Advertisement

ಬಜೆಟ್‌: ಕ್ರೀಡೆಗೆ ಅನುದಾನ ಖೋತಾ

06:10 AM Feb 17, 2018 | Team Udayavani |

ಬೆಂಗಳೂರು: ಪ್ರಸ್ತುತ ವರ್ಷದ ರಾಜ್ಯ ಬಜೆಟ್‌ನಲ್ಲಿ ಕ್ರೀಡೆಗೆ ಒಟ್ಟಾರೆ 237 ಕೋಟಿ ರೂ. ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಕಡಿಮೆ. 2016ರಲ್ಲಿ ನೀಡಿದ್ದು 284 ಕೋಟಿ ರೂ.. ಇದಕ್ಕೆ ಹೋಲಿಸಿದರೆ ಈ ಸಲ 47 ಕೋಟಿ ರೂ. ಕಡಿಮೆ ನೀಡಲಾಗಿದೆ. ಮಹಿಳಾ ಕ್ರೀಡಾ ವಸತಿ ನಿಲಯಗಳ ಸ್ಥಾಪನೆ, ದಸರಾ ಕ್ರೀಡಾಕೂಟವನ್ನು ಸಿ.ಎಂ. ಕಪ್‌ ಆಗಿ ಆಯೋಜಿಸಲು ನಿರ್ಧಾರ, ಕ್ರೀಡಾ ವಿವಿ ಸ್ಥಾಪನೆ ಮುಖ್ಯಾಂಶಗಳಾಗಿದ್ದನ್ನು ಹೊರತುಪಡಿಸಿದರೆ ಕ್ರೀಡೆಗೆ ಹೇಳಿಕೊಳ್ಳುವಂತಹ ಪ್ರಮುಖ ಘೋಷಣೆಗಳಿಲ್ಲ.

Advertisement

ಪ್ರತ್ಯೇಕ ವಸತಿ ನಿಲಯ
ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. 2018-19ನೇ ಸಾಲಿನಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಪ್ರತ್ಯೇಕ ಮಹಿಳಾ ವಸತಿ ನಿಲಯಗಳನ್ನು ಆರಂಭಿಸಲಾಗುತ್ತದೆ.

ದಸರಾ ವೇಳೆ ಸಿ.ಎಂ.ಕಪ್‌
ನಾಡಹಬ್ಬ ದಸರಾ ಪ್ರಯುಕ್ತ ಮೈಸೂರಿನಲ್ಲಿ ಪ್ರತಿ ವರ್ಷ ಆಯೋಜಿಸುವ ರಾಜ್ಯ ದಸರಾ ಕ್ರೀಡಾಕೂಟವನ್ನು ರಾಷ್ಟ್ರೀಯ ಕ್ರೀಡಾಕೂಟದಂತೆ ವಿವಿಧ ಹಂತಗಳಲ್ಲಿ ಆಯೋಜಿಸಲು ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟವನ್ನು ದಸರಾ ಸಿ.ಎಂ. ಕಪ್‌ ಆಗಿ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಲು 7 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಜತೆಗೆ 365 ದಿನವೂ ಕಾರ್ಯ ನಿರ್ವಹಿಸುವ ಯುವ ಸಹಾಯವಾಣಿ ತೆರೆಯಲಾಗುತ್ತಿದೆ.

ಕ್ರೀಡಾ ವಿವಿ ಸ್ಥಾಪನೆ
ರಾಜ್ಯದಲ್ಲಿ ಕ್ರೀಡಾ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಪರಿಣಿತ ಮಾನವ ಸಂಪನ್ಮೂಲದ ಅಭಿವೃದ್ಧಿ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ಕ್ರೀಡಾ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸಲಾಗುತ್ತದೆ.

ಕರ್ನಾಟಕ ಕುಸ್ತಿ ಹಬ್ಬ
ಗ್ರಾಮೀಣ ಕ್ರೀಡೆ ಕುಸ್ತಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರತಿವರ್ಷ ವಿಶ್ವಮಟ್ಟದ ಕರ್ನಾಟಕ ಕುಸ್ತಿ ಆಯೋಜಿಸಲು ನಿರ್ಧರಿಸಲಾಗಿದೆ. ದೇವನಹಳ್ಳಿ, ಎಚ್‌ಎಸ್‌ಆರ್‌ ಬಡಾವಣೆ, ತಾವರೆಕೆರೆ ಹಾಗೂ ವರ್ತೂರುಗಳಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳನ್ನು 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹೊರಾಂಗಣ ಜಿಮ್‌ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next