ಮಹಾರಾಷ್ಟ್ರ: ಎಮ್ಮೆಯೊಂದು 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಂಗಳಸೂತ್ರವನ್ನು ನುಂಗಿದ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಭಾನುವಾರ (ಸೆ.1 ರಂದು) ನಡೆದಿದೆ.
ರಾಮಹರಿ ಎನ್ನುವ ರೈತನ ಪತ್ನಿ ಸ್ನಾನಕ್ಕೆ ಹೋಗುವಾಗ ಸೋಯಾಬೀನ್ ಮತ್ತು ಕಡಲೆಕಾಳು ತುಂಬಿದ್ದ ತಟ್ಟೆಯಲ್ಲಿ ಮಂಗಳಸೂತ್ರವನ್ನು ಬಚ್ಚಿಟ್ಟಿದ್ದರು. ಮಂಗಳಸೂತ್ರದ ಬಗ್ಗೆ ಮರೆತು ಹೋಗಿದ್ದ ಮಹಿಳೆ ಅದೇ ತಟ್ಟೆಯನ್ನು ಎಮ್ಮೆಯ ಮುಂದೆ ಇಟ್ಟು ಮನೆಯ ಕೆಲಸದಲ್ಲಿ ನಿರತರಾಗಿದ್ದಾರೆ.
ಕೆಲ ಸಮಯದ ಬಳಿಕ ಮಂಗಳಸೂತ್ರದ ಬಗ್ಗೆ ರಾಮಹರಿ ಅವರ ಪತ್ನಿಗೆ ನೆನಪಾಗಿದೆ. ಎಲ್ಲಾ ಕಡೆ ಹುಡುಕಿದ ಬಳಿಕ ಕೊನೆಗೆ ಸೋಯಾಬೀನ್ ಮತ್ತು ಕಡಲೆಕಾಳು ತುಂಬಿದ ತಟ್ಟೆಯಲ್ಲಿ ಮಂಗಳಸೂತ್ರ ಇಟ್ಟ ನೆನಪಾಗಿದೆ. ಎಮ್ಮೆ ಸೋಯಾಬೀನ್ ಮತ್ತು ಕಡಲೆಕಾಳು ತಿಂದಿದ್ದು, ಪ್ಲೇಟ್ ಖಾಲಿ ಆಗಿರುವುದನ್ನು ನೋಡಿ ಮಂಗಳಸೂತ್ರದ ಬಗ್ಗೆ ಮನೆಯವರಿಗೆ ಮಹಿಳೆ ವಿಷಯವನ್ನು ಹೇಳಿದ್ದಾರೆ.
ನಂತರ ಸ್ಥಳೀಯ ಪಶುವೈದ್ಯಾಧಿಕಾರಿ ಬಾಳಾಸಾಹೇಬ ಕೌಂಡನೆ ಅವರನ್ನು ಕರೆದಿದ್ದು, ವೈದ್ಯರು ಮೆಟಲ್ ಡಿಟೆಕ್ಟರ್ ಮೂಲಕ ಎಮ್ಮೆಯ ಹೊಟ್ಟೆಯನ್ನು ಪರೀಕ್ಷಿಸಿದಾಗ, ಅದರ ಹೊಟ್ಟೆಯೊಳಗೆ ಮಂಗಳಸೂತ್ರ ಇರುವುದು ಗೊತ್ತಾಗಿದೆ.
ಕೊನೆಗೆ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ನಂತರ ಪ್ರಾಣಿಯ ಹೊಟ್ಟೆಯಿಂದ ಚಿನ್ನದ ಮಂಗಳಸೂತ್ರವನ್ನು ಹೊರಗೆ ತೆಗೆಯಲಾಗಿದೆ.