ಬಾಗಲಕೋಟೆ: ವಿದ್ಯಾಗಿರಿ, ನವನಗರ ಹಾಗೂ ಹಳೆಯ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆಯ ಹೆರಕಲ್ ಯೋಜನೆ ಅನುಷ್ಠಾನದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ತಪ್ಪು ಮಾಡಿದೆ. ಆರು ದಿನಗಳ ಬಳಿಕ ಚುನಾವಣೆ ನೀತಿ ಸಂಹಿತೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಈ ಯೋಜನೆ ಅನುಷ್ಠಾನದಲ್ಲೇ ಬಿಟಿಡಿಎ ತಪ್ಪು ಮಾಡಿದೆ ಎಂಬ ಭಾವನೆ ನನ್ನದು. ರಸ್ತೆ, ಚರಂಡಿ ಕಾಮಗಾರಿ ಕೈಗೊಂಡು, ನಿವೇಶನಗಳ ಅಭಿವೃದ್ಧಿಪಡಿಸುವ ಹೊಣೆ ಹೊತ್ತಿರುವ ಬಿಟಿಡಿಎ, ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳುವ ಅಗತ್ಯವಿರಲಿಲ್ಲ. ಈ ಯೋಜನೆಯನ್ನು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ವಾಟರ್ ಬೋರ್ಡ್)ಗೆ ಕೊಡಬೇಕಿತ್ತು. ಆದರೂ, ಬಿಟಿಡಿಎ ಈ ಯೋಜನೆ ಕೈಗೊಂಡು, ಲೋಪವೆಸಗಿದೆ ಎಂದು ತಿಳಿಸಿದರು.
ಹೆರಕಲ್ ಯೋಜನೆಗೆ ಇಬ್ಬರು ಮುಖ್ಯಮಂತ್ರಿಗಳು ಭೂಮಿಪೂಜೆ ಮಾಡಿರುವುದು ನನಗೆ ಗೊತ್ತಿಲ್ಲ. ನಾನು ಪೂಜೆಯನ್ನೂ ಮಾಡುವುದಿಲ್ಲ. ಉದ್ಘಾಟನೆ ಮಾಡುತ್ತೇನೆ. ಸ್ವಲ್ಪ ದಿನ ಕಾಯಿರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬರ ನಿರ್ವಹಣೆ ತೃಪ್ತಿ ಇಲ್ಲ: ಜಿಲ್ಲೆಯಲ್ಲಿ ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಪರಿಹಾರ ಕಾರ್ಯಗಳಿಂದ ನಮಗೆ ತೃಪ್ತಿ ಇಲ್ಲ. ಇದಕ್ಕೆ ಚುನಾವಣೆ ನೀತಿ ಸಂಹಿತೆ ಕಾರಣ ಎಂದು ನಾನು ಭಾವಿಸಿದ್ದೇನೆ. ನೀತಿ ಸಂಹಿತೆ ಇರುವುದರಿಂದ ಯಾವ ಜನಪ್ರತಿನಿಧಿಗಳೂ ನಮಗೆ ಏನೂ ಹೇಳುವುದಿಲ್ಲ ಎಂಬ ನಿಷ್ಕಾಳಜಿಯಿಂದ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಹೀಗಾಗಿ ಬರ ನಿರ್ವಹಣೆ ಸರಿಯಾಗಿ ನಡೆದಿಲ್ಲ ಎಂಬುದು ನಿನ್ನೆಯ ಸಭೆಯಿಂದ ಕಂದಾಯ ಸಚಿವ ದೇಶಪಾಂಡೆ ಮತ್ತು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.
Advertisement
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ನಗರಕ್ಕೆ ಹೊಂದಿಕೊಂಡೇ ಘಟಪ್ರಭಾ ನೀರಿದ್ದರೂ ಸರಿಯಾಗಿ ಪೂರೈಸಲು ಆಗಿಲ್ಲ. ಇದಕ್ಕೆ ಈ ಹಿಂದೆ ಏನೇನಾಗಿದೆ ಎಂದು ನೋಡುವ ಬದಲು, ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಆರು ವರ್ಷಗಳಿಂದಲೂ ಕೈಗೊಳ್ಳದ ಬಿಟಿಡಿಎ ಅಧಿಕಾರಿಗಳಿಗೆ ಎಚ್ಚರಿಕೆ ಮೂಡಿಸುವ ಅಗತ್ಯವಿದೆ ಎಂದರು.
Related Articles
ನಾವು ತೆಲಂಗಾಣಕ್ಕೆ ಕೊಟ್ಟಿದ್ದೇವೆ; ಮಹಾರಾಷ್ಟ್ರ ನೀರು ಕೊಡಲಿ
ಬಾಗಲಕೋಟೆ: ಆಲಮಟ್ಟಿ ಜಲಾಶಯ ನಿರ್ಮಾಣಗೊಂಡ ಬಳಿಕ ಇದೇ ಮೊದಲಿಗೆ ಇತಿಹಾಸದಲ್ಲಿ ನಾವು ಬೇಸಿಗೆಯಲ್ಲೂ ತೆಲಂಗಾಣಕ್ಕೆ ಕುಡಿಯುವ ಉದ್ದೇಶಕ್ಕಾಗಿ ನೀರು ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು, ಮಾನವೀಯತೆ ದೃಷ್ಟಿಯಿಂದ ತೆಲಂಗಾಣಕ್ಕೆ ನೀರು ಬಿಡಿಸಿದ್ದು, ಅದೇ ರೀತಿ ಮಹಾರಾಷ್ಟ್ರ ಕೂಡ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
Advertisement
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮಾನವೀಯತೆಯಿಂದ ನೀರು ಬಿಡಬೇಕು. ತೆಲಂಗಾಣದಲ್ಲಿ ಬೇರೆ ಪಕ್ಷದ ಸರ್ಕಾರವೇ ಇದೆ. ಅಲ್ಲಿನ ಸಿಎಂ ಮನವಿ ಮೇರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಆಲಮಟ್ಟಿ ಜಲಾಶಯದಿಂದ ಆಂಧ್ರಕ್ಕೆ ನೀರು ಬಿಡಿಸಿದ್ದಾರೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರವೂ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಸಮಸ್ಯೆ ಇಲ್ಲ. ಗಲಗಲಿ ಬ್ಯಾರೇಜ್ ಮೇಲ್ಭಾಗದಲ್ಲಿ ಹಿನ್ನೀರು ಆಶ್ರಯಿಸಿಕೊಂಡಿದ್ದ ಯೋಜನೆ, ಗ್ರಾಮ, ಜನವಸತಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನೀರು ಬಿಡುವ ವಿಷಯದಲ್ಲಿ ಮಹಾರಾಷ್ಟ್ರ ವಿಳಂಬ ಮಾಡುತ್ತಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯ ಮಾಡದೇ, ಬಿಜೆಪಿ ಹೆಚ್ಚು ಕಾಳಜಿ ವಹಿಸಬೇಕು. ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಕೃಷ್ಣೆಗೆ ನೀರು ಬಿಡಿಸುವಲ್ಲಿ ಬಿಜೆಪಿ ನಾಯಕರು ಕಾಳಜಿ ವಹಿಸಿದರೆ ಶೀಘ್ರ ನೀರು ಬರಲಿದೆ ಎಂದರು.
ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ಹಿಡಕಲ್ ಡ್ಯಾಂನಲ್ಲಿ ಇರುವ ಅಲ್ಪ ನೀರಿನಲ್ಲೇ ಹಂಚಿಕೊಂಡು, ಕಾಲುವೆ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲು ಗಂಭೀರ ಚಿಂತನೆ ನಡೆದಿದೆ. ಆದರೆ, ಹಿಡಕಲ್ ಡ್ಯಾಂನಲ್ಲೂ ಹೆಚ್ಚು ನೀರಿಲ್ಲ. ಆ ಭಾಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.