Advertisement

ಬಜೆಟ್‌: ಆದಾಯ ತೆರಿಗೆ ಮಿತಿ ಏರಿಕೆ?

06:00 AM Feb 01, 2018 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷದ ಎಂಟು ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಗಳ ಸವಾಲುಗಳನ್ನು ಎದುರುನೋಡುತ್ತಿರುವ ಕೇಂದ್ರ ಸರಕಾರ, ಗುರುವಾರ ತನ್ನ ಕಡೆಯ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ.

Advertisement

ಹಣಕಾಸು ಸಚಿವ ಅರುಣ್‌ ಜೇಟ್ಲಿ ತನ್ನ ಐದನೇ ಬಜೆಟ್‌ ಮಂಡಿಸಲಿದ್ದು, ಕೃಷಿ ಕ್ಷೇತ್ರ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು ನೀಡುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ಮಿತಿ ಪ್ರಸ್ತುತ 2.5 ಲಕ್ಷ ರೂ.ನಿಂದ 3 ಲಕ್ಷಕ್ಕೆ ಏರಿಕೆ ಮಾಡುವ  ನಿರೀಕ್ಷೆಯಿದೆ.

ಫೆಬ್ರವರಿ ಅಂತ್ಯಕ್ಕೆ ಬಜೆಟ್‌ ಮಂಡಿಸುವ ಹಳೆಯ ಸಂಪ್ರ ದಾಯವನ್ನು ಮೀರಿ, ತಿಂಗಳ ಆರಂಭದಲ್ಲೇ ಮಂಡಿಸಲು ನಿರ್ಧರಿಸಿರುವ ಕೇಂದ್ರ ಸರಕಾರ, ಈ ಬಾರಿ ಮುಂಬರುವ ಎಂಟು ರಾಜ್ಯಗಳ ಚುನಾವಣೆ ಹಾಗೂ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಳ್ಳಲಿದೆ. ಗ್ರಾಮೀಣ ಪ್ರದೇಶಗಳಿಗೆ ಹೊಸ ಯೋಜನೆಗಳು, ನರೇಗಾ, ಗ್ರಾಮೀಣ ವಸತಿ ಯೋಜನೆಗಳು, ನೀರಾವರಿ ಯೋಜನೆ ಮತ್ತು ಬೆಳೆ ವಿಮೆಗೆ ಹೆಚ್ಚಿನ ಹಣಕಾಸು ವಿನಿಯೋಗಿಸುವ ಭರವಸೆ  ವ್ಯಕ್ತವಾಗ ಬಹುದು ಎಂದು ನಿರೀಕ್ಷಿಸಲಾಗಿದೆ.

ಎರಡು ಹಂತದ ಅಧಿವೇಶನ: ಫೆ. 9ರ ವರೆಗೆ ಮೊದಲ ಹಂತದ ಬಜೆಟ್‌ ಅಧಿವೇಶನ ನಡೆಯಲಿದ್ದು, ಮಾ. 5ರಿಂದ ಎ. 6ರ ವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ.

ಷೇರುಪೇಟೆ ಇಳಿಕೆ: ಬಜೆಟ್‌ಗೂ ಮುನ್ನಾದಿನ ಷೇರುಪೇಟೆ ಕುಸಿತ ಕಂಡಿದೆ. ಸೆನ್ಸೆಕ್ಸ್‌  36,000 ಅಂಕಕ್ಕಿಂತ ಕೆಳಕ್ಕಿಳಿದಿದ್ದು, ದಿನದ ಕೊನೆಯಲ್ಲಿ 35,965.02 ಗೆ ಕುಸಿದಿದೆ. ಇನ್ನೊಂದೆಡೆ ನಿಫ್ಟಿ ಕೂಡ ಕುಸಿತ ಕಂಡಿದ್ದರೂ ದಿನದ ಕೊನೆಯಲ್ಲಿ 11,000 ಅಂಕದ ಮಿತಿಯನ್ನು ಉಳಿಸಿಕೊಂಡಿದೆ. 

Advertisement

ನಿರೀಕ್ಷೆಗಳೇನು?
– ಆದಾಯ ತೆರಿಗೆ 2.5 ಲಕ್ಷ ರೂ.ನಿಂದ 3 ಲಕ್ಷಕ್ಕೆ ಏರಿಕೆ
– ಕಾರ್ಪೊರೇಟ್‌ ತೆರಿಗೆ ಶೇ. 30ರಿಂದ ಶೇ. 25ಕ್ಕೆ ಇಳಿಕೆ
– ದೇಶದಲ್ಲೇ ಉತ್ಪಾದಿಸಿದ ಸಾಮಗ್ರಿಗಳಿಗೆ ತೆರಿಗೆ ದರ ಇಳಿಕೆ
– ರಫ್ತು ಉತ್ತೇಜನಕ್ಕೆ ಪ್ರೋತ್ಸಾಹಧನ ಘೋಷಣೆ
– ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಪ್ರೋತ್ಸಾಹ
– ಗ್ರಾಮೀಣ ಆರ್ಥಿಕಾಭಿವೃದ್ಧಿ ಯೋಜನೆಗಳು
– ಉದ್ಯೋಗ ಸೃಷ್ಟಿ ಸಂಬಂಧಿ ಯೋಜನೆಗಳ ಘೋಷಣೆ

ಜೇಟ್ಲಿ ಮುಂದಿರುವ ಐದು ಸವಾಲುಗಳು
1. ಆರ್ಥಿಕ ಅಭಿವೃದ್ಧಿ
ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಸವಾಲು ಅತ್ಯಂತ ಮಹತ್ವದ್ದಾಗಿದೆ. 2018ರ ಮಾರ್ಚ್‌ 31ಕ್ಕೆ ಕೊನೆಯಾಗಲಿರುವ ವಿತ್ತವರ್ಷದ ಆರ್ಥಿಕ ಪ್ರಗತಿಯು ಶೇ. 6.75ಕ್ಕೆ ಕುಸಿಯುವ ಸಾಧ್ಯತೆಯಿದ್ದು, ಮುಂದಿನ ತ್ತೈಮಾಸಿಕಗಳಲ್ಲಿ  ಶೇ. 7 ಹಾಗೂ ಶೇ. 7.5ಕ್ಕೆ ಏರುವ ನಿರೀಕ್ಷೆಯಿದೆ.

2. ವಿತ್ತೀಯ ಕೊರತೆ
ಈ ಬಾರಿಯ ವಿತ್ತೀಯ ಕೊರತೆ ಗುರಿ ಶೇ. 3.2 ಆಗಿತ್ತು. ಆದರೆ ಅದನ್ನು ತಲುಪುವ ಸಾಧ್ಯತೆ ಅತ್ಯಂತ ಕಡಿಮೆ ಇದೆ. ಮುಂಬರುವ ಚುನಾವಣೆಯ ವೇಳೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಒತ್ತಡವೂ ಇದ್ದು, ಇದರಿಂದಾಗಿ ವಿತ್ತೀಯ ಕೊರತೆ ಹೆಚ್ಚಾಗುವ ಸಂಭವವಿದೆ. ಇವುಗಳ ಮಧ್ಯೆ ಸಮ ತೋಲನ ಕಾಯ್ದುಕೊಳ್ಳುವುದು ಸದ್ಯದ ಸವಾಲು.

3. ಏರುತ್ತಿರುವ ತೈಲ ಬೆಲೆ
ಕಳೆದ ಜೂನ್‌ನಿಂದ ಜಾಗತಿಕ ತೈಲ ಬೆಲೆ ಶೇ. 40 ಏರಿಕೆಯಾಗಿದೆ. ಇದರಿಂದಾಗಿ ಪೆಟ್ರೋಲಿಯಂ ಬೆಲೆ ದಾಖಲೆ ಮಟ್ಟಕ್ಕೆ ಏರಿದ್ದರೂ ಇದನ್ನು ಅವ ಲಂಬಿಸಿದ ಇತರ ಬೆಲೆಗಳೂ ಏರಿಕೆಯಾಗಿವೆ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಸಬೇಕೆಂಬ ಕೂಗು ಇದೆ.

4. ಜಿಎಸ್‌ಟಿ ಸಂಗ್ರಹ
ಜಿಎಸ್‌ಟಿ ಪರಿಚಯಿಸಿದ ಅನಂತರದಲ್ಲಿ ಸತತ ಇಳಿಕೆ ಕಾಣುತ್ತಿರುವ ಜಿಎಸ್‌ಟಿ ಸಂಗ್ರಹ ವನ್ನು ಮೇಲಕ್ಕೆತ್ತುವುದು ಸವಾಲು. ಸದ್ಯ ಡಿಸೆಂಬರ್‌ ಸಂಗ್ರಹ ಏರಿಕೆ ಕಂಡಿದ್ದು ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ.

5. ತೆರಿಗೆ ರಿಯಾಯಿತಿ
ಆದಾಯ ತೆರಿಗೆ ಹಾಗೂ ಕಾರ್ಪೊರೇಟ್‌ ತೆರಿಗೆ ಇಳಿಸುವ ಒತ್ತಡ ಜೇಟ್ಲಿ ಮೇಲಿದೆ. ಈಗಾ ಗಲೇ ಶೇ. 30ರಿಂದ ಶೇ. 25ಕ್ಕೆ ಕಾರ್ಪೊರೇಟ್‌ ತೆರಿಗೆ ಇಳಿಕೆಯ ನಿರೀಕ್ಷೆ ಉಂಟಾಗಿದೆ. ಕಳೆದ ವರ್ಷ 50 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪೆನಿಗಳಿಗೆ ಶೇ. 25ರಷ್ಟು ಆದಾಯ ತೆರಿಗೆ ಇಳಿಕೆ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next