯ ನೀರನ್ನು ಹರಿಬಿಡದಂತೆ ಸಂಗ್ರಹಿಸಿ ಅಂತರ್ಜಲ ಹೆಚ್ಚಿಸಲು ಹೆಚ್ಚಿನ ಪ್ರಮಾಣದಲ್ಲಿ ಮಲ್ಟಿ ಆರ್ ಚೆಕ್ ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ನಿವಾರಿಸಬಹುದಾಗಿದೆ ಎಂದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಮಾತನಾಡಿ, ನಿಯಮಾನುಸಾರ ಹೆಚ್ಚಿನ ಮಲ್ಟಿ ಆರ್ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲು ಮೇಲಧಿಕಾರಿಗಳ ಅನುಮೋದನೆ ಪಡೆದು ಈ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಅಲ್ಲಿಂದ ಹಾನಗಲ್ ಗ್ರಾಪಂ ವ್ಯಾಪ್ತಿಯ ಪೂಜಾರಹಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಎಸ್. ತಿಪ್ಪಣ್ಣ ನ ತೋಟದಲ್ಲಿ ಬೆಳೆದ ನುಗ್ಗೇಕಾಯಿ ಬೆಳೆಯ ಬಗ್ಗೆ ಪರಿಶೀಲಿಸಿದರು. ನಿಗಗೊಂಡಿದ್ದ ಹಾನಗಲ್ ಪ್ರವಾಸಿ ಮಂದಿರ , ತಾಲೂಕಿನ ಸಿದ್ದಯ್ಯನಕೋಟೆ , ಮುತ್ತಿಗಾರ ಹಳ್ಳಿ ಗಳಿಗೆ ಭೇಟಿ ನೀಡದೆ ತೆರಳಿದರು.
ಸಂಸದ ಬಿ.ಎನ್. ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯಮ್ಮ ಬಸವರಾಜನ್, ಉಪಾಧ್ಯಕ್ಷೆ ಎನ್. ವೈ. ಸುಶೀಲಮ್ಮ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಸದಸ್ಯರಾದ ಡಾ| ಬಿ. ಯೋಗೇಶ್ ಬಾಬು, ಓಬಳೇಶ್, ಸಿಇಒ ರವೀಂದ್ರ, ತೋಟಗಾರಿಕೆ ಉಪ ನಿರ್ದೇಶಕಿ ಸವಿತಾ, ಜಿಪಂ ಉಪ ಕಾರ್ಯದರ್ಶಿ ಬಸವರಾಜ್, ಜಿಪಂ ಯೋಜನಾಧಿಕಾರಿ ಓಂಕಾರಪ್ಪ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್, ಸದಸ್ಯ ಎ.ಕೆ. ಮಂಜುನಾಥ, ತಾಪಂ ಇಒ ಡಾ| ಶ್ರೀಧರ್ ಐ ಬಾರಕೇರ್ ಇತರರು ಇದ್ದರು.