Advertisement

ಮಳೆ, ಪ್ರವಾಹ ಕಾರಣ ಕರಾವಳಿಯಲ್ಲಿ ಸರಳ ರೀತಿಯಲ್ಲಿ ಬಕ್ರೀದ್‌ ಆಚರಣೆ

12:45 AM Aug 13, 2019 | Sriram |

ಮಂಗಳೂರು/ಉಡುಪಿ: ಮುಸ್ಲಿಮರ ಎರಡನೇ ದೊಡ್ಡ ಹಬ್ಬ ಬಕ್ರೀದ್‌ ಅನ್ನು ಕರಾವಳಿಯಲ್ಲಿ ಸೋಮವಾರ ಅತ್ಯಂತ ಸರಳವಾಗಿ ಆಚರಿಸಲಾಯಿತು.ಭಾರೀ ಮಳೆ ಮತ್ತು ನೆರೆಯ ಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಹತ್ತು ಹಲವು ಸಾವು- ನೋವಿನ ಘಟನೆಗಳು ಸಂಭವಿಸಿದ್ದಲ್ಲದೆ ಸಾವಿರಾರು ಮಂದಿ ಸಂತ್ರಸ್ತರಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಬಕ್ರೀದ್‌ ಹಬ್ಬವನ್ನು ಸರಳವಾಗಿ ಆಚರಿಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಮತ್ತಿತರ ಮತ್ತು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು ಸಹಿತ ಎಲ್ಲೆಡೆ ಇರುವ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಜ್‌, ಧರ್ಮ ಗುರುಗಳಿಂದ ಈದ್‌ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್‌ ಶುಭಾಶಯ ವಿನಿಮಯ ನಡೆಯಿತು. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರವಾದಿ ಬದುಕು ಆದರ್ಶ
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಅವರು ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತಾº ಪ್ರವಚನ ನೀಡಿದರು. “ಏಕ ದೇವ ವಿಶ್ವಾಸದ ಸಮಾಜ ಸ್ಥಾಪನೆಗಾಗಿ ಪ್ರವಾದಿ ಇಬ್ರಾಹಿಂ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಹತ್ತು ಹಲವು ಸವಾಲು- ಸ್ವಪರೀಕ್ಷೆಗಳನ್ನು ಎದುರಿಸಿ, ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಸ್ವಂತ ಮಗನನ್ನು ಬಲಿ ಅರ್ಪಿಸಲು ಹಿಂಜರಿದಿರಲಿಲ್ಲ. ಅವರ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದ ಖಾಝಿ ಅವರು ನೆರೆಹಾವಳಿಯ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಲಹೆ ಮಾಡಿದರು.

ಶಾಸಕ ಯು.ಟಿ. ಖಾದರ್‌, ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ. ಎಸ್‌. ಮುಂತಾದ ಗಣ್ಯರು ಶುಭ ಹಾರೈಸಿದರು.

ಬಕ್ರೀದ್‌ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ ಎಂದು ಹೇಳಿದ ಯು.ಟಿ. ಖಾದರ್‌ ಪ್ರಸ್ತುತ ನಮ್ಮ ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ನೆರೆ ಬಂದು ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್‌ ಹಬ್ಬವನ್ನು ಆಚರಿಸುತ್ತಿದ್ದೇವೆ. ಮುಂದೆ ಇಂತಹ ಅನಾಹುತ ನಡೆಯದಿರಲಿ. ಅಲ್ಲಾಹು ಎಲ್ಲರಿಗೂ ಸುಖ, ಶಾಂತಿ ನೀಡಲೆಂದು ಪ್ರಾರ್ಥಿಸಿದ್ದೇವೆ ಎಂದರು.

Advertisement

ದೇಣಿಗೆ ಸಂಗ್ರಹ
ನಮಾಜ್‌ ಬಳಿಕ ಮಸೀದಿಗಳಲ್ಲಿ ಮುಸ್ಲಿಂ ಸಂಘಟನೆಗಳು ನೆರೆ ಸಂತ್ರಸ್ತರಿಗಾಗಿ ದೇಣಿಗೆಯನ್ನು ಸಂಗ್ರಹಿಸಿದರು. ಕೆಲವು ಉದಾರ ದಾನಿಗಳು ವೈಯಕ್ತಿಕವಾಗಿ ದೇಣಿಗೆಯನ್ನು ನೀಡಿದರು. ಮಾತ್ರವಲ್ಲದೆ ಬಳಿಕ ಕೆಲವು ಸಂಘಟನೆಗಳ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next