Advertisement

‘ಕಮಿಲ ಬಳಿ ನಮಗೊಂದು ಸೇತುವೆ ನಿರ್ಮಿಸಿ ಕೊಡಿ’

10:05 AM Aug 16, 2018 | Team Udayavani |

ಸುಬ್ರಹ್ಮಣ್ಯ: ಶಾಲೆಗೆ ತೆರಳುವ ದಾರಿ ಮಧ್ಯೆ ಹೊಳೆ ಇದೆ. ಅದಕ್ಕೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಶಾಲಾ ಬಾಲಕಿಯೋರ್ವಳು ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮೊರೆ ಇಟ್ಟಿದ್ದಾಳೆ. ಗುತ್ತಿಗಾರು ಗ್ರಾಮದ ಕಮಿಲದ ಮೊಗ್ರ ಸ.ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಎನ್‌.ಎ. ಅವರು ಮುಖ್ಯ ಮಂತ್ರಿಗೆ ಮನವಿ ಪತ್ರ ನೀಡಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಮಂಗಳವಾರ ಎಚ್‌ ಡಿಕೆ ಭೇಟಿ ಇತ್ತ ವೇಳೆ ಬಾಲಕಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಲಿಖಿತ ಮನವಿ ಮಾಡಿಕೊಂಡಿದ್ದಾಳೆ. ಮುಖ್ಯಮಂತ್ರಿಗಳ ಬಳಿ ಬಂದ ಆಕೆಯಲ್ಲಿ, ‘ಏನು ಪುಟ್ಟ ನಿನ್ನ ಸಮಸ್ಯೆ?’ ಎಂದು ಕೇಳಿದರು. ಆಕೆಯಲ್ಲಿದ್ದ ಸೇತುವೆ ಬೇಡಿಕೆಯ ಮನವಿ ಸ್ವೀಕರಿಸಿದ ಸಿಎಂ, ‘ಆಯಿತಮ್ಮ ನಿನ್ನ ಬೇಡಿಕೆಯನ್ನು ಈಡೇರಿಸಿಕೊಡುತ್ತೇನೆ. ಚೆನ್ನಾಗಿ ಓದು’ ಅಂತ ಬೆನ್ನು ತಟ್ಟಿದರು.

Advertisement

ಇಲ್ಲಿನವರದ್ದು ನಿತ್ಯ ಸಂಕಟ
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಮೊಗ್ರದಲ್ಲಿ ಸರಕಾರಿ ಹಿ.ಪ್ರಾ. ಶಾಲೆಯಿದೆ. 1943ರಲ್ಲಿ ಈ ಶಾಲೆ ಇಲ್ಲಿ ಸ್ಥಾಪನೆಗೊಂಡಿದೆ. ಮಕ್ಕಳ ಕೊರತೆ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಡುತ್ತಲೇ ಇದೆ. ಶಾಲೆಗೆ ತೆರಳುವ ಮಾರ್ಗ ಮಧ್ಯೆ ಇರುವ ಹೊಳೆ ದಾಟಲು ಸಮಸ್ಯೆ ಇರುವ ಕಾರಣದಿಂದ ಹೆತ್ತವರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಹೆತ್ತವರು ಮತ್ತು ಶಾಲಾ ಮಕ್ಕಳು ಮಳೆಗಾಲದ ಅವಧಿಯಲ್ಲಿ ದಿನನಿತ್ಯ ಸಂಕಷ್ಟ ಅನುಭವಿಸಬೇಕು. ಶಾಲೆ ಆರಂಭವಾಗುವ ಮತ್ತು ಬಿಡುವ ಅವಧಿಯಲ್ಲಿ ಹೆತ್ತವರು ತಮ್ಮ ಮಕ್ಕಳೊಂದಿಗೆ ಹೊಳೆ ತನಕ ಬಂದು ಹೊಳೆ ದಾಟಿಸಿ ಕಳಿಸಬೇಕು. ಸಂಜೆ ವೇಳೆ ನಿತ್ಯ ಇಲ್ಲಿ ಬಂದು ಕಾದು ಕುಳಿತುಕೊಳ್ಳಬೇಕು. ಹೀಗಾಗಿ ಇಲ್ಲೊಂದು ಸೇತುವೆ ಅತ್ಯವಶ್ಯಕವಾಗಿ ಆಗಬೇಕಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.

ಭರವಸೆ ಇದೆ
ಸೇತುವೆ ಇಲ್ಲದೆ ಶಾಲೆಗೆ ಹೋಗಲು ಕಷ್ಟವಾಗುತ್ತಿತ್ತು. ಮುಖ್ಯಮಂತ್ರಿಗಳಿಗೆ ಹೇಳಿದರೆ ಮಾಡಿಕೊಡುತ್ತಾರೆ ಎಂದು ಗೊತ್ತಾಯಿತು. ತಂದೆಯೊಂದಿಗೆ ಅವರ ಬಳಿ ಹೋಗಿ ಮನವಿ ಪತ್ರ ಕೊಟ್ಟಿದ್ದೇನೆ. ಸೇತುವೆ ಮಾಡಿಕೊಡುತ್ತೇನೆ ಎಂದಿದ್ದಾರೆ. ಭರವಸೆ ಇಟ್ಟುಕೊಂಡಿದ್ದೇನೆ.
– ಸೃಷ್ಟಿ ಎನ್‌.ಎ. 
   ಪತ್ರ ಬರೆದ ವಿದ್ಯಾರ್ಥಿನಿ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next