Advertisement

Hubli: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

02:40 PM Sep 23, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರು (60 ವ) ಸೋಮವಾರ (ಸೆ.23) ಬೆಳಗ್ಗೆ 10 ಗಂಟೆಗೆ ಸುಮಾರಿಗೆ ರಾಮಕೃಷ್ಣ ಚರಣದಲ್ಲಿ ಲೀನರಾದರು.

Advertisement

ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಆಶ್ರಮದ ಆವರಣದಲ್ಲಿ ಇಡಲಾಗಿದೆ. ಈ ಸಂದರ್ಭದಲ್ಲಿ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪರಮಪೂಜ್ಯ ವಿಜಯಾನಂದ ಸರಸ್ವತಿ, ಹುಬ್ಬಳ್ಳಿಯ ಸ್ವಾಮಿ ಬುದ್ಧಿಯೋಗಾನಂದಜಿ ಮಹಾರಾಜ, ತೇಜಸಾನಂದಜಿ ಮಹಾರಾಜ, ಹರಿದ್ವಾರದ ಪ್ರಣವಾನಂದ ಸರಸ್ವತಿ, ರಾಣಿಬೆನ್ನೂರಿನ ಆತ್ಮದೀಪಾನಂದಜಿ ಮಹಾರಾಜ, ಗುರುದೇವ ಚರಣಾನಂದಜಿ ಮಹಾರಾಜ, ಮಾತಾ ಆಶ್ರಮದ ಮಾತಾ ತೇಜೋಮಯಿ, ಅಮೂಲ್ಯಮಯಿ, ಆಶ್ರಮದ ಧರ್ಮದರ್ಶಿ ಸಂಭಾಜಿ ಕಲಾಲ, ಪರಮ ಭಕ್ತರಾದ ಎಂ.ಎ. ಸುಬ್ರಹ್ಮಣ್ಯ, ನಾಗಲಿಂಗ ಮೂರಗಿ, ಸಂಗಣ್ಣ ಬೆಳಗಾವಿ, ಶರಣಪ್ಪ ಕೊಟಗಿ, ಮಹೇಶ ದ್ಯಾವಪ್ಪನವರ, ಕೆಎಲ್‌ಇ ಎಫ್‌ಎಂನ ಗೋಪಾಲ ಹೆಗಡೆ, ಡಾ. ನವೀನ ಕಬ್ಬೂರ, ದಯಾನಂದ ರಾವ್,‌ ಡಾ. ರಾಮು ಮೂಲಗಿ ಸೇರಿದಂತೆ ಆಶ್ರಮದ ಅಪಾರ ಭಕ್ತ ವೃಂದ ಸೇರಿದ್ದಾರೆ. ಮಹಿಳೆಯರು ಸ್ವಾಮೀಜಿಯವರ ಪಾರ್ಥಿವ ಶರೀರ ನೋಡುತ್ತಿದ್ದಂತೆ ಕಣ್ಣೀರಾದರು.

ನಾಳೆ ಅಂತ್ಯಸಂಸ್ಕಾರ

ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ ಅಂತ್ಯಸಂಸ್ಕಾರವು ಸೆ. 24ರಂದು ಬೆಳಗ್ಗೆ 10 ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ರಾಮಕೃಷ್ಣ ಆಶ್ರಮದ ಪರಂಪರೆಯಂತೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.

ಸ್ವಾಮೀಜಿ ಹಿನ್ನೆಲೆ

Advertisement

1964ರಲ್ಲಿ‌ ಜನಿಸಿದ್ದ ಶ್ರೀ ಸ್ವಾಮಿ ರಘುವೀರಾನಂದರು ಬಿಇ ಪದವೀಧರರಾಗಿದ್ದರು. 1988ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಮಕೃಷ್ಣ ಮಠ ಸಂಪರ್ಕಕ್ಕೆ ಬಂದರು. ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್ ಅವರಿಂದ ಸ್ಫೂರ್ತಿಗೊಂಡು ದಿವ್ಯತ್ರಯರ ಸೇವೆಗೆ ತಮ್ಮ ಜೀವನ ಸಮರ್ಪಿಸಿದರು. ಸ್ವಾಮಿಗಳ ಮಾರ್ಗದರ್ಶನದಂತೆ 1992ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆ ಪ್ರಾರಂಭಿಸಿದರು. ಭಜನೆ, ಸಂಕೀರ್ತನೆಗಳ ಮೂಲಕ ದಿವ್ಯತ್ರಯರ ಸಂದೇಶ ಮನೆ ಮನೆಗೂ ಮನಮನಕ್ಕೂ ತಲುಪಿಸುವ ಕಾರ್ಯ ಆರಂಭಿಸಿದರು. 1993ರಲ್ಲಿ ಸ್ವಾಮಿ ಪುರುಷೋತ್ತಮಾನಂದಜಿಯವರು ಪೊನ್ನಂಪೇಟೆಗೆ ಹೋದಾಗ ಅವರೊಂದಿಗೆ ಅಲ್ಲಿಗೆ ಹೋಗಿ ಸೇವೆ ಸಲ್ಲಿಸಿದರು. 1994ರಲ್ಲಿ ಬೆಂಗಳೂರಿಗೆ ಹಿಂದಿರುಗಿ ರಾಮಕೃಷ್ಣ ಯೋಗಾಶ್ರಮ ಪ್ರಾರಂಭಿಸಿದರು. 2000ರಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಬಂದು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿಯವರ ಆದೇಶದಂತೆ ಹುಬ್ಬಳ್ಳಿಗೆ ಬಂದು 2002ರ ಮೇ 13ರಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿಸಿದರು. ಉತ್ತರ ಕರ್ನಾಟಕದಾದ್ಯಂತ ದಿವ್ಯತ್ರಯರ ಸಂದೇಶ ಪ್ರಚಾರ ಮಾಡಿದರು. ತಮ್ಮ ಸುಮಧುರ ಕಂಠದಿಂದ ಭಕ್ತಿಪೂರ್ವಕ ಭಜನೆ, ಉಪನ್ಯಾಸ ಮೂಲಕ ಪ್ರಖ್ಯಾತಿ ಹೊಂದಿದ್ದ ಅಪಾರ ಭಕ್ತ ವೃಂದ ಹೊಂದಿದ್ದರು. ಸ್ವಾಮೀಜಿ ಕಳೆದ ಒಂದೂವರೆ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next