ನವದೆಹಲಿ: ಮುಂದಿನ ಹಣಕಾಸು ವರ್ಷಕ್ಕೆ ಅಗತ್ಯವಾಗಿರುವ ಬಜೆಟನ್ನು ಲೋಕಸಭೆ ಬುಧವಾರ ಗದ್ದಲದ ನಡುವೆಯೇ ಅಂಗೀಕರಿಸಿದೆ. ಪ್ರತಿಪಕ್ಷಗಳು ಮತ್ತು ಎನ್‌ಡಿಎ ಅಂಗಪಕ್ಷಗಳು ವಿವಿಧ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾಹಲ ನಡೆಸುತ್ತಿ ರುವಂತೆಯೇ 89.25ಲಕ್ಷ ಕೋಟಿ ಮೊತ್ತದ ಬಜೆಟ್ ಹಾಗೂ 2018ರ ಹಣಕಾಸು ಮಸೂದೆಗೆ ಚರ್ಚೆಯಿಲ್ಲದೆ ಒಪ್ಪಿಗೆ ಸೂಚಿಸಲಾಗಿದೆ. ಅದಕ್ಕಾಗಿಯೇ ಬಿಜೆಪಿ ತನ್ನ ಲೋಕಸಭಾ ಸದಸ್ಯರಿಗೆ ಮೂರು ದಿನಗಳ ಕಾಲ ಸದನದಲ್ಲಿ ಹಾಜರಿರಬೇಕು ಎಂದು ವಿಪ್ ಹೊರಡಿಸಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 21 ತಿದ್ದುಪಡಿಗಳನ್ನು ಒಳಗೊಂಡಿರುವ 2018-19ನೇ ಸಾಲಿನ ಹಣಕಾಸು ಮಸೂದೆಗೆ ಧ್ವನಿಮತದ ಮೂಲಕ ಅನುಮೋದನೆ ಪಡೆದುಕೊಳ್ಳ ಲಾಯಿತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಐದನೇ ಮತ್ತು ಕೊನೆಯ ಬಜೆಟ್ ಪ್ರಕ್ರಿಯೆ ಕೊನೆಗೊಂಡಂತಾಗಿದೆ. ಆದರೆ ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದು ಗದ್ದಲ ಎಬ್ಬಿಸಿದವು. ಪ್ರತಿಪಕ್ಷ ಕಾಂಗ್ರೆಸ್ ಜತೆ ಎನ್‌ಸಿಪಿ ಮತ್ತು ಟಿಎಂಸಿ ಸಭಾತ್ಯಾಗ ಮಾಡಿದವು. ಇದಕ್ಕೆ ತೆಲಗು ಪಕ್ಷಗಳಾದ ಟಿಡಿಪಿ, ಟಿಆರ್‌ಎಸ್ ಮತ್ತು ವೈಎಸ್‌ಆರ್-ಕಾಂಗ್ರೆಸ್ ಕೂಡ ಘೋಷಣೆ ಕೂಗಿ ಆಕ್ಷೇಪಿಸಿದವು. ಮಸೂದೆ ರಾಜ್ಯಸಭೆಯಲ್ಲೂ ಮಂಡನೆಯಾಗಿದೆ.
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿಯೂ ಸತತ ಎಂಟನೇ ದಿನವೂ ಯಾವುದೇ ರೀತಿಯ ಕಲಾಪ ನಡೆಸಲು ಸಾಧ್ಯವಾಗದೇ ಇರುವುದರಿಂದ ಗುರುವಾರಕ್ಕೆ ಮುಂದೂಡಲಾಗಿದೆ.