Advertisement

ಬಫ‌ರ್‌ಝೋನ್‌ ವ್ಯಾಪ್ತಿ ಸಡಿಲಕ್ಕೆ ಚಿಂತನೆ

01:02 PM Sep 01, 2018 | Team Udayavani |

ಬೆಂಗಳೂರು: ನಗರದ ಕೆರೆ ಹಾಗೂ ರಾಜ ಕಾಲುವೆಗಳ ಸುತ್ತ 25 ಮೀಟರ್‌ನಿಂದ 75 ಮೀಟರ್‌ ವರೆಗೆ ನಿರ್ಬಂಧಿತ ಪ್ರದೇಶ (ಬಫ‌ರ್‌ ಝೋನ್‌) ಕಾಯ್ದಿರಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಧ್ಯಂತರ ಆದೇಶ ನೀಡಿದ್ದರೂ ಬಫ‌ರ್‌ ಝೋನ್‌ ಮಿತಿ ಸಡಿಲಿಸಲು ಸರ್ಕಾರ ಚಿಂತಿಸಿದಂತಿದ್ದು, ಮತ್ತೆ ಕೆರೆ, ಕಾಲುವೆಗಳ ಸುತ್ತಮುತ್ತ ಹೊಸ ಕಟ್ಟಡಗಳು ತಲೆಯೆತ್ತುವವೇ ಎಂಬ ಆತಂಕ ಎದುರಾಗಿದೆ.

Advertisement

ಕಾನ್ಫಿಡರೇಷನ್‌ ಆಫ್ ರಿಯಲ್‌ ಎಸ್ಟೇಟ್‌, ಡೆವಲಪರ್ ಅಸೋಸಿಯೇಷನ್‌ ಆಫ್ ಇಂಡಿಯಾ (ಕ್ರೆಡಾಯ್‌) ಒಕ್ಕೂಟದ ಪ್ರಮುಖರ ಭೇಟಿ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು
ಎನ್‌ಜಿಟಿ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲದ ಕಾರಣ ನಿರ್ಬಂಧ ಮಿತಿಯನ್ನು ಸಡಿಲಿಸಲು ಸರ್ಕಾರ ಚಿಂತಿಸಿದೆ
ಎಂಬುದಾಗಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ನಗರದಲ್ಲಿ ಕೆರೆಗಳ ಮಾಲಿನ್ಯ, ನಾಶ, ಒತ್ತುವರಿ ಹಾಗೂ ರಾಜ ಕಾಲುವೆಗಳ ಒತ್ತುವರಿ, ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ನಗರದ ಸುಸ್ಥಿರ ಬೆಳವಣಿಗೆ ಜತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಸಲುವಾಗಿ ಎನ್‌ಜಿಟಿ ಕೆರೆ, ಕಾಲುವೆಗಳ ಸುತ್ತ ಬಫ‌ರ್‌ ಝೋನ್‌ ವ್ಯಾಪ್ತಿ ನಿಗದಿಪಡಿಸಿತ್ತು.

ಕೆರೆಯ ಅಂಚಿನಿಂದ 75 ಮೀಟರ್‌, ಪ್ರಾಥಮಿಕ ಕಾಲುವೆಯ ಅಂಚಿನಿಂದ 50 ಮೀಟರ್‌, ದ್ವಿತೀಯ ಹಂತದ ಕಾಲುವೆಯ ತಡೆಗೋಡೆಯಿಂದ 35 ಮೀಟರ್‌ ಹಾಗೂ ತೃತೀಯ ಹಂತದ ಕಾಲುವೆ ಅಂಚಿನಿಂದ 25 ಮೀಟರ್‌ ಪ್ರದೇಶವನ್ನು ಬಫ‌ರ್‌
ಝೋನ್‌ ಎಂದು ಕಾಯ್ದಿರಿಸುವಂತೆ ಎನ್‌ಜಿಟಿ ಮಧ್ಯಂತರ ಆದೇಶ ಹೊರಡಿಸಿತ್ತು. 

ಈ ಬಫ‌ರ್‌ ಝೋನ್‌ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆಯೂ ಆದೇಶದಲ್ಲಿ ತಿಳಿಸಿತ್ತು. ಬಫ‌ರ್‌ ಜೋನ್‌ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿದ್ದು, ಪರಿಸರವಾದಿಗಳಲ್ಲಿ ತುಸು ಸಮಾಧಾನ ತಂದಿತ್ತು. ಇದೀಗ ಉಪಮುಖ್ಯಮಂತ್ರಿಗಳ ಹೇಳಿಕೆಯಿಂದಾಗಿ ಮತ್ತೆ ಬಫ‌ರ್‌ ಝೋನ್‌ನಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗುವ ಆತಂಕ ಎದುರಾಗಿದೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಕ್ರೆಡಾಯ್‌ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಕೆರೆ, ರಾಜಕಾಲುವೆಗಳಿಗೆ ಬಫ‌ರ್‌ ಝೋನ್‌ ನಿಗದಿಪಡಿಸಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ಆದೇಶವನ್ನು ಕಾನೂನಾತ್ಮಕವಾಗಿ ಸಡಿಲಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು. ಬಫ‌ರ್‌ಝೋನ್‌ ನಿಗದಿಗೆ ಸಂಬಂಧಿಸಿದಂತೆ ಎನ್‌ಜಿಟಿ ನೀಡಿರುವ ಆದೇಶ ಪಾಲಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಡಿಲಗೊಳಿಸ ಬೇಕಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಕೆರೆ, ರಾಜಕಾಲುವೆಗಳ ಸುತ್ತ 25ರಿಂದ 75 ಮೀಟರ್‌ವರೆಗೆ ಬಫ‌ರ್‌ಝೋನ್‌ ನಿಗದಿಪಡಿಸಿ ಹಸಿರು ನ್ಯಾಯಾಧಿಕರಣ ಆದೇಶ ಹೊರಡಿಸಿದೆ. ದೇಶದ ಬೇರಾವುದೇ ನಗರಗಳಿಗೂ ಈ ನಿಯಮ ವಿಧಿಸಿಲ್ಲ. ಕೇವಲ ಬೆಂಗಳೂರಿಗೆ ಸೀಮಿತವಾಗಿ ಈ ಆದೇಶವಿದೆ ಎಂದರು.
 
ಈ ಎಲ್ಲಾ ಕಾರಣಗಳಿಂದಾಗಿ ಬಫ‌ರ್‌ಝೋನ್‌ಗೆ ಸಂಬಂಧಿಸಿದಂತೆ ಎನ್‌ಜಿಟಿ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸುವಂತೆ ಕ್ರೆಡಾಯ್‌ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಅದರಂತೆ ಕಾನೂನಾತ್ಮಕವಾಗಿ ಪರಿಶೀಲಿಸಿ ನಿರ್ಬಂಧ ಸಡಿಲಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು

ದುರದೃಷ್ಟಕರ ಚಿಂತನೆ ನಗರದ ಕೆರೆ, ಕಾಲುವೆಗಳನ್ನು ಉಳಿಸುವ ಜತೆಗೆ ಪರಿಸರ ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕೆರೆ , ಕಾಲುವೆಗಳ ಸುತ್ತ ಬಫ‌ರ್‌ ಜೋನ್‌ ವ್ಯಾಪ್ತಿ ನಿಗದಿಪಡಿಸಿ ಮಧ್ಯಂತರ
ಆದೇಶ ನೀಡಿತ್ತು. ಆ ನಿರ್ಬಂಧ ಮಿತಿ ಸಡಿಲಿಸಲು ಪ್ರಯತ್ನಿಸುವುದಾಗಿ ಸರ್ಕಾರ ಚಿಂತನೆ ನಡೆಸಿರುವುದು ದುರದೃಷ್ಟಕರ ಎಂದು “ನಮ್ಮ ಬೆಂಗಳೂರು ಪ್ರತಿಷ್ಠಾನ’ದ ಸಿಇಒ ಶ್ರೀಧರ್‌ ಪಬ್ಬಿಸೆಟ್ಟಿ “ಉದಯವಾಣಿ’ಗೆ ತಿಳಿಸಿದರು.

ಬೆಳ್ಳಂದೂರು ಕೆರೆ ಅಂಗಳದಲ್ಲಿ ಡೆವಲಪರ್‌ ಸಂಸ್ಥೆ ಅಪಾರ್ಟ್‌ಮೆಂಟ್‌ ನಿರ್ಮಾಣ ಪ್ರಶ್ನಿಸಿ ಪ್ರತಿಷ್ಠಾನವು ಕಾನೂನು ಹೋರಾಟ ಆರಂಭಿಸಿತ್ತು. ಅದರಂತೆ ಎನ್‌ಜಿಟಿ ಮಹತ್ತರ ತೀರ್ಪು ನೀಡಿತ್ತು. ಇದೀಗ ಸರ್ಕಾರ ಬಫ‌ರ್‌ ಝೋನ್‌ ಮಿತಿಯನ್ನು ಸಡಿಲಿಸಲು ಮುಂದಾದರೆ ಮತ್ತೆ ಹೊಸ ಕಟ್ಟಡಗಳು ನಿರ್ಮಾಣವಾಗುವ ಸಾಧ್ಯತೆ ಇದೆ. ಪ್ರಕರಣ ನ್ಯಾಯಾಲಯ ದಲ್ಲಿರುವಾಗ ಈ ರೀತಿ ಚಿಂತನೆ ನಡೆಸಿರುವುದು ಸೂಕ್ತವೆನಿಸದು. ರಾಜ್ಯ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿದರೆ ಮುಂದೆ ಸೂಕ್ತ ವಾದವನ್ನು ಪ್ರತಿಷ್ಠಾನ ಮಂಡಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next