ಕಾರವಾರ: ಇಲ್ಲಿನ ನಗರಸಭೆ ಸಭಾ ಭವನದಲ್ಲಿ ಶನಿವಾರ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಸರ್ವ ಸದಸ್ಯರ ಸಮ್ಮುಖದಲ್ಲಿ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. 44,69,64,775 ರೂ. ಮೊತ್ತದ ಬಜೆಟ್‌ನಲ್ಲಿ 44.30 ಕೋಟಿ ರೂ. ನಗರಸಭೆಯ ವೆಚ್ಚ ತೋರಿಸಿದ್ದು, 39.10 ಲಕ್ಷ ರೂ, ಉಳಿತಾಯ ಬಜೆಟ್ ಮಂಡಿಸಿದರು.
ನಗರಸಭೆಯ ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಗರದ ಸ್ವತ್ಛತೆ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅವುಗಳಿಗೆ ನಾಮಫಲಕ ಬರೆಸಲಾಗುವುದು. ಅಲ್ಲದೇ ಕೋಣೆನಾಲ ಅಭಿವೃದ್ಧಿಗೆ 450 ಲಕ್ಷ ರೂ. ಮೀಸಲಿಡಲಾಗಿದೆ. ರಸ್ತೆಗಳ ನಿರ್ಮಾಣ , ನವೀಕರಣಕ್ಕೆ 170 ಲಕ್ಷ, ರಸ್ತೆ ಬದಿ ಚರಂಡಿ ನಿರ್ಮಾಣ, ನಿರ್ವಹಣೆ ಹಾಗೂ ಸ್ಲ್ಯಾಬ್‌ಗೆ 165 ಲಕ್ಷ, ಚರಂಡಿ ಹೂಳು ತೆಗೆಯಲು 115 ಲಕ್ಷ ರೂ. ಮೀಸಲಿಡಲಾಗಿದೆ. ಗಾರ್ಡನ್ ನಿರ್ವಹಣೆ, ನಿರ್ಮಾಣಕ್ಕೆ 100 ಲಕ್ಷ ರೂ, ಬೀದಿ ದೀಪ ಜೋಡಣೆಗೆ 74 ಲಕ್ಷ, ನೀರು ಪೂರೈಕೆ ಹೊಸ ಪೈಪ್‌ಲೈನ್ ಅಳವಡಿಸಲು 85 ಲಕ್ಷ, ಆರ್.ಒ.ಘಟಕ ನಿರ್ಮಾಣಕ್ಕೆ 20 ಲಕ್ಷ, ಸ್ವಚ್ಛ ಭಾರತ ಮಿಷನ್‌ಗೆ 50 ಲಕ್ಷ ರೂ, ನಿಗದಿ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಬೋರ್ಡ್, ಥರ್ಮೋಪ್ಲಾಸ್ಟರ್, ಫೈಬರ್ ಡಿವೈಡರ್ ಅಳವಡಿಸಲು 40 ಲಕ್ಷ ಮೀಸಲಿಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ನಾಮಫಲಕ ಅಳವಡಿಸಲು 40 ಲಕ್ಷ , ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 20 ಲಕ್ಷ, ಸ್ಮಶಾನ ಅಭಿವೃದ್ಧಿ, ದುರಸ್ತಿಗೆ 35 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.
ಯಂತ್ರೋಪಕರಣ ಖರೀದಿಗೆ, ಸಾರ್ವಜನಿಕ ಶೌಚಾಲಯ ಮಿಷನ್, ಎಸ್ಟಿಪಿ ನೀರು ಪುರ್ನಬಳಕೆ ಮಾಡುವ ಯಂತ್ರ ಖರೀದಿ, ಬೀದಿ ಗುಡಿಸುವ ಮಿಷನ್ ಖರೀದಿಗೆ 12 ಲಕ್ಷ ರೂ. ಮೀಸಲಿಡಲಾಗಿದೆ. ಅಭಿಲೇಖಾಲಯ ಡಿಜಿಟಲೀಕರಣಕ್ಕೆ 20 ಲಕ್ಷ ರೂ, ಲಘು ವಾಹನ ಖರೀದಿಗೆ , ಆರೋಗ್ಯ ವಿಭಾಗಕ್ಕೆ ವಾಹನ ತಳ್ಳುವ ಗಾಡಿ, ವಿದ್ಯುತ್ ಚಾಲಿತ ಬೈಕ್ ಖರೀದಿಗೆ 17.50 ಲಕ್ಷ ಮೀಸಲಿಡಲಾಗಿದೆ. ಅಧ್ಯಕ್ಷರ ವಾಹನ ಖರೀದಿಗೆ 25 ಲಕ್ಷ, ನೀರು ಸರಬರಾಜು ದುರಸ್ತಿ ಕಾಮಗಾರಿಗಳಿಗಾಗಿ 30 ಲಕ್ಷ , ಜಲ ಮಂಡಳಿಯಿಂದ ನೀರು ಖರೀದಿಗೆ 100 ಲಕ್ಷ, ನೈರ್ಮಲ್ಯ ಸಾಮಗ್ರಿ ಖರೀದಿಗೆ 10 ಲಕ್ಷ, ಬೀದಿ ದೀಪ ನಿರ್ವಹಣೆಗೆ 75 ಲಕ್ಷ ರೂ., ಬೀದಿ ದೀಪ ದುರಸ್ಥಿಗೆ 10 ಲಕ್ಷ, ಇಲಾಖೆಯ ವಾಹನಗಳ ದುರಸ್ಥಿಗೆ 10 ಲಕ್ಷ, ನಗರಸಭೆಯಿಂದ ನೀಡುವ ದೇಣಿಗೆಗೆ 4 ಲಕ್ಷ ರೂ, ಇಡಲಾಗಿದೆ.
ವಿದ್ಯುತ್ ಬಿಲ್: ವಿದ್ಯುತ್ ಬಿಲ್ ತುಂಬಲು 550 ಲಕ್ಷ ರೂ, ಕಾದಿರಿಸಲಾಗಿದೆ. ಸಿಬ್ಬಂದಿ ವೇತನ ಪಾವತಿಗೆ 349 ಲಕ್ಷ ರೂ.ತೆಗೆದಿರಿಸಲಾಗಿದೆ. ಬಡವರ ಕಲ್ಯಾಣಕ್ಕೆ 9.15 ಲಕ್ಷ, ಕೌನ್ಸಿಲ್ ಸಂಬಂ ಧಿತ ವೆಚ್ಚ 27 ಲಕ್ಷ, ಕೆಎಚ್‌ಬಿಯಲ್ಲಿ ಪಂಪ್ ಹೌಸ್ ಬ್ರಾಂಚ್ ಕಚೇರಿ ನಿರ್ಮಾಣಕ್ಕೆ 5 ಲಕ್ಷ , ವೃದ್ಧಾಶ್ರಮ ನಿರ್ಮಾಣಕ್ಕೆ 20 ಲಕ್ಷ, ಗೋಶಾಲೆ ನಿರ್ಮಾಣಕ್ಕೆ 25 ಲಕ್ಷ ರೂ. ಖರ್ಚು ಮಾಡಲಾಗುವುದು.
ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ನೈಟ್ ಶೇಟ್ಲರ್ ಬೆಡ್ಸ್ ವ್ಯವಸ್ಥೆಗೆ 5 ಲಕ್ಷ, ಹೊರಗುತ್ತಿಗೆ ಗಾರ್ಡನ್ ಗಳ ನೌಕರರ ವೇತನಕ್ಕೆ 48, ನಾಯಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಅಪರೇಶನ್ ಥೇಟರ್ ನಿರ್ಮಾಣಕ್ಕೆ 22 ಲಕ್ಷ, ವಾಲ್ ಮ್ಯಾನ್ ವೇತನಕ್ಕೆ 13 ಲಕ್ಷ, ಬೀಚ್‌ನಲ್ಲಿ ಮೀನು ಮಾರುಕಟ್ಟೆ ಹಳೆ ಬಟ್ಟೆ ಸಂಗ್ರಹ ಕೇಂದ್ರವಾಗಿ ಮಾರ್ಪಡಿಸಲು 5 ಲಕ್ಷ, ಬೀಚ್ ನಿರ್ವಹಣೆಗೆ, ಎಸ್ಟಿಪಿ ನಿರ್ವಹಣೆಗೆ 215 ಲಕ್ಷ ರೂ, ಮೀಸಲಿಡಲಾಗಿದೆ. ಅಂಗವಿಕಲರ ಕಲ್ಯಾಣಕ್ಕೆ 6.25 ಲಕ್ಷ ಮೀಸಲಿಡಲಾಗಿದೆ ಎಂದರು.
ಬಜೆಟ್ ಮಂಡಿಸಿದ ನಂತರ ಅಧ್ಯಕ್ಷರು, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು. ಹಸೀರಿಕರಣ ಮತ್ತು ಗಿಡ ನೆಡಲು 20 ಲಕ್ಷ ರೂ, ಕಾದಿಡಲಾಗಿದೆ ಎಂದು ಅಧ್ಯಕ್ಷ ಪಿಕಳೆ ವಿವರಿಸಿದರು.