Advertisement

Budget; ನೂರೆಂಟು ನಿರೀಕ್ಷೆ,ಲೆಕ್ಕಾಚಾರಗಳ ಸಿದ್ದು ಬಜೆಟ್‌: ನಿರೀಕ್ಷೆ ಹೆಚ್ಚಾಗಿದೆ

12:31 AM Feb 12, 2024 | Team Udayavani |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. 16ರಂದು ಮಂಡಿಸಲಿರುವ ಬಜೆಟ್‌ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ ಕಾಂಗ್ರೆಸ್‌ ಸರಕಾರ ಜಿಲ್ಲೆಗಳಿಗೆ ಕೊಡುಗೆಗಳ ಮಹಾಪೂರ ನೀಡಲಿದೆ ಎಂಬ ಲೆಕ್ಕಾಚಾರದ ಜತೆಗೆ ಹಿಂದಿನ ಬಜೆಟ್‌ನ ಕೊಡುಗೆಗಳು ಪೂರ್ಣಗೊಳ್ಳಲಿ ಎಂಬ ನಿರೀಕ್ಷೆಯೊಂದಿಗೆ ಜನತೆ ಬಜೆಟ್‌ ಅನ್ನು ಎದುರು ನೋಡುತ್ತಿದ್ದಾರೆ. ಯಾವ ಜಿಲ್ಲೆಯ ಪ್ರಮುಖ ನಿರೀಕ್ಷೆಗಳು ಏನೇನು ಎಂಬುದರ ಪಕ್ಷಿನೋಟ ಇಲ್ಲಿದೆ.

Advertisement

ಬಾಗಲಕೋಟೆ: ವೈದ್ಯಕೀಯ ಕಾಲೇಜಿಗೆ ಅನುದಾನದ ನಿರೀಕ್ಷೆ
ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನ. ಯುಕೆಪಿ 3ನೇ ಹಂತದ ಪುನರ್‌ವಸತಿ, ಪುನರ್‌ನಿರ್ಮಾಣ, ಭೂಸ್ವಾಧೀನಕ್ಕೆ 25 ಸಾವಿರ ಕೋಟಿ. ಜವಳಿ ಪಾರ್ಕ್‌ ಆರಂಭಕ್ಕೆ ಅನುದಾನ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌. ಅಕ್ಷರಧಾಮ ಮಾದರಿ ಕೂಡಲಸಂಗಮ ಅಭಿವೃದ್ಧಿಗೆ ವಿಶೇಷ ಅನುದಾನ ನಿರೀಕ್ಷೆ.

ಬೆಳಗಾವಿ: ಇಲಾಖೆಗಳ ಸ್ಥಳಾಂತರ ಅಗತ್ಯ
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು. ಸುವರ್ಣ ವಿಧಾನಸೌಧಕ್ಕೆ ಅಗತ್ಯ ಇಲಾಖೆಗಳ ಸ್ಥಳಾಂತರಿಸಬೇಕು. ಕಳಸಾ-ಬಂಡೂರಿ, ಮಹದಾಯಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹತ್ತಕ್ಕೂ ಹೆಚ್ಚು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆ ವಿಭಜನೆ ಸವಾಲು ಬಗೆಹರಿಸಬೇಕು. ಮಾಹಿತಿ ತಂತ್ರಜ್ಞಾನ, ಜವಳಿ ಪಾರ್ಕ್‌ ಸ್ಥಾಪಿಸಬೇಕು

ಗದಗ: ಗುಳೆ ಹೋಗದಂತೆ ಕ್ರಮ ವಹಿಸಿ
ಕಳಸಾ-ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನ. 24/7 ಕುಡಿಯುವ ನೀರು ಪೂರೈಕೆ. ಹದಗೆಟ್ಟ ರಸ್ತೆಗಳ ದುರಸ್ತಿಗೆ ಅನುದಾನ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ. ಜನ ಗುಳೆ ಹೋಗದಂತೆ ತಡೆಯಲು ಕ್ರಮ.

ಧಾರವಾಡ: ಹೆಚ್ಚುವರಿ ಹಾಸ್ಟೆಲ್‌ ನಿರ್ಮಾಣ
ಧಾರವಾಡಕ್ಕೆ ಓದಲು ಬರುವ ಹೊರಜಿಲ್ಲೆಯ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೆಚ್ಚುವರಿ ಹಾಸ್ಟೆಲ್‌ ನಿರ್ಮಾಣಕ್ಕೆ ವಿಶೇಷ ಅನುದಾನ. ಹುಬ್ಬಳ್ಳಿ-ಧಾರವಾಡದ ಪಶ್ಚಿಮ ಭಾಗದಲ್ಲೂ ಸುಸಜ್ಜಿತ ಬೈಪಾಸ್‌ ನಿರ್ಮಾಣಕ್ಕೆ ಅನುದಾನ. ಮಹದಾಯಿ ಕಾಮಗಾರಿ ಆರಂಭಿಸಲು ಹೆಚ್ಚಿನ ಅನುದಾನ ಬೇಡಿಕೆ. ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಆರಂಭ ನಿರೀಕ್ಷೆ. ವಾಯವ್ಯ ಸಾರಿಗೆ ಇಲಾಖೆಗೆ ಹೆಚ್ಚಿನ ಬಸ್‌ ಖರೀದಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ.

Advertisement

ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಬೇಕು
ನವಲಿ ಬಳಿ ಸಮಾನಾಂತರ ಸೇತುವೆ ನಿರ್ಮಿಸಬೇಕು. ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ನೀಡಬೇಕು. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು. ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಬೇಕು. ಕೆರೆಗಳ ಭರ್ತಿಗೆ ವಿಶೇಷ ಯೋಜನೆ ರೂಪಿಸಬೇಕಿದೆ.

ಉತ್ತರ ಕನ್ನಡ: ಬೇಕಿದೆ ಹಣಕಾಸು ನೆರವು
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು. ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಅಪೂರ್ಣ ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲು ಅನುದಾನ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ. ವಿಮಾನ ನಿಲ್ದಾಣ ಕಾಮಗಾರಿಗೆ ಹಣಕಾಸು ನೆರವು ನೀಡಬೇಕು.

ಹಾವೇರಿ: ಕೃಷಿ ಪೂರಕ ಕೈಗಾರಿಕೆ ಸ್ಥಾಪನೆ
ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಮಾಡಬೇಕು. ಕೃಷಿ ಪೂರಕ ಕೈಗಾರಿಕೆ ಸ್ಥಾಪಿಸಬೇಕು. ಪ್ರವಾಹಕ್ಕೀಡಾಗುವ ಗ್ರಾಮಗಳ ಸ್ಥಳಾಂತರ. ತುಂಗಭದ್ರಾ ನದಿಗೆ ಕಂಚಾರಗಟ್ಟಿ ಬಳಿ ಬ್ಯಾರೇಜ್‌ ನಿರ್ಮಾಣ. ಹೈಟೆಕ್‌ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನ.

ಶಿವಮೊಗ್ಗ: ಸಂತ್ರಸ್ತರಿಗೆ ನ್ಯಾಯ ನಿರೀಕ್ಷೆ
ಮಂಗನ ಕಾಯಿಲೆಗೆ ಲಸಿಕೆ ಅಭಿವೃದ್ಧಿಪಡಿಸಬೇಕು. ಎಂಪಿಎಂ ಕಾರ್ಖಾನೆ ಪುನಾರಂಭಿಸಬೇಕು. ವಿಐಎಸ್‌ಎಲ್‌ ಕಾರ್ಖಾನೆ ಅಭಿ ವೃದ್ಧಿಗೊಳಿಸಬೇಕು. ಶರಾವತಿ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಬೇಕು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಅನುದಾನ ನೀಡಬೇಕು. ಅಡಕೆ ಸಂಶೋಧನಾ ಕೇಂದ್ರ ಆರಂಭಿಸಬೇಕು.

ಉಡುಪಿ: ಸಣ್ಣ ಬೀಚ್‌ಗಳ ಅಭಿವೃದ್ಧಿಗೆ ಪ್ಯಾಕೇಜ್‌
ಮಲ್ಪೆ, ಮರವಂತೆ, ಬೈಂದೂರು ಸೋಮೇಶ್ವರ, ಕಾಪು, ಪಡುಬಿದ್ರಿ ಬೀಚ್‌ ಸಹಿತ ಸಣ್ಣ ಬೀಚ್‌ಗಳ ಅಭಿವೃದ್ಧಿಗೆ ಪ್ಯಾಕೇಜ್‌ ಘೋಷಣೆ ಮಾಡಬೇಕು. ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ಅನುಷ್ಠಾನಕ್ಕೆ ನಿರ್ದಿಷ್ಟ ಪ್ರಮಾಣದ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆಯಿದೆ. ಟೂರಿಸಂ ಸಕೀìಟ್‌ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ.

ಚಿಕ್ಕಮಗಳೂರು: ರೋಪ್‌ ವೇ ನಿರ್ಮಾಣ
ಪ್ರತ್ಯೇಕ ಹಾಲು ಒಕ್ಕೂಟ ರಚಿಸಬೇಕು. ಜವಳಿ ಪಾರ್ಕ್‌, ಬಯಲುಸೀಮೆಯಲ್ಲಿ ಕೈಗಾರಿಕೆ ಸ್ಥಾಪಿಸಬೇಕು.ದತ್ತಪೀಠ, ಮುಳ್ಳಯ್ಯನಗಿರಿಗೆ ರೋಪ್‌ವೇ ನಿರ್ಮಿಸಬೇಕು. ಮಾನವ-ಕಾಡುಪ್ರಾಣಿಗಳ ಸಂಘರ್ಷ, ಕಾಡಾನೆಗಳ ಕಾಟಕ್ಕೆ ಕಡಿವಾಣ ಹಾಕಬೇಕು. ನೂತನ ತಾಲೂಕುಗಳಿಗೆ ಸೌಲಭ್ಯ ಕಲ್ಪಿಸಬೇಕು.

ದಕ್ಷಿಣಕನ್ನಡ: ಬೋಟ್‌ಗಳ ಸಂಚಾರಕ್ಕೆ ಅನುವು
ಮಂಗಳೂರಿನಲ್ಲಿ ಜವುಳಿ ಪಾರ್ಕ್‌ ಸ್ಥಾಪಿಸಿ, 1 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವು ದಾಗಿ ಕಾಂಗ್ರೆಸ್‌ ಹೇಳಿದ್ದು, ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿ ಅದು ಪ್ರಕಟಗೊ ಳ್ಳಬಹುದೇ ಎಂಬ ಕುತೂಹಲವಿದೆ. ಮೀನುಗಾರರ ಅನುಕೂಲಕ್ಕೆ ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಮೂಲಕ ಬೋಟ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಫಲ್ಗುಣಿ, ನೇತ್ರಾವತಿ ನದಿ ಪಾತ್ರದಲ್ಲಿ ಬಾರ್ಜ್‌ಗಳ ಸೇವೆ ಆರಂಭವಾಗಬೇಕಿದೆ.

ಹಾಸನ: ಕಾಮಗಾರಿಗಳ ಪೂರ್ಣಕ್ಕೆ ಅನುದಾನ
ಹಾಸನ ವಿಮಾನ ನಿಲ್ದಾಣ ಪೂರ್ಣ ಗೊಳಿಸಲು ಅನುದಾನದ ಅಗತ್ಯವಿದೆ. ರೈಲ್ವೆ ಮೇಲ್ಸೇತುವೆ ಅಪೂರ್ಣ ಕಾಮಗಾರಿ ಪೂರ್ಣಗೊ ಳಿಸಲು ಅನುದಾನ ಬೇಕಿದೆ. ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಹಾಗೂ ಬೇಲೂರಿನ ಯಗಚಿ ಜಲಾಶಯದ ಮುಂಭಾಗ ಉದ್ಯಾನವನ ನಿರ್ಮಾಣದ ಯೋಜನೆ. ಬೇಲೂರು- ಚಿಕ್ಕಮಗ ಳೂರು ಮಾರ್ಗದ ಕಾಮಗಾರಿ ಆರಂಭವಾಗಿದೆ. ಹಾಸನ-ಬೇಲೂರು ಮಾರ್ಗದ ಭೂಸ್ವಾಧೀನಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ.

ಮೈಸೂರು: ಇಂಡಸ್ಟ್ರಿಯಲ್‌ ಕಾರಿಡಾರ್‌ಗೆ ಒತ್ತು
ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ದಸರಾ ಪ್ರಾಧಿಕಾರ, ಚಿತ್ರನಗರಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಇಂಡಸ್ಟ್ರಿಯಲ್‌ ಕಾರಿಡಾರ್‌, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಸೇರಿ ಹತ್ತಾರು ನಿರೀಕ್ಷೆಗಳು ಜನರಲ್ಲಿವೆ. ವರುಣಾ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಅನುದಾನ ನಿರೀಕ್ಷೆಯಿದೆ. ಕೈಗಾರಿಕೆಗಳ ಉತ್ತೇಜನಕ್ಕಾಗಿ ಮಲ್ಟಿ ಸ್ಟೋರ್‌ ಪಾರ್ಕಿಂಗ್‌, ಮೈಸೂರು-ಮಂಗಳೂರು ನಡುವೆ ಇಂಡಸ್ಟ್ರಿಯಲ್‌ ಕಾರಿಡಾರ್‌. ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಅಗತ್ಯವಿದೆ.

ಚಾಮರಾಜನಗರ: ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ
ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕಿದೆ. ಹನೂರು ಹೊಸ ತಾಲೂಕಾಗಿದೆ. ಸುಗಮ ಕಾರ್ಯನಿರ್ವಹಣೆಗಾಗಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ 766 ಮತ್ತು 948 ಸಂಪರ್ಕಿಸುವ ಸಂತೆಮರಹಳ್ಳಿ ಮೂಗೂರು ಕ್ರಾಸ್‌ ವರೆಗಿನ 7 ಕಿ.ಮೀ. ರಸ್ತೆಯನ್ನು 18 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಪ್ರಸ್ತಾವನೆ.

ರಾಮನಗರ: ಮೇಕೆದಾಟು ಚಾಲನೆ ನಿರೀಕ್ಷೆ
ಮೇಕೆದಾಟು ಅಣೆಕಟ್ಟು ಯೋಜನೆಗೆ ಚಾಲನೆ ನೀಡು ವುದು, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಸ್ಥಾಪನೆ, ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಪ್ರಾರಂಭವಾಗ ಬೇಕಿದೆ. ರಸಗೊಬ್ಬರ ಗೋದಾಮು ನಿರ್ಮಾಣ. ಕಾಡಾನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ರೈಲ್ವೇ ಬ್ಯಾರಿ ಕೇಡ್‌ ನಿರ್ಮಾಣ. ರಾಮ ದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣದ ನಿರೀಕ್ಷೆಯಿದೆ.

ಬೆಂಗಳೂರು ನಗರ: ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ
ಪ್ರಸ್ತುತ ಪ್ರಗತಿಯಲ್ಲಿರುವ ಅಥವಾ ಹಣ ಪಾವತಿಯಾಗದೆ ಅರ್ಧಕ್ಕೆ ನಿಂತಿ ರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು. ಮೆಟ್ರೋ ಸಂಪರ್ಕ ಸೇವೆ ಕಲ್ಪಿಸುವ ಬಸ್‌ಗಳನ್ನು ಕಾರ್ಯಾ ಚರಣೆಗೊಳಿಸಬೇಕಿದೆ. 110 ಹಳ್ಳಿಗೆ ಮೂಲಸೌಲಭ್ಯ ಬೇಕು. ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿ ಮೂಲ ಸೌಕರ್ಯಕ್ಕೆ ಒತ್ತು. ಬಿಡಿಎ ಬಳಿಯ ಬಡಾವಣೆಗಳ ಪೂರ್ಣಕ್ಕೆ ಅಗತ್ಯ ನೆರವಿನ ಜತೆಗೆ ಇನ್ನಷ್ಟು ಬಡಾವಣೆಗಳ ನಿರ್ಮಾಣ ಮಾಡಬೇಕು. “ಬೆಂಗಳೂರು ಬಿಸಿನೆಸ್‌ ಕಾರಿಡಾರ್‌’ (ಬಿಬಿಸಿ)ಗೆ ಆದ್ಯತೆ ನೀಡಬೇಕು.

ಮಂಡ್ಯ: ಹೊಸ ಸಕ್ಕರೆ ಕಾರ್ಖಾನೆ ಆರಂಭ
ಸಾತನೂರು ಫಾರಂ ಬಳಿ ಹೊಸ ಸಕ್ಕರೆ ಕಾರ್ಖಾನೆ ಆರಂಭ. ಮೈಷುಗರ್‌ ಕಾರ್ಖಾನೆ ಸಮರ್ಪಕವಾಗಿ ನಡೆಯಲು ವಿಶೇಷ ಪ್ಯಾಕೇಜ್‌. ತೂಬಿನಕೆರೆ ಬಳಿ ಮಂಡ್ಯ ಉಪನಗರ ನಿರ್ಮಾಣ. ಮಂಡ್ಯ ನಗರದ ದಕ್ಷಿಣ ಭಾಗದಲ್ಲೂ ಬೈಪಾಸ್‌ ರಸ್ತೆ ನಿರ್ಮಾಣ.

ವಿಜಯಪುರ: ನೀರಾವರಿ ಯೋಜನೆಗಳಿಗೆ ಅನುದಾನ
ಕೃಷ್ಣಾ ಮೇಲ್ದಂಡೆ ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ಅನುದಾನ. ಕೃಷ್ಣಾ, ಭೀಮಾ, ಡೋಣಿ ನದಿ ಪ್ರವಾಹ ತಡೆಗೆ ಯೋಜನೆ ಅನುಷ್ಠಾನ. ಕೈಗಾರಿಕೆ ಕ್ಲಸ್ಟರ್‌ ಅನುಷ್ಠಾನಕ್ಕೆ ಅನುದಾನ ನೀಡಬೇಕು. ತೋಟಗಾರಿಕೆ ಬೆಳೆಗಳ ದಾಸ್ತಾನಿಗೆ ಶೈತ್ಯಾಗಾರ, ಮಾರುಕಟ್ಟೆ ಸ್ಥಾಪನೆ. ಖಾಸಗಿ ಸಹಭಾಗಿತ್ವದ ವೈನ್‌ ಪಾರ್ಕ್‌ ಸ್ಥಾಪನೆಗೆ ಆದ್ಯತೆ. ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ನೀಡಬೇಕು.

ಕಲಬುರಗಿ: ಪ್ರತ್ಯೇಕ ಕೈಗಾರಿಕ ನೀತಿ
ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕ ನೀತಿ ರೂಪಿಸುವುದು. ಕಲಬುರಗಿಯಲ್ಲಿ ಪ್ರಾರಂಭವಾಗಲಿರುವ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ಗೆ ಮೂಲಸೌಕರ್ಯ. ಕಲಬುರಗಿಯಲ್ಲಿರುವ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಬಲವರ್ಧನೆ. ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ. ಕೆಕೆಆರ್‌ಡಿಬಿಗೆ 5000 ಕೋಟಿ ರೂ. ಅನುದಾನ ಮುಂದುವರೆಸುವುದು.

ಬೀದರ್‌: ಅನುಭವ ಮಂಟಪಕ್ಕೆ ಬಾಕಿ ಅನುದಾನ
ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ “ಅನುಭವ ಮಂಟಪ’ ಕಾಮಗಾರಿಗೆ ಬಾಕಿ ಅನುದಾನ ಬಿಡುಗಡೆ. ಕಾರಂಜಾ ಜಲಾಶಯದ ಭೂ ಸಂತ್ರಸ್ತರ ದಶಕಗಳ ಬೇಡಿಕೆಯಾದ ವೈಜ್ಞಾನಿಕ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ ಬಿಡುಗಡೆ. ಬಡ-ರೈತರ ಮಕ್ಕಳ ಅನುಕೂಲಕ್ಕಾಗಿ ಬೀದರ್‌ನಲ್ಲಿ ಕೃಷಿ ಮಹಾವಿದ್ಯಾಲಯ ಆರಂಭದ ನಿರೀಕ್ಷೆ.

ಯಾದಗಿರಿ: ನೂತನ ತಾಲೂಕುಗಳಿಗೆ ಸೌಲಭ್ಯ
ಗುಳೆ ತಡೆಗೆ ವಿಶೇಷ ಯೋಜನೆ ರೂಪಿಸಬೇಕು. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ. ನೂತನ ತಾಲೂಕುಗಳಿಗೆ ಸೌಲಭ್ಯ ಕಲ್ಪಿಸಬೇಕು. ಬುದ್ಧ ಮಗಿರುವ ಬೆಟ್ಟ ಅಭಿವೃದ್ಧಿಗೆ ಅನುದಾನ. ಬೋನಾಳ ಪಕ್ಷಿಧಾಮಕ್ಕೆ ಪ್ರತ್ಯೆಕ ನಿಗಮ ರಚನೆ.

ರಾಯಚೂರು: ಸಣ್ಣ ನೀರಾವರಿಗೆ ಉತ್ತೇಜನ ನೀಡಿ
ಸಣ್ಣ ನೀರಾವರಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು. ರಾಯಚೂರು ಮಹಾನಗರ ಪಾಲಿಕೆ ಘೋಷಿಸಿ ಅನುದಾನ ನೀಡಬೇಕು.

ಬಳ್ಳಾರಿ: ನದಿ ಜೋಡಣೆ ಅಗತ್ಯ
ಟಿಬಿ ಡ್ಯಾಂ ಹೂಳೆತ್ತಬೇಕು ಇಲ್ಲವೇ ನದಿ ಜೋಡಣೆ ಮಾಡ ಬೇಕು. ಜೀನ್ಸ್‌ ಅಪ್ಪೆರಲ್‌ ಪಾರ್ಕ್‌ ಸ್ಥಾಪಿಸಬೇಕು. ಮೆಣಸಿನ ಕಾಯಿ ಮಾರುಕಟ್ಟೆ ಸ್ಥಾಪಿಸಬೇಕು. ವಿಮಾನ ನಿಲ್ದಾಣ ಸ್ಥಾಪಿಸ ಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಬೇಕು.

ವಿಜಯನಗರ: ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ
ಹಂಪಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ. ಹಂಪಿ ಕನ್ನಡ ವಿವಿಗೆ ಅಗತ್ಯವಿರುವ ಅನುದಾನ ಬಿಡುಗಡೆ. ನೂತನ ವಿಜಯನಗರ ಜಿಲ್ಲೆಗೆ ಜಿಲ್ಲಾಡಳಿತ ಭವನ ಸರ್ಕಾರಿ ಕಚೇರಿಗಳಿಗೆ ಕಟ್ಟಡ ಸೇರಿ ಇತರೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ. ಹರಪನಹಳ್ಳಿ ತಾಲೂಕು ಸೇರಿ ಕೆರೆ ತುಂಬಿಸುವ ಯೋಜನೆಗೆ ಕ್ರಮ ಕೈಗೊಂಡು ಸೂಕ್ತ ಅನುದಾನದ ನಿರೀಕ್ಷೆ.

ದಾವಣಗೆರೆ: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕು ಮೂಲಸೌಲಭ್ಯ
ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂಲಸೌಲಭ್ಯ. ಪ್ರತ್ಯೇಕ ಹಾಲು ಒಕ್ಕೂಟ ಕಾರ್ಯಾನುಷ್ಠಾನ. ಕೃಷಿ, ಸಹಕಾರ ಕಾಲೇಜು ಮಂಜೂರು. ಮೆಗಾ ಜವುಳಿ ಪಾರ್ಕ್‌, ಐಟಿ, ಬಿಟಿ ಕಂಪನಿಗಳ ಸ್ಥಾಪನೆ.

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ
ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯ ಅನುದಾನ. ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಕೈಗಾರಿಕ ಕ್ಲಸ್ಟರ್‌ ಆರಂಭಕ್ಕೆ ವಿಶೇಷ ಆದ್ಯತೆ ನೀಡಬೇಕು.ಮೊಳಕಾಲ್ಮೂರು ತಾಲೂಕಿನಲ್ಲಿ ರೇಷ್ಮೆ ಕ್ಲಸ್ಟರ್‌ ಆರಂಭಿಸಬೇಕು. ಪರಶುರಾಂಪುರ, ಧರ್ಮಪುರ, ಭರಮಸಾಗರ ತಾಲೂಕು ಕೇಂದ್ರ ಘೋಷಣೆ ನಿರೀಕ್ಷೆ.

ತುಮಕೂರು: ಮೆಟ್ರೋ ಯೋಜನೆಗೆ ಅನುಮೋದನೆ
ನಗರದ 35 ವಾರ್ಡ್‌ಗಳ ಪೈಕಿ 6 ವಾರ್ಡ್‌ಗಳು ಮಾತ್ರ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿ ಯಾಗಿವೆ. ಉಳಿದ 29 ವಾರ್ಡ್‌ಗಳ ಅಭಿವೃದ್ಧಿಗಾಗಿ ನಗರಕ್ಕೆ 500 ಕೋಟಿ ಮೀಸಲಿ ಡಬೇಕು ಎಂಬುದು ಬೇಡಿಕೆ. ಬೆಂಗಳೂರಿಗೆ ತುಮಕೂರು ನಗರ ಪರ್ಯಾ ಯವಾಗಿ ಬೆಳೆಯುತ್ತಿದ್ದು, ಮೆಟ್ರೋ ಯೋಜನೆಗೆ ಅನುಮೋದನೆ ನೀಡಬೇಕು. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಒತ್ತು ನೀಡಬೇಕಿದೆ.

ಚಿಕ್ಕಬಳ್ಳಾಪುರ: ಎತ್ತಿನಹೊಳೆಗೆ ಇನ್ನಾದರೂ ವೇಗ ಸಿಗುತ್ತಾ?
ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆ ವೇಗ ಸಿಗುತ್ತಾ ಎಂಬ ನಿರೀಕ್ಷೆಯಿದೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂಬ ಆಗ್ರಹವಿದೆ. ಜತೆಗೆ ಕೃಷ್ಣಾ ಪೆನ್ನಾರ್‌ ನದಿ ನೀರು ಈ ಭಾಗಕ್ಕೆ ಹರಿಸಬೇಕೆಂಬ ಒತ್ತಾಯವೂ ಇದೆ. ಜಿಲ್ಲೆಯ ಕೆರೆಗಳ ಸಮಗ್ರ ಪುನಶ್ಚೇತನಕ್ಕೆ ಒತ್ತು ಸಿಗಬೇಕಿದ್ದು, ಪ್ರವಾಸ್ಯೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ.

ಕೋಲಾರ: ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ನಿರೀಕ್ಷೆ
ಕೋಲಾರ ನಗರಕ್ಕೆ ವರ್ತುಲ ರಸ್ತೆ, ಕೆ.ಸಿ.ವ್ಯಾಲಿ ನೀರಿನ 3ನೇ ಹಂತದ ಪ ರಿ ಷ್ಕ ರಣೆ, ಹಿಂದೆ ಘೋಷಿಸ ಲ್ಪಟ್ಟಿರುವ ಸರಕಾರಿ ವೈದ್ಯಕೀಯ  ಕಾಲೇಜು. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ. ಕೋಲಾರ ಎಪಿಎಂಸಿ ಮಾರುಕಟ್ಟೆಯ ವಿಸ್ತರಣೆ, ಕೈಗಾರಿಕ ಕೇಂದ್ರಗಳಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶದ ನಿರೀಕ್ಷೆಯಿದೆ.

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಜಿಲ್ಲಾ ಕೇಂದ್ರ ನಿರೀಕ್ಷೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ ಜಿಲ್ಲೆ ಎಂದು ಹೆಸರಿಡಬೇಕು. ಜಿಲ್ಲಾಡಳಿತ ಕಚೇರಿಗಳು ಬೆಂಗಳೂರಿನಿಂದ 2017ರಲ್ಲಿ ದೇವನಹಳ್ಳಿ ತಾಲೂಕಿಗೆ ಸ್ಥಳಾಂತರವಾಯಿತು. ಬಜೆಟ್‌ನಲ್ಲಿ ದೇವನಹಳ್ಳಿ ಜಿಲ್ಲಾ ಕೇಂದ್ರವಾಗುವ ನಿರೀಕ್ಷೆಯಿದೆ. ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ, ದೇವನಹಳ್ಳಿ ಮತ್ತು ವಿಜಯಪುರ ಅವಳಿ ನಗರಗಳಾಗಿ ಅಭಿ ವೃದ್ಧಿ ಪಡಿಸಬೇಕಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಕಾವೇರಿ ನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು, ಜಿಲ್ಲಾ ಕ್ರೀಡಾಂಗಣ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next