ಹೊಸದಿಲ್ಲಿ: ವಿಶ್ವವು ಪ್ರಸ್ತುತ ಎದುರಿಸುತ್ತಿರುವ ಅಸಾಧಾರಣ ಸವಾಲುಗಳಿಗೆ ಗೌತಮ ಬುದ್ಧನ ಸಂದೇಶಗಳಲ್ಲಿ ಪರಿಹಾರ ಮಾರ್ಗಗಳು ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶನಿವಾರ ಆಷಾಢ ಪೂರ್ಣಿಮೆ ಅಥವಾ ಗುರು ಪೂರ್ಣಿಮೆ ಪ್ರಯಕ್ತ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಕಾನ್ಫರೆನ್ಸ್ ಆಯೋಜಿಸಿರುವ ಧಮ್ಮ ಚಕ್ರದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧನ ತತ್ವಾದರ್ಶಗಳು ಹಿಂದೆ ಸಕಾಲಿಕವಾಗಿದ್ದವು. ಈಗಲೂ ಸಕಾಲಿಕವಾಗಿವೆ, ಮುಂದೆ ಕೂಡ ಸಕಾಲಿಕವಾಗಿರುತ್ತವೆ. ಬುದ್ಧನ ಅಷ್ಟಾಂಗ ಮಾರ್ಗಗಳು ಸಮಾಜ ಹಾಗೂ ರಾಷ್ಟ್ರಗಳ ಏಳಿಗೆಗೆ ದಾರಿ ತೋರಿವೆ. ಕರುಣೆ ಹಾಗೂ ಸಹಾನುಭೂತಿಯ ಮಹತ್ವಗಳನ್ನು ಸಾರುತ್ತವೆ.
ಬುದ್ಧನ ಬೋಧನೆಗಳನ್ನು ಯುವಜನತೆ ಅಳವಡಿಸಿಕೊಂಡರೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ದಿನವನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ನಮಗೆ ಅರಿವನ್ನು ಮೂಡಿಸುವ ಗುರುಗಳನ್ನು ಸ್ಮರಿಸುವ ದಿನವಾಗಿದೆ. ಈ ದೃಷ್ಟಿಯಿಂದ ನಾವು ಇಂದು ಬುದ್ಧನಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
21ನೇ ಶತಮಾನವು ಎಲ್ಲರಿಗೂ ಒಳ್ಳೆಯದಾಗ ಬಹುದು ಎಂಬ ವಿಶ್ವಾಸವಿದೆ. ಬುದ್ಧನ ಸಂದೇಶಗಳು ಜಗತ್ತಿನ ಸುಸ್ಥಿರತೆಗೆ ಪೂರಕವಾಗಿವೆ. ನಾವು ಯಾವುದೇ ಸಂದಿಗ್ಧ ಪರಿಸ್ಥಿತಿ ಬಂದರೂ ಎದುರಿಸಲು ಸಜ್ಜಾಗಿರ ಬೇಕು. ಜನರಲ್ಲಿ ವಿಶ್ವಾಸವನ್ನು ವೃದ್ಧಿಸಲು ಏನು ಸಾಧ್ಯವೋ ಅವುಗಳನ್ನು ನಾವು ಮಾಡಬೇಕಿದೆ. ಯುವ ಪ್ರತಿಭಾವಂತರು ಜಾಗತಿಕ ಸಮಸ್ಯೆಗಳ ನಿವಾರಣೆಗೆ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದರು.