Advertisement

ಬುಗುರಿಕಡು-ಹೊಸ್ಕಳಿ: ನದಿ ದಂಡೆ ನಿರ್ಮಾಣಕ್ಕೆ ಬೇಡಿಕೆ

07:24 PM Oct 12, 2020 | mahesh |

ಕುಂದಾಪುರ: ಹೆಮ್ಮಾಡಿ ಹಾಗೂ ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯ ಬುಗುರಿಕಡು, ಹೊಸ್ಕಳಿ, ಕೋಟೆಬೆಟ್ಟು, ಪಡುಮನೆ ಭಾಗದಲ್ಲಿ ಪ್ರತಿ ವರ್ಷ ಹಿಂಗಾರು ಬೆಳೆಗೆ ಉಪ್ಪು ನೀರಿನ ಸಮಸ್ಯೆಯಿದ್ದು, ಇದರಿಂದ ಈ ಪರಿಸರದ 300ಕ್ಕೂ ಅಧಿಕ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಬಾವಿಯ ನೀರಿಗೂ ಇದು ಸಮಸ್ಯೆ ತಂದೊಡ್ಡಿದ್ದು, ಇಲ್ಲಿ ಸುಮಾರು 2-3 ಕಿ.ಮೀ. ನದಿ ದಂಡೆ ನಿರ್ಮಿಸಬೇಕು ಎನ್ನುವ ಬೇಡಿಕೆ ಇಲ್ಲಿನ ರೈತರದ್ದಾಗಿದೆ.

Advertisement

ಬುಗುರಿಕಡು, ಪಡುಮನೆ, ಹೊಸ್ಕಳಿ, ಸಂತೋಷ ನಗರ, ಕೋಟೆಬೆಟ್ಟು, ಜಾಲಾಡಿ, ಮೂವತ್ತುಮುಡಿ ಭಾಗದಲ್ಲಿ ಪ್ರತಿ ವರ್ಷ ನದಿಯ ಉಬ್ಬರದ ಸಮಯದಲ್ಲಿ ಕೃಷಿಗೆ ಉಪ್ಪು ನೀರು ದಾಂಗುಡಿಯಿಡುತ್ತಿದೆ. ಇದರಿಂದ ಈ ಭಾಗದಲ್ಲಿ ಹಿಂಗಾರು ಹಂಗಾಮಿನ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಕೃಷಿ ಸಂಪೂರ್ಣ ನಾಶವಾಗಿ ಹೋಗುತ್ತದೆ. ಇದು ಪ್ರತಿ ವರ್ಷವೂ ನಡೆಯುತ್ತಲೇ ಇದೆ. ಇದರಿಂದ ಹೆಚ್ಚಿನವರು ಒಂದೇ ಬೆಳೆಯನ್ನು ಮಾತ್ರ ಬೆಳೆಯಲು ಆಸಕ್ತಿ ವಹಿಸಿದ್ದು, ಹಿಂಗಾರು ಹಂಗಾಮಿನಲ್ಲಿ ಭತ್ತದ ನಾಟಿಗೆ ಹಿಂದೇಟು ಹಾಕುತ್ತಿದ್ದಾರೆ.

50 ಕ್ಕೂ ಹೆಚ್ಚು ಎಕರೆ
ಮೂವತ್ತುಮುಡಿಯಿಂದ ಜಾಲಾಡಿ, ಬುಗುರಿಕಡು, ಹೊಸ್ಕಳಿಯವರೆಗೆ ಸುಮಾರು 50ಕ್ಕೂ ಮಿಕ್ಕಿ ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮಂದಿ ರೈತರು ಕೃಷಿಯನ್ನೇ ನೆಚ್ಚಿಕೊಂಡಿದ್ದು, ಇವರಿಗೆಲ್ಲ ಉಪ್ಪು ನೀರಿನ ಸಮಸ್ಯೆಯಿಂದಾಗಿ ಭಾರೀ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಇದಲ್ಲದೆ ಕಬ್ಬು, ಧವಸ, ಧಾನ್ಯ, ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಅದರಲ್ಲೂ ಹಿಂಗಾರು ಹಂಗಾಮಿನ ಮಾರಣಕಟ್ಟೆ ಹಬ್ಬ ನಡೆಯುವ ಜನವರಿ ಸಮಯದಲ್ಲಿ ಭತ್ತದ ನಾಟಿ ಮಾಡಿರುವ ಹತ್ತಾರು ಎಕರೆ ಗದ್ದೆಗೆ ಒಮ್ಮೆಲೆ ಉಪ್ಪು ನೀರು ನುಗ್ಗಿ, ಭತ್ತದ ಕೃಷಿಯನ್ನೇ ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತದೆ.

ಬಾವಿ ನೀರು ಉಪ್ಪು
ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಕೃಷಿಗೆ ಹಾನಿಯಾಗುವುದು ಮಾತ್ರವಲ್ಲದೆ, ಸಂತೋಷನಗರ, ಕೋಟೆಬೆಟ್ಟು, ಹೊಸ್ಕಳಿ, ಪಡುಮನೆ ಭಾಗದ ಅನೇಕ ಮನೆಗಳ ಬಾವಿ ನೀರಿಗೂ ಉಪ್ಪು ನೀರಿನ ಪ್ರಭಾವದಿಂದ ಕುಡಿಯಲು ಯೋಗ್ಯವಲ್ಲದಂತಾಗುತ್ತದೆ. ಇದಕ್ಕೆ ಇಲ್ಲಿ ನದಿ ದಂಡೆ ನಿರ್ಮಿಸಿದರೆ ಕೃಷಿಗೂ ಪೂರಕ, ಮಾತ್ರವಲ್ಲದೆ ಅನೇಕ ಮನೆಗಳ ಬಾವಿ ನೀರು ಕೂಡ ಕುಡಿಯಲು ಬಳಸಬಹುದು ಎನ್ನುವುದು ಕೃಷಿಕರಾದ ಬುಗುರಿಕಡುವಿನ ರವಿ ಹೇಳುತ್ತಾರೆ.

ರಿಂಗ್‌ ರೋಡ್‌ಗೂ ಬೇಡಿಕೆ
ಬುಗುರಿಕಡು, ಹೊಸ್ಕಳಿ ಭಾಗದ ಒಳ ಪ್ರದೇಶಕ್ಕೆ ಸರಿಯಾದ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಇಲ್ಲಿನ ನೂರಾರು ಮಂದಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. 2-3 ಕಿ.ಮೀ. ನದಿ ದಂಡೆ ನಿರ್ಮಿಸಿ, ಅದನ್ನೇ ರಿಂಗ್‌ ರೋಡ್‌ ಆಗಿ ಪರಿವರ್ತಿಸಬಹುದು. ಮೂವತ್ತುಮುಡಿಯಿಂದ ಆರಂಭಗೊಂಡು ಬುಗುರಿಕಡು, ಹೊಸ್ಕಳಿ, ಸಂತೋಷನಗರ, ಕೋಟೆಬೆಟ್ಟು, ಹೊಸ್ಕಳಿ, ಜಾಲಾಡಿಯವರೆಗೆ ರಿಂಗ್‌ ರೋಡ್‌ ಆಗಿ ನಿರ್ಮಿಸಿದರೆ ಅನೇಕ ಮಂದಿಗೆ ಬಹಳಷ್ಟು ಅನುಕೂಲವಾಗಲಿದೆ. ಇದರಿಂದ ಕೃಷಿಗೆ ಬೇಕಾದ ಗೊಬ್ಬರ, ಕೃಷಿ ಯಂತ್ರೋಪಕರಣಗಳು ಬರಲು ಸಹ ಸಹಾಯಕವಾಗಲಿದೆ ಎನ್ನುವುದು ಇಲ್ಲಿನ ರೈತರ ಅಭಿಪ್ರಾಯವಾಗಿದೆ.

Advertisement

ಶಾಸಕರಿಗೆ ಮನವಿ
ಬುಗರಿಕಡು, ಹೊಸ್ಕಳಿ ಭಾಗದ ರೈತರಿಗೆ ಉಪ್ಪು ನೀರಿನ ಹಾವಳಿಯು ಪ್ರತಿ ವರ್ಷವೂ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ನದಿ ದಂಡೆಯೊಂದು ನಿರ್ಮಿಸಿದರೆ ಬಹಳಷ್ಟು ಪ್ರಯೋಜನವಾಗಲಿದೆ. ಈ ಬಗ್ಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದೇವೆ. ಮಾಡಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ. – ಆನಂದ ಪಡುಮನೆ, ಬುಗುರಿಕಡು

ನದಿದಂಡೆಗೆ ಪ್ರಯತ್ನ
ಬುಗುರಿಕಡು, ಹೊಸ್ಕಳಿ ಭಾಗದ ಜನರು ಉಪ್ಪು ನೀರಿನಿಂದಾಗಿ ಕೃಷಿಗೆ ಹಾನಿಯಾಗುತ್ತಿರುವುದರ ಬಗ್ಗೆ, ಅಲ್ಲಿಗೆ ನದಿ ದಂಡೆ ಬೇಕು ಎನ್ನುವ ಬೇಡಿಕೆಯನ್ನು ಸಲ್ಲಿಸಿದ್ದು, ಈ ಬಗ್ಗೆ ಗಮನದಲ್ಲಿದ್ದು, ಮುಂದಿನ ದಿನಗಳಲ್ಲಿ ನದಿ ದಂಡೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಶಾಸಕರಿಗೆ ಮನವಿ
ಬುಗರಿಕಡು, ಹೊಸ್ಕಳಿ ಭಾಗದ ರೈತರಿಗೆ ಉಪ್ಪು ನೀರಿನ ಹಾವಳಿಯು ಪ್ರತಿ ವರ್ಷವೂ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ನದಿ ದಂಡೆಯೊಂದು ನಿರ್ಮಿಸಿದರೆ ಬಹಳಷ್ಟು ಪ್ರಯೋಜನವಾಗಲಿದೆ. ಈ ಬಗ್ಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದೇವೆ. ಮಾಡಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ. – ಆನಂದ ಪಡುಮನೆ, ಬುಗುರಿಕಡು

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next