Advertisement

ರಾಜ್ಯದಲ್ಲಿ ಪರಿಸರ ಹಾನಿ ತುಂಬಲು ಪರಿಸರ ಬಜೆಟ್‌ ಪ್ರಾರಂಭ : ಸಿಎಂ ಘೋಷಣೆ

06:02 PM Sep 11, 2021 | Team Udayavani |

ಬೆಂಗಳೂರು : “ರಾಜ್ಯದಲ್ಲಿ ಪರಿಸರ ಹಾನಿ ತುಂಬಲು ಮುಂಬರುವ ದಿನಗಳಲ್ಲಿ ಪರಿಸರ ಬಜೆಟ್‌ ಪ್ರಾರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

Advertisement

ನಗರದ ಅರಣ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ರಾಜ್ಯದಲ್ಲಿ ನಾಶವಾಗಿರುವ ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಪ್ರಾರಂಭಿಸಬೇಕು. ಆಗ ಹಸಿರಿನ ಕೊರತೆ ಎಷ್ಟು ಎಂದೂ ಗೊತ್ತಾಗುತ್ತದೆ. ಇದಕ್ಕೆ ಪೂರಕವಾಗಿ ಪರಿಸರ ಆಯವ್ಯಯವನ್ನು ಪ್ರಾರಂಭಿಸಲಾಗುವುದು. ಆಗ ಮಾತ್ರ ಈ ನಷ್ಟ ತಗ್ಗಿಸಲು ಸಾಧ್ಯ ಎಂದು ಹೇಳಿದರು.

ಎರಡು ಸಾವಿರ ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯವನ್ನು ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ. ಪರಿಸರ ಹಾನಿಯ ವೇಗ ಅಷ್ಟು ತೀವ್ರಗೊಂಡಿದೆ. ಇದು ನಿಜಕ್ಕೂ ಭಯಾನಕ ಸಂಗತಿ. ಮುಂದಿನ ಜನಾಂಗಕ್ಕಾಗಿ ಅರಣ್ಯ ಸಂರಕ್ಷಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ. ಅವಶ್ಯಕತೆಗಿಂತ ಹೆಚ್ಚು ನಿಸರ್ಗವನ್ನು ನಾಶಪಡಿಸಿದರೆ, ಭವಿಷ್ಯದಿಂದ ಕಳ್ಳತನ ಮಾಡಿದಂತೆ. ನಮ್ಮ ಹಿರಿಯರು ಇದನ್ನು ಉಳಿಸಿದ್ದರಿಂದ ಈ ಸಂಪತ್ತನ್ನು ನಾವು ಅನುಭವಿಸುತ್ತಿದ್ದೇವೆ. ಮುಂದಿನ ಜನಾಂಗದ ಪಾಲನ್ನು ನಾವೇ ಬಳಕೆ ಮಾಡಬಾರದು ಎಂಬ ಅರಿವಿನಿಂದ ಇಲಾಖೆ ಕೆಲಸ ಮಾಡಬೇಕು. ಆಗ ಮಾತ್ರ ಹುತಾತ್ಮರ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ :‘ಪ್ರಾರ್ಥನೆಗೆ ತೆರಳಿದವರ ಮೇಲೆ ದಾಳಿ ಖಂಡನೀಯ’ : ಕ್ರೈಸ್ತ ನಾಯಕಿ ವೆರೋನಿಕಾ ಕರ್ನೆಲಿಯೋ

ಅರಣ್ಯ ಸಂರಕ್ಷಣೆಗೆ ಅನೇಕರು ಹುತಾತ್ಮರಾಗಿ¨ªಾರೆ. ರಾಜ್ಯದ 43 ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿ ಅರಣ್ಯವಿದೆ. ಅಂದರೆ ಒಟ್ಟು ಭೌಗೋಳಿಕ ಪ್ರದೇಶದ ಶೇ 21.5ರಷ್ಟಿದ್ದು, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಶೇ. 10ರಷ್ಟು ಕಡಿಮೆ ಇದೆ. ಕಾಡುಗಳ್ಳರನ್ನು ನಿಯಂತ್ರಿಸಿ, ಕಾಡು, ಉಳಿಸಿ ಬೆಳೆಸುವ ಕ್ರಮಗಳನ್ನು ಕೈಗೊಳ್ಳಬೇಕು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಬೇಕು. ಗಡಿಗಳಲ್ಲಿ ನಾಗರಿಕರೂ ಸಹ ಪ್ರಾಣ ತೆತ್ತಿ¨ªಾರೆ.ಅವರ ಪ್ರಾಣ ಉಳಿಸುವುದೂ ಮುಖ್ಯ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಇಲಾಖೆಯ ಕಾರ್ಯಚಟುವಟಿಕೆ ವಿಸ್ತರಿಸಲಿ. ದಕ್ಷತೆಯಿಂದ ಕಾಡನ್ನು ಉಳಿಸುವ ಕೆಲಸವಾಗಲಿ. ಕರ್ತವ್ಯದಲ್ಲಿರುವವರ ಪ್ರಾಣ ಸಂರಕ್ಷಣೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕೆಂದರು ಮುಖ್ಯಮಂತ್ರಿಗಳು ತಿಳಿಸಿದರು.

Advertisement

ಅರಣ್ಯ ನಮಗಿಂತ ಮೊದಲು ಅಸ್ತಿತ್ವದಲ್ಲಿದ್ದ ನೈಸರ್ಗಿಕ ಸಂಪತ್ತು. ಅರಣ್ಯ ನಮ್ಮ ಪೂರ್ವಿಕರು ಎಂಬ ಅಭಿಪ್ರಾಯ ನಮ್ಮಲ್ಲಿದೆ. ಪೂರ್ವಿಕರಿಗೆ ಭಕ್ತಿಭಾವದಿಂದ ನಮನ ಸಲ್ಲಿಸುವಂತೆಯೇ ಗಿಡಮರಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅರಣ್ಯವಿಲ್ಲದೆ ಮನುಷ್ಯನ ಅಸ್ತಿತ್ವ ಇರುತ್ತಿರಲಿಲ್ಲ. ಕಾಡಿಗೆ ನಾವು ಸದಾ ಋಣಿಯಾಗಿರಬೇಕು ಎಂದ ಅವರು, ಮನುಷ್ಯನ ಮೂಲ ಪ್ರಾರಂಭವಾಗಿದ್ದು ಅರಣ್ಯದಲ್ಲಿ. ಈಗ ನಾಗರಿಕತೆ ಬೆಳಿಸಿಕೊಂಡಿದ್ದೇವೆ. ಅರಣ್ಯ ನಾಶಕ್ಕೆ ನಾವು ಎಡೆಮಾಡಿಕೊಟ್ಟಿದ್ದೇವೆ.

ನೈಸರ್ಗಿಕ ಸಂಪತ್ತಿನ ವಿಚಾರದಲ್ಲಿ ನಮಗೆ ಇರುವ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಡಿಲ್ಲದೆ ಮಳೆ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಅತಿ ಆಸೆಯಿಂದ ನಿಸರ್ಗ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next