Advertisement

ಬಜೆಟ್‌: ಬೆಳ್ತಂಗಡಿಗೆ ಶೂನ್ಯ ಕೊಡುಗೆ!

03:11 PM Mar 17, 2017 | Team Udayavani |

ಬೆಳ್ತಂಗಡಿ : ತಾಲೂಕಿಗೆ ಮೆಡಿಕಲ್‌ ಕಾಲೇಜು ಮಂಜೂರಾಗಬಹುದೆಂಬ ನಿರೀಕ್ಷೆಯೂ ಸೇರಿದಂತೆ ಎಲ್ಲವೂ ಈ ಬಜೆಟ್‌ನಲ್ಲಿ ಹುಸಿಯಾಗಿದೆ. 

Advertisement

ತಾಲೂಕಿನ ಅಭಿವೃದ್ಧಿಗೆ ವೇಗ ಕಲ್ಪಿಸಲು ಬಜೆಟ್‌ ನ ಮೇಲೆ ಹಲವು ನಿರೀಕ್ಷೆಗಳನ್ನು ಜನರು ಇಟ್ಟಿದ್ದರು. ಆದರೆ, ಈ ಬಾರಿಯೂ ತಾಲೂಕು ಎಲ್ಲ ರೀತಿಯ ಅವಕಾಶಗಳಿಂದ ವಂಚಿತವಾಗಿದೆ. 

ಮೆಡಿಕಲ್‌ ಕಾಲೇಜು ಇಲ್ಲ
ರಾಜ್ಯದಲ್ಲಿ ಒಟ್ಟು 45 ಮೆಡಿಕಲ್‌ ಕಾಲೇಜುಗಳಿವೆ. ಈ ಪೈಕಿ ಮಂಗಳೂರಿನಲ್ಲಿ  7 ಕಾಲೇಜುಗಳಿವೆ. ಜತೆಗೆ 2 ದಂತ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್‌, ಪಾರಾ ಮೆಡಿಕಲ್‌ ಕಾಲೇಜುಗಳಿವೆ. ಸುಳ್ಯದಲ್ಲೂ ಕೊರತೆ ಇಲ್ಲ. ಹಾಗಾಗಿ ಬಂಟ್ವಾಳದವರಿಗೆ ಮಂಗಳೂರು ಹತ್ತಿರವಿದ್ದರೆ, ಸುಳ್ಯದ ಸನಿಹದಲ್ಲಿ ಪುತ್ತೂರಿದೆ. ಪ್ರಸ್ತುತ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಆಗುವ ಕಾರಣ ಪುತ್ತೂರು ತಾಲೂಕಿನ ಬೇಡಿಕೆಯೂ ಈಡೇರಿದಂತಾಗಿದೆ. ಬೆಳ್ತಂಗಡಿ ತಾಲೂಕು ಮಾತ್ರ ವಂಚಿತವಾಗುತ್ತಿದೆ. ಹಾಗಾಗಿ ಮೆಡಿಕಲ್‌ ಕಾಲೇಜು ಅಗತ್ಯವಿತ್ತು ಎಂಬುದು ಜನರ ಅಭಿಪ್ರಾಯ.

ಅತ್ತ ಚಿಕ್ಕಮಗಳೂರು ಕಡೆಯಿಂದ ಚಾರ್ಮಾಡಿ  ಮುಖಾಂತರ ದಿನವೊಂದಕ್ಕೆ ಹತ್ತಕ್ಕೂ ಅಧಿಕ ಆ್ಯಂಬುಲೆನ್ಸ್‌ ಗಳು ಬಡ ರೋಗಿಗಳನ್ನು ಹೊತ್ತು ಮಂಗಳೂರಿನ  ವೆನಾÉಕ್‌ ಹಾಗೂ ಇತರ ಖಾಸಗಿ ಆಸ್ಪತ್ರೆ ಕಡೆಗೆ ದಾಂಗುಡಿಯಿಡುತ್ತವೆ. ಒಂದೊಮ್ಮೆ ತಾಲೂಕಿನಲ್ಲಿ ವೆನಾಕ್‌  ಮಾದರಿಯ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೆ, ಮತ್ತೆ ಒಂದೂವರೆ ಗಂಟೆ ಕಾಲ ಮಂಗಳೂರಿಗೆ ಪ್ರಯಾಣಿಸಬೇಕಾಗದು. ತಾಲೂಕಿನಲ್ಲಿ  ವಾರ್ಷಿಕ 900ಕ್ಕೂ ಅಧಿಕ ಅಪಘಾತ ಪ್ರಕ ರಣಗಳು ದಾಖಲಾಗುತ್ತವೆ. ಇದರಲ್ಲಿ ಸಾವನ್ನಪ್ಪುವವರ ಪ್ರಮಾಣದೊಂದಿಗೆ ದಾರಿಮಧ್ಯೆ ಅಸುನೀಗಿರುವ  ಪ್ರಕರಣಗಳಿವೆ. ಇವೆಲ್ಲಕ್ಕೂ ಕಡಿವಾಣ ಹಾಕಲು ಸಾಧ್ಯವಿದೆ.  ಶಾಸಕ ವಸಂತ ಬಂಗೇರರು ಬೆಳ್ತಂಗಡಿಗೆ ಸರಕಾರಿ ಮೆಡಿಕಲ್‌  ಕಾಲೇಜು ಬೇಕೆಂಬ ಬೇಡಿಕೆ  ಇಟ್ಟಿದ್ದರೂ ಸ್ಪಂದನೆ ಸಿಕ್ಕಿಲ್ಲ. 

ದ.ಕ. ಜಿಲ್ಲೆಗೇ ಮೆಡಿಕಲ್‌ ಕಾಲೇಜು ಭಾಗ್ಯ ದೊರೆತಿಲ್ಲ. “ಉದಯವಾಣಿ’ ಅಕ್ಟೋಬರ್‌ನಲ್ಲಿ ಬೆಳ್ತಂಗಡಿಗೆ ಮೆಡಿಕಲ್‌ ಕಾಲೇಜು ಬೇಕು ಎಂದು  ವರದಿ ಪ್ರಕಟಿಸಿತ್ತು.

Advertisement

ದ.ಕ.: ಅನುದಾನ ಪಡೆಯುವಲ್ಲಿ  ಹಿಂದೆ 
ಬಜೆಟ್‌ನಲ್ಲಿ ಜಿಲ್ಲೆಗೆ ಸಾಕಷ್ಟು ಕೊಡುಗೆ ಘೋಷಿಸಲಾಗಿದೆ. ಸಮಗ್ರ ಮಂಗಳೂರು ತಾಲೂಕು, ಬಂಟ್ವಾಳಕ್ಕೆ  ಆದ್ಯತೆ ನೀಡಲಾಗಿದೆಯೇ ಹೊರತು ಬೇರೆ ತಾಲೂಕುಗಳ ಕಡೆಗೆ ತಲೆ ಕೂಡ ಹಾಕಿಲ್ಲ. ಜಿಲ್ಲೆಯಲ್ಲಿ ಎಂಟರ ಪೈಕಿ 7 ಶಾಸಕರು ಕಾಂಗ್ರೆಸ್‌ ನವರಿದ್ದರೂ ಜಿಲ್ಲೆ ಅನುದಾನ ಪಡೆಯು ವಲ್ಲಿ ಹಿಂದೆ ಬಿದ್ದಿದೆ. 

ಬೆಳ್ತಂಗಡಿಗೆ ಪಾಲಿಟೆಕ್ನಿಕ್‌ ಕಾಲೇಜು, ಎಆರ್‌ಟಿಒ ಕಚೇರಿ, ಸುಸಜ್ಜಿತ ಬಸ್‌ ತಂಗುದಾಣ, ಕೆಎಸ್‌ಆರ್‌ಟಿಸಿ ಡಿಪೊ, ಮಿನಿ ವಿಧಾನಸೌಧಕ್ಕೆ ಹೆಚ್ಚುವರಿ ಅನುದಾನ, ನ್ಯಾಯಾಲಯ ಸಂಕೀರ್ಣಕ್ಕೆ ಹೆಚ್ಚುವರಿ ಅನುದಾನ, ಸರ್ವಋತು ರಸ್ತೆಗಳು, ಸೇತುವೆಗಳು-ಹೀಗೆ ಅನೇಕ ಬೇಡಿಕೆ ಇದ್ದರೂ ಯಾವುದಕ್ಕೂ ನಯಾಪೈಸೆ  ಅನುದಾನ ದಕ್ಕಿಲ್ಲ.

ಪಶ್ಚಿಮವಾಹಿನಿಯ ಹೆಸರಿನ 100 ಕೋ.ರೂ.ಕೊಡುಗೆ ದೊಡ್ಡದಾಗಿ ಕಾಣುತ್ತಿದ್ದರೂ ಹರಿವ ನದಿಗೆ ಕಟ್ಟುವ ಕಿಂಡಿ ಅಣೆಕಟ್ಟುಗಳ ಮುಂದೆ ಸಣ್ಣದೇ. ಏಕೆಂದರೆ  ನೇತ್ರಾವತಿ ನದಿಗೆ ಹರಿಯುವ ನೀರು ತಡೆದು ಕೋಲಾರ, ಚಿಕ್ಕ ಬಳ್ಳಾಪುರ ಭಾಗಕ್ಕೆ ರವಾನಿಸಲು 12,900 ಕೋ.ರೂ ಎತ್ತಿಡುವ ಸರಕಾರ ಇಲ್ಲಿ  ನೀರಿಂಗಿಸಲು 100 ಕೋ.ರೂ. ಮಾತ್ರ ನೀಡಿದೆ. 
 
ಹಿಂದೆಯೂ ಘೋಷಣೆಯಾಗಿತ್ತು!
ಬೆಳ್ತಂಗಡಿಯಿಂದ 19 ಗ್ರಾಮಗಳು ಮೂಡಬಿದಿರೆ ಹಾಗೂ ಕಡಬ ತಾಲೂಕಿಗೆ ಸೇರ್ಪಡೆಯಾಗಲಿವೆ. ಆದರೆ  ಈ ತಾಲೂಕುಗಳ ಘೋಷಣೆ  2013 ರಲ್ಲೇ ಆಗಿತ್ತು. ಆದರೆ  ಅನುದಾನ ಇಟ್ಟಿರ ಲಿಲ್ಲ.  ಜಗದೀಶ್‌ ಶೆಟ್ಟರ್‌ ಸರಕಾರವೂ ಅನುದಾನ ನೀಡದೆ ಘೋಷಿಸಿತು. ಆದ್ದರಿಂದ ಸಿದ್ದರಾಮಯ್ಯ ಸರಕಾರ ಅದನ್ನು ರದ್ದು ಮಾಡಿತು. ಈಗ ಮುಂಬರುವ ಸರಕಾರ ಏನು ಮಾಡುತ್ತದೆ ಕಾದು ನೋಡಬೇಕು. 

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next