Advertisement

ತನ್ನ ಹೆಲಿಕಾಫ್ಟರನ್ನು ತಾನೇ ಹೊಡೆದುರುಳಿಸಿತೇ ಭಾರತೀಯ ವಾಯುಪಡೆ?

09:28 AM Apr 02, 2019 | Hari Prasad |

ಬಾಲಾಕೋಟ್‌ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆಗಳು ವಾಯು ದಾಳಿ ನಡೆಸಿದ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವೆ ಸಮರ ಸನ್ನದ್ಧ ಸ್ಥಿತಿ ನಿರ್ಮಾಣಗೊಂಡಿದ್ದ ಸಂದರ್ಭದಲ್ಲಿ ಫೆಬ್ರವರಿ 27ರಂದು ಶ್ರೀನಗರದಲ್ಲಿ ಭಾರತೀಯ ವಾಯುಪಡೆಯ ಎಂ.ಐ.-17 ಹೆಲಿಕಾಫ್ಟರ್‌ ಪತನಗೊಂಡ ಘಟನೆಗೆ ಇದೀಗ ಮಹತ್ವದ ತಿರುವು ಲಭ್ಯವಾಗಿದೆ. ಬಾಲಾಕೋಟ್‌ ವಾಯು ದಾಳಿಯ ನಂತರ ಭಾರತದ ವಾಯುಮಾರ್ಗಗಳನ್ನು ಹೈ ಅಲರ್ಟ್‌ ಸ್ಥಿತಿಯಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ‘ಆಕಸ್ಮಿಕ’ವಾಗಿ ತನ್ನದೇ ಹೆಲಿಕಾಫ್ಟರ್‌ ಅನ್ನ ಹೊಡೆದುರುಳಿಸಿದೆ ಎಂಬ ಆಘಾತಕಾರಿ ಮಾಹಿತಿ ಇದೀಗ ತನಿಖೆಯಿಂದ ಬಹಿರಂಗಗೊಂಡಿರುವುದಾಗಿ ವಾಯುಸೇನೆಯ ಉನ್ನತ ಅಧಿಕಾರಿಗಳ ಹೇಳಿಕೆಗಳನ್ನು ಉದ್ಧರಿಸಿ ಪಿ.ಟಿ.ಐ. ಸುದ್ದಿಸಂಸ್ಥೆ ವರದಿ ಮಾಡಿದೆ. ಈ ದುರ್ಘ‌ಟನೆಯಲ್ಲಿ ಹೆಲಿಕಾಫ್ಟರ್‌ ನಲ್ಲಿದ್ದ ಆರು ಜನ ಭಾರತೀಯ ವಾಯುಪಡೆಯ ಸಿಬ್ಬಂದಿಗಳು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆಗೆ ವಾಯುಸೇನೆಯು ಆದೇಶಿಸಿತ್ತು. ಪಾಕಿಸ್ಥಾನಕ್ಕೆ ಸೇರಿದ ಶಸ್ತ್ರಾಸ್ತ್ರ ಭರಿತ ತಳಮಟ್ಟದಲ್ಲಿ ಹಾರುವ ಮಾನವ ರಹಿತ ವಿಮಾನವೆಂದು ಭ್ರಮಿಸಿ ಎಂ.ಐ.-17 ಹೆಲಿಕಾಫ್ಟರ್‌ ಮೇಲೆ ನಮ್ಮ ರಕ್ಷಣಾ ಕ್ಷಿಪಣಿ ದಾಳಿ ಮಾಡಿದ ಕಾರಣದಿಂದ ಈ ಹೆಲಿಕಾಫ್ಟರ್‌ ಪತನಗೊಂಡಿದೆ ಎಂಬ ಶಂಕೆಯೂ ಇದೀಗ ವ್ಯಕ್ತವಾಗಿದೆ.

Advertisement

ದುರಂತಕ್ಕೀಡಾಗಿದ್ದ ಎಂ.ಐ.-17 ಹೆಲಿಕಾಫ್ಟರ್‌ ನಲ್ಲಿ ‘ಮಿತ್ರ ಅಥವಾ ಶತ್ರು ಗುರುತಿಸುವಿಕೆ’ (ಐ.ಎ.ಎಫ್. ವ್ಯವಸ್ಥೆ) ವ್ಯವಸ್ಥೆಯನ್ನು ಚಾಲನೆಗೊಳಿಸದೇ ಇದ್ದುದೇ ಈ ದುರ್ಘ‌ಟನೆಗೆ ಕಾರಣವೆಂದು ಈ ಘಟನೆಯ ತನಿಖೆಯಲ್ಲಿ ತೊಡಗಿಸಿಕೊಂಡಿರುವ ಹೆಸರು ಹೇಳಲಿಚ್ಛಿಸದ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಈ ಐ.ಎ.ಎಫ್. ವ್ಯವಸ್ಥೆಯನ್ನು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಯುದ್ಧವಿಮಾನಗಳಲ್ಲಿ ಅಥವಾ ಸೇನಾ ಹೆಲಿಕಾಫ್ಟರ್‌ ಗಳಲ್ಲಿ ಉಪಕರಣವೊಂದನ್ನು ಅಳವಡಿಸಲಾಗುತ್ತದೆ ಮತ್ತು ಆ ಉಪಕರಣವು ತನ್ನ ‘ಗುರುತ’ನ್ನು ಸಮೀಪದ ರಾಡಾರ್‌ ಸಿಗ್ನಲ್‌ ಗೆ ರವಾನಿಸುತ್ತಿರುತ್ತದೆ.

ಆ ದಿನ ಫೆಬ್ರವರಿ 27ರಂದು ಬೆಳಗ್ಗೆ ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಪಾಕಿಸ್ಥಾನಕ್ಕೆ ಸೇರಿದ 25 ಯುದ್ಧ ವಿಮಾನಗಳ ಹಾರಾಟದ ಮಾಹಿತಿ ವಾಯು ರಕ್ಷಣಾ ಎಚ್ಚರಿಕೆಯ ಸೂಚನೆ ಮೊಳಗಿದ ಬಳಿಕ ‘ಕ್ಷಿಪಣಿ’ಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು. ಅದಾಗಲೇ 9.30ರ ಸುಮಾರಿಗೆ ಪಾಕಿಸ್ಥಾನದ ಯುದ್ಧವಿಮಾಗಳು ಭಾರತೀಯ ವಾಯುಸೀಮೆಯನ್ನು ಉಲ್ಲಂಘಿಸುವ ಪ್ರಯತ್ನ ನಡೆಸಿದ್ದವು ಮತ್ತು ಅದೇ ಸಂದರ್ಭದಲ್ಲಿ ಅಂದರೆ ಬೆಳಿಗ್ಗೆ 10.10ರ ಸುಮಾರಿಗೆ ಬುದ್ಗಾಂವ್‌ ಸಮೀಪ ಎಂ.ಐ.-17 ಸೇನಾ ಹೆಲಿಕಾಫ್ಟರ್‌ ಪತನಗೊಂಡಿತ್ತು. ಸನ್ನದ್ಧ ಸ್ಥಿತಿಯಲ್ಲಿದ್ದ ವಾಯುಪಡೆಯ ಕ್ಷಿಪಣಿಯು ಈ ಹೆಲಿಕಾಫ್ಟರ್‌ ಅನ್ನು ಹೊಡೆದುರುಳಿಸಿರಬಹುದೆಂಬ ಅನುಮಾನ ಇದೀಗ ವ್ಯಕ್ತವಾಗಿದೆ.

ನತದೃಷ್ಟ ಸೇನಾ ಹೆಲಿಕಾಫ್ಟರ್‌ ಅನ್ನು ಸ್ಕ್ವಾಡ್ರಿಯನ್‌ ಲೀಡರ್‌ ಸಿದ್ಧಾರ್ಥ ವಶಿಷ್ಠ ಅವರು ಚಲಾಯಿಸುತ್ತಿದ್ದರು ಈ ಹೆಲಿಕಾಫ್ಟರ್‌ ನಲ್ಲಿ ಸ್ಕ್ವಾಡ್ರಿಯನ್‌ ಲೀಡರ್‌ ನಿನಾದ್‌ ಮಾಂಡ್ವಗಣೆ, ಕುಮಾರ್‌ ಪಾಂಡೆ, ಸಾರ್ಜೆಂಟ್‌ ವಿಕ್ರಾಂತ್‌ ಶೆಹ್ರಾವತ್‌, ಕಾರ್ಪೊರಲ್‌ ದೀಪಕ್‌ ಪಾಂಡೆ ಮತ್ತು ಕಾರ್ಪೊರಲ್‌ ಪಂಕಜ್‌ ಕುಮಾರ್‌ ಅವರಿದ್ದರು. ಘಟನೆಯಲ್ಲಿ ಹೆಲಿಕಾಫ್ಟರ್‌ ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಈ ಘಟನೆಗೆ ಕಾರಣರಾದ ವಾಯುಪಡೆಯ ಸಿಬ್ಬಂದಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಕೋರ್ಟ್‌ಮಾರ್ಷಲ್‌ ಪ್ರಕ್ರಿಯೆಗೆ ಒಳಪಡಿಸಲಾಗುವುದೆಂಬ ಮಾಹಿತಿಯೂ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next