Advertisement

ಕ್ರೀಡಾ ಇಲಾಖೆಗೆ ಬಜೆಟ್‌ನ ಅನುದಾನ ಏರಿಕೆ: ಪ್ರಮೋದ್‌ 

10:48 AM Mar 23, 2018 | Team Udayavani |

ಮಹಾನಗರ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ 49ನೇ ಕಂಕನಾಡಿ ‘ಬಿ’ ವಾರ್ಡ್‌ ನ ಎಕ್ಕೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊರಾಂಗಣ ಕ್ರೀಡಾಂಗಣಕ್ಕೆ ಕ್ರೀಡಾ ಖಾತೆ ರಾಜ್ಯ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ ರಾಜ್ಯದಲ್ಲಿ ಕ್ರೀಡಾ ಖಾತೆಗೆ ವಿಶೇಷ ಆದ್ಯತೆ ನೀಡಲಾಗಿದೆ. 145 ಕೋ.ರೂ.ಗಳ ಕ್ರೀಡಾ ಬಜೆಟ್‌ನ ಗಾತ್ರವನ್ನು ಇದೀಗ 285 ಕೋ.ರೂ.ಗಳಿಗೆ ಏರಿಸಲಾಗಿದೆ. ಕ್ರೀಡೆಯ ಮೂಲಕ ಮನಸ್ಸು ಅರಳಿಸಲು ಸಾಧ್ಯ. ಒಂದು ಗ್ರಾಮ, ವಾರ್ಡ್‌ಗಳಲ್ಲಿ ಒಂದು ಕ್ರೀಡಾಂಗಣವಿದ್ದರೆ ಅಲ್ಲಿನ ಪೂರ್ಣ ವಾತಾವರಣ ನೆಮ್ಮದಿ ಹಾಗೂ ಸಂತೋಷವನ್ನು ಕಾಣುತ್ತದೆ ಎಂದರು.

ಶಾಸಕ ಜೆ.ಆರ್‌. ಲೋಬೋ ಅವರು ವಿವಿಧ ಕೆಲಸ ಕಾರ್ಯಗಳಿಗೆ ಅನುದಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈಗ ರಾಜ್ಯ ಸರಕಾರವು ಕ್ರೀಡಾ ನೀತಿಯನ್ನು ಜಾರಿಗೊಳಿಸುವ ಮೂಲಕ ಕ್ರೀಡಾಳುಗಳ ಬದುಕಿಗೆ ಹೊಸ ಸ್ಫೂರ್ತಿ ನೀಡುವ ಕಾರ್ಯವನ್ನು ಮಾಡಲಾಗಿದೆ ಎಂದರು.

ಮೇಯರ್‌ ಭಾಸ್ಕರ ಕೆ., ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಕೆಎಸ್‌ಆರ್‌ ಟಿಸಿ ನಿರ್ದೇಶಕ ಟಿ.ಕೆ. ಸುಧೀರ್‌, ಶೇಷಮ್ಮ ಉಪಸ್ಥಿತರಿದ್ದರು. ಪ್ರವೀಣ್‌ಚಂದ್ರ ಆಳ್ವ ಸ್ವಾಗತಿಸಿ, ಕರುಣಾಕರ ನಿರೂಪಿಸಿದರು.

ಕ್ರೀಡಾ ಅಭಿವೃದ್ಧಿಗೆ ಅನುದಾನ 
ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್‌. ಲೋಬೋ ಅವರು ಮಾತನಾಡಿ, ಕ್ರೀಡಾ ಖಾತೆ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಕ್ರೀಡಾ ಇಲಾಖೆಗೆ ಸಂಬಂಧಿಸಿದ ಅನುದಾನವನ್ನು ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ನೀಡಿದ್ದಾರೆ. ಎಮ್ಮೆಕೆರೆಯಲ್ಲಿ ಈಜುಕೊಳ, ಉರ್ವದಲ್ಲಿ ಅಂತಾರಾಷ್ಟ್ರೀಯ ಮಾದರಿಯ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಟ್ಟಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next