ಕೇಂದ್ರ ಸರಕಾರದ ಪ್ರಸಕ್ತ ಸಾಲಿನ ಮುಂಗಡ ಪತ್ರವು ಪ್ರಗತಿಶೀಲ ಹಾಗೂ ಆರ್ಥಿಕ ಬೆಳವಣಿಗೆ ಆಧಾರಿತ ಮುಂಗಡ ಪತ್ರವಾಗಿದೆ ಎಂದು ವಿಶ್ಲೇಷಣೆ ಮಾಡಬಹುದಾಗಿದೆ.
ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆಯ ಹೊರೆ ಹೊರಿಸದಿರುವುದು ಈ ಬಜೆಟ್‌ನ ಸಕಾರಾತ್ಮಕ ಅಂಶ. ರಾಜ್ಯ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ಸಂಬಂಧಿಸಿ ರಿಬೇಟ್ ನೀಡುವ ಮೂಲಕ ನೌಕರರ ಹಿತ ಕಾಯ್ದುಕೊಳ್ಳುವ ಪ್ರಯತ್ನ ನಡೆದಿದೆ.
ಗ್ರಾಮೀಣ ಜನರ ನಗರ ವಲಸೆಯನ್ನು ತಡೆಯಲು ಕ್ರಮ, ರೈಲ್ವೇ ಮೂಲಸೌಲಭ್ಯಗಳ ಮೂಲಕ ವಿಶೇಷ ಗಮನ ಹರಿಸುವ ಮುಖೇನ ಒಟ್ಟಾರೆ ಮೂಲಸೌಕರ್ಯ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮನೆಗಳಿಗೆ ನಳ್ಳಿ ನೀರು ಸಂಪರ್ಕ ಹಾಗೂ ಅರ್ಹ ಬಡವರಿಗೆ ಮನೆ ನಿರ್ಮಾಣ ಯೋಜನೆ, ಇಂಧನದ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡಲಾಗಿದೆ.
ದೇಶೀಯ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಲಾಗಿದ್ದು, ಒಟ್ಟು ದೇಶೀಯ ಕ್ಷೇತ್ರದ ವೆಚ್ಚದ ಶೇ. 65ರಷ್ಟನ್ನು ಮೇಕ್ ಇನ್ ಇಂಡಿಯಾ ಉತ್ಪನ್ನಗಳಿಗೆ ವಿನಿಯೋಗಿಸುವುದು ಒಂದು ಉತ್ತಮ ಕ್ರಮವಾಗಿದೆ. ಸೌರ ವಿದ್ಯುತ್‌ಗೆ ಬಜೆಟ್‌ನಲ್ಲಿ ಅನುದಾನ ಕಾದಿರಿಸುವ ಮೂಲಕ ನವೀಕರಿಸಬಹುದಾದ ಇಂಧನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಅದೇ ರೀತಿಯಲ್ಲಿ ಡಿಜಿಟಲೈಸೇಶನ್‌ನ ವೇಗ ವರ್ಧಿಸುವ ನಿಟ್ಟಿನಲ್ಲಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಶೀಘ್ರ ಸ್ಥಾಪಿಸುವ ಪ್ರಸ್ತಾವ ಮಂಡಿಸಲಾಗಿದೆ.
ಬ್ಲೋಕ್ ಚೈನ್ ಟೆಕ್ನಾಲಜಿ ಬಳಸಿಕೊಂಡು ರಿಸರ್ವ್ ಬ್ಯಾಂಕು ಡಿಜಿಟಲ್ ರೂಪಾಯಿ ಬಿಡುಗಡೆ ಮಾಡಲಿದೆ. ವ್ಯವಹಾರ ಸುಲಭವಾಗಿಸಲು ಹಲವು ರಿಯಾಯಿತಿಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಗೆ ಇಸಿಎಲ್‌ಜಿಎಸ್ ಯೋಜನೆಯಡಿ ಬೆಂಬಲ ಮತ್ತು ಖಾತರಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸುವ ಮೂಲಕ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲಾಗಿದೆ.
ಆದರೆ ಆದಾಯ ತೆರಿಗೆಯ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲದಿರುವುದು ಆದಾಯ ತೆರಿಗೆ ಸ್ಲಾéಬ್ ಏರಿಕೆಯ ನಿರೀಕ್ಷೆಯಿಂದ ಇದ್ದ ಮಧ್ಯಮ ದರ್ಜೆಯ ಜನತೆಗೆ ನಿರಾಸೆ ಉಂಟು ಮಾಡಿದೆ. ತೆರಿಗೆಯ ಸ್ಲಾéಬ್ ಏರಿಕೆಯಾದರೆ ತೆರಿಗೆ ಪರಿಹಾರ ಸಿಗಬಹುದೆಂದು ಬಹಳಷ್ಟು ಮಂದಿ ನಿರೀಕ್ಷೆ ಇಟ್ಟುಕೊಂಡಿದ್ದರು. ಅದೇ ರೀತಿ ವ್ಯಾಪಾರೋದ್ಯಮಿಗಳಿಗೆ ಯಾವುದೇ ನೇರ ಪರಿಹಾರ ಬಜೆಟ್‌ನಲ್ಲಿ ಒದಗಿಸಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಗಮನಹರಿಸಲಾಗಿಲ್ಲ.
ಪ್ರಸ್ತುತ ಹಣದುಬ್ಬರದ ಒತ್ತಡ ಹಾಗೂ ತತ್ಸಂಬಂಧಿತ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಹಣಕಾಸು ಸಚಿವರು ಈ ಎಲ್ಲ ನಿರ್ಧಾರಗಳಿಗೆ ಬಂದಿರುವಂತೆ ಕಾಣುತ್ತದೆ. ಸಮಗ್ರವಾಗಿ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದಾಗ ಇದೊಂದು ಉತ್ತಮ ಬಜೆಟ್ ಎಂದು ಹೇಳಬಹುದು.
-ಬಿ.ಆರ್. ಭಟ್
ನಿವೃತ್ತ ಬ್ಯಾಂಕರ್