ಆರ್ಥಿಕ ಸಂಕಷ್ಟದ ನಡುವೆಯೂ ಒಂದಷ್ಟು ಹೊಸ ಘೋಷಣೆಗಳ ಸಿಂಚನದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ 2020-21 ನೇ ಸಾಲಿನ ಬಜೆಟ್ ಒಂದು ರೀತಿಯಲ್ಲಿ ನಿರೀಕ್ಷಿತವೇ. ಏಕೆಂದರೆ ಈಗಿನ ಪರಿಸ್ಥಿತಿಯು ಮುಖ್ಯಮಂತ್ರಿಯವರ ಕೈ ಕಟ್ಟಿಹಾಕಿದ್ದು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆಯೇ ನಿರ್ವಹಣೆ ಮಾಡಬೇಕಾಗಿದೆ. ಅದನ್ನು ಬಜೆಟ್‌ನ ಮೂಲಕ ಮಾಡಿದ್ದಾರೆ ಸಹ.
ಕೇಂದ್ರ ಸರಕಾರದಿಂದ 2019-20ನೇ ಸಾಲಿನಲ್ಲಿ ತೆರಿಗೆ ಪಾಲಿನ ಕಡಿತ, 2020-21ನೇ ಸಾಲಿನಲ್ಲಿ ಕಡಿತವಾಗಬಹುದಾದ ಪ್ರಮಾಣ ವನ್ನೂ ಬಜೆಟ್‌ನಲ್ಲಿ ಧೈರ್ಯವಾಗಿಯೇ ಯಡಿಯೂರಪ್ಪ ಅವರು ಉಲ್ಲೇಖೀಸಿರುವುದು ಗಮನಾರ್ಹ. ರಾಜ್ಯದ ಆರ್ಥಿಕ ಚಿತ್ರಣ ಜನತೆ ಮುಂದಿಟ್ಟು ಸಂಕಷ್ಟ ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ.
ಹಣಕಾಸಿನ ಇತಿಮಿತಿಯೊಳಗೆಯೇ ಕೃಷಿ, ತೋಟಗಾರಿಕೆ, ನೀರಾವರಿ, ಪಶು ಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಬೆಂಗಳೂರು ನಗರಾಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಸಹಜವಾಗಿ ಸಂಪನ್ಮೂಲ ಕ್ರೊಡೀಕರಣಕ್ಕೆ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಮಾಡಬಹುದಾದ ಕೆಲಸದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಳ, ಅಬಕಾರಿ ವಲಯದಿಂದ ಹೆಚ್ಚು ವರಮಾನ ನಿರೀಕ್ಷಿಸಿದ್ದಾರೆ. ಈ ಮಾರ್ಗ ಬಿಟ್ಟು ಯಡಿಯೂರಪ್ಪ ಅವರ ಮುಂದೆ ಬೇರೇನೂ ಮಾರ್ಗ ಇಲ್ಲ.
ಬಜೆಟ್‌ನಲ್ಲಿ ಬೃಹತ್ ಮೊತ್ತದ ಅಥವಾ ದೀರ್ಘಕಾಲೀನ ಯೋಜನೆಗಳ ಘೋಷಣೆಯಾಗಿಲ್ಲ. ಬದಲಿಗೆ ಹಾಲಿ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣ ಹೊಂದಾಣಿಕೆ ಮಾಡಿ, ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ಯೋಜನೆಗೆ 500 ಕೋಟಿ ರೂ., ಎತ್ತಿನಹೊಳೆಗೆ 1500 ಕೋಟಿ ರೂ., ಕಲ್ಯಾಣ ಕರ್ನಾಟಕ ಮಂಡಳಿಗೆ 1500 ಕೋಟಿ ರೂ., ಒದಗಿಸಿ ಆ ಭಾಗಗಳ ಜನರನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ.
ಇಲಾಖಾವಾರು ಅನುದಾನ ಹಂಚಿಕೆ ಬಜೆಟ್‌ನಲ್ಲಿ ತೋರಿಸಿದರೆ ಹಿಂದಿನ ವರ್ಷಗಳ ಬಜೆಟ್‌ಗೆ ಹೋಲಿಕೆ ಮಾಡಿದರೆ ಎಲ್ಲ ಇಲಾಖೆಗಳಿಗೂ ಕಡಿತ ಮಾಡಲಾಗಿದೆ.
ತೆರಿಗೆಯಲ್ಲಿ ರಾಜ್ಯದ ಪಾಲು ಕಡಿತವಾಗಿರುವುದು ಹಾಗೂ ಮತ್ತಿತರ ಬೆಳವಣಿಗೆಗಳಿಂದ ರಾಜ್ಯದ ಸಂಪನ್ಮೂಲ ಕ್ರೊಢೀಕರಣ ದಲ್ಲಿ ತೀವ್ರ ಸಂಕಷ್ಟಗಳು ಎದುರಾಗಿವೆ. ನಮ್ಮ ರಾಜ್ಯವು ಈ ಪ್ರಮಾಣದ ಆರ್ಥಿಕ ಸಂಕಷ್ಟಗಳನ್ನು ಹಿಂದಿನ ಯಾವುದೇ ವರ್ಷಗಳಲ್ಲಿ ಎದುರಿಸಿರುವುದಿಲ್ಲ. ಕರ್ನಾಟಕ ವಿತ್ತೀಯ ಹೊಣೆಗಾರಿಕ ಅಧಿನಿಯಮ ಚೌಕಟ್ಟಿನಲ್ಲಿಯೇ ನಿಭಾಯಿಸಲು ಪ್ರಸಕ್ತ ಅರ್ಥಿಕ ವರ್ಷದಲ್ಲಿ ಹಲವು ಇಲಾಖೆಗಳ ವೆಚ್ಚ ಕಡಿತ ಗೊಳಿಸುವ ಅನಿವಾರ್ಯತೆ ಉದ್ಭವಿಸಿದೆ ಎಂದು ಮುಖ್ಯ ಮಂತ್ರಿಯವರೇ ಬಜೆಟ್‌ನಲ್ಲಿ ಒಪ್ಪಿಕೊಂಡುಬಿಟ್ಟಿದ್ದಾರೆ. ಒಂದು ರೀತಿಯಲ್ಲಿ ಅಸಹಾಯಕತೆಯನ್ನೂ ತೋಡಿಕೊಂಡಿದ್ದಾರೆ. ಹೀಗಾಗಿ, ಇದು ಸಂಕಷ್ಟದ ಸಂದರ್ಭಕ್ಕನುಗುಣವಾದ “ಬಜೆಟ್’ ಆಗಿದೆ.