ಬೆಂಗಳೂರು: ಉನ್ನತ ಸಂಶೋಧನೆ ಹಾಗೂ ಶೈಕ್ಷಣಿಕ ವಿಚಾರಗಳಿಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಮಲೇಷಿಯಾದ ಕೌಲಾಲಂಪುರದ ಲಿನ್‌ಕ್ಲೌನ್ ವಿಶ್ವವಿದ್ಯಾಲಯ ಶನಿವಾರ ಒಡಂಬಡಿಕೆಯೊಂದಕ್ಕೆ ಸಹಿ ಮಾಡಿವೆ.
ಸಂಶೋಧನೆ, ಶಿಕ್ಷಕರು, ಸಂಶೋಧನಾ ಮಾರ್ಗದರ್ಶಕರು, ಸಂಶೋಧನಾ ವಿದ್ಯಾರ್ಥಿಗಳು, ದ್ವಿ-ಪದ ಕೋರ್ಸುಗಳು, ಭಾರತ ಮತ್ತು ಮಲೇಷಿಯಗಳಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣಗಳ ಆಯೋಜನೆ ಕುರಿತು ಒಂಡಂಬಡಿಕೆಯಾಗಿದೆ.
ಲಿನ್‌ಕ್ಲೌನ್ ವಿವಿಯ ಕುಲಪತಿ ಡಾ.ಅಮಿಯ ಭಾಮಿಕ್ ಮಾತನಾಡಿ, ನಮ್ಮ ವಿವಿಯಲ್ಲಿ ಸಂಶೋಧನೆಗೆ ಬೇಕಾದ ಅಗತ್ಯ ಆಧುನಿಕ ಸೌಲಭ್ಯವಿದೆ. ಇದನ್ನು ಭಾರತದ ವಿದ್ಯಾರ್ಥಿಗಳು ಈ ಮೂಲಕ ಸದುಪಯೋಗ ಮಾಡಿಕೊಳ್ಳಬಹುದು ಎಂದರು.
ಬೆಂವಿವಿ ಕುಲಪತಿ ಪ್ರೊ. ವೇಣುಗೋಪಾಲ್ ಮಾತನಾಡಿ, ಬಹುವಿಷಯವಾಗಿ ಅಂತರ್‌ಶಿಕ್ಷಣ ಸಂಶೋಧನೆಗೆ ಆಯೋಜಿಸಲಾಗಿದ್ದು, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಮೂಲ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಬೆಂವಿವಿ ಕುಲಸಚಿವ ಡಾ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಎಂ.ನಾರಾಯಣಸ್ವಾಮಿ, ಪರಿಶಿಷ್ಟ ಜಾತಿ, ಪಂಗಡ ಕೋಶದ ವಿಶೇಷಾಧಿಕಾರಿ ವಿಶೇಷಾಧಿಕಾರಿ ಡಾ.ಎಂ. ನಾರಾಯಣಸ್ವಾಮಿ, ವಾಣಿಜ್ಯ ವಿಭಾಗದ ಡೀನ್ ಪ್ರೊ. ಎಂ. ಮುನಿನಾರಾಯಣಪ್ಪ ಮೊದಲಾದವರು ಇದ್ದರು.