Advertisement

ನೆರೆ ಪ್ರದೇಶಕ್ಕಿಳಿದ ಬಿಎಸ್‌ವೈ ಹೊಸ ಟೀಂ

10:47 AM Aug 23, 2019 | Lakshmi GovindaRaj |

ಖಾತೆ ಹಂಚಿಕೆಗೂ ಮುನ್ನವೇ ನೂತನ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಮಂಗಳವಾರ ಸಚಿವ ಸಂಪುಟ ವಿಸ್ತರಣೆಯಾದ ನಂತರ ನಡೆದ ಔಪಚಾರಿಕ ಸಂಪುಟ ಸಭೆಯಲ್ಲಿ ಸಚಿವರಿಗೆ ಪ್ರವಾಹ ಪೀಡಿತ ಜಿಲ್ಲೆಗಳ ಹೊಣೆಗಾರಿಕೆ ನೀಡಿ, ತಕ್ಷಣವೇ ಆ ಪ್ರದೇಶಗಳಿಗೆ ತೆರಳಿ, ಸಂತ್ರಸ್ತರ ಅಹವಾಲು ಆಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಬುಧವಾರ ಬಾಗಲಕೋಟೆಗೆ ಈಶ್ವರಪ್ಪ,ಗೋವಿಂದ ಕಾರ ಜೋಳ, ಧಾರವಾಡಕ್ಕೆ ಜಗದೀಶ ಶೆಟ್ಟರ್‌, ಬೆಳಗಾವಿಗೆ ಲಕ್ಷ್ಮಣ ಸವದಿ, ಶಶಿ ಕಲಾ ಜೊಲ್ಲೆ, ಚಿಕ್ಕಮಗಳೂರಿಗೆ ಸಚಿವ ಮಾಧುಸ್ವಾಮಿ ಹಾಗೂ ಸಿ.ಟಿ. ರವಿ, ಕೊಡಗಿಗೆ ಸುರೇಶ್‌ ಕುಮಾರ್‌ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

Advertisement

ಸಚಿವರ ಭೇಟಿ ವೇಳೆ ಸ್ಥಳೀಯ ಶಾಸಕರು ಗೈರು
ಮಡಿಕೇರಿ: ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದ ಜಿಲ್ಲೆಯ ಹಿರಿಯ ಶಾಸಕರಿಬ್ಬರು, ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲೂ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಗೆಡಹಿದ್ದಾರೆ. ಕೊಡಗು ಜಿಲ್ಲೆಗೆ ಬುಧವಾರ ಸಚಿವ ಸುರೇಶ್‌ ಕುಮಾರ್‌ ಭೇಟಿ ನೀಡಿದ್ದರು.

ಮಳೆಯಿಂದ ಹಾನಿಗೊಳಗಾಗಿರುವ ಸೋಮವಾರಪೇಟೆ ತಾಲೂಕಿನ ಕುಶಾಲ ನಗರ, ನೆಲ್ಯಹುದಿಕೇರಿ, ವೀರಾಜಪೇಟೆ ತಾಲೂಕಿನ ಕರಡಿಗೋಡು, ಸಿದ್ದಾಪುರ, ವೀರಾಜಪೇಟೆ, ತೋರ ಮತ್ತು ಮಾಕುಟ್ಟ ಮತ್ತಿತರ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದರಾದರೂ ಈ ಸಂದರ್ಭ ಜಿಲ್ಲೆಯ ಶಾಸಕರಾಗಲಿ, ಪ್ರಮುಖ ಜನಪ್ರತಿನಿಧಿಗಳಾಗಲಿ ಹಾಜರಿರಲಿಲ್ಲ. ಸಚಿವ ಸಂಪುಟ ರಚನೆಯ ಬಗ್ಗೆ ತಮ್ಮ ಅಸಮಾಧಾನವನ್ನು ಮಂಗಳವಾರ ಬಹಿರಂಗವಾಗಿಯೇ ಹೊರಗೆಡವಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತು ಬಹಿರಂಗವಾಗಿ ಹೇಳಿಕೆ ನೀಡದಿದ್ದರೂ ಅತೃಪ್ತಿ ಹೊಂದಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸಚಿವರ ಪ್ರವಾಸದ ಸಂದರ್ಭ ಎಲ್ಲೂ ಕಾಣಿಸಿಕೊಳ್ಳಲಿಲ್ಲ.

ಬೋಪಯ್ಯ ಕರೆ ಸ್ವೀಕರಿಸಿಲ್ಲ: ಈ ಕುರಿತು ಸಚಿವ ಸುರೇಶ್‌ ಕುಮಾರ್‌ ಅವರನ್ನು ಪ್ರಶ್ನಿಸಿದಾಗ, “ನಾನು ಕೊಡಗಿಗೆ ಭೇಟಿ ನೀಡುವ ಕುರಿತು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ತಾವು ಬುಧವಾರ ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಕೆ.ಜಿ. ಬೋಪಯ್ಯ ಅವರಿಗೆ 4-5 ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗದಿರುವುದರಿಂದ ಅಸಮಾಧಾನಗೊಂಡಿದ್ದಾರೋ ಅಥವಾ ಬೇರೆ ಕಾರಣಗಳಿಗಾಗಿ ಅವರು ಹಾಜರಾಗಲಿಲ್ಲವೋ ಎಂಬುದು ತಿಳಿದಿಲ್ಲ’ ಎಂದರು.

ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಲಿದೆ
ಚಿಕ್ಕಮಗಳೂರು: ಅತಿವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಬುಧವಾರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗ ತುರ್ತಾಗಿ ಕೈಗೊಳ್ಳಬೇಕಿದ್ದ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಶಾಶ್ವತ ಪರಿಹಾರ ಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಲಿದೆ.

Advertisement

ಕೇಂದ್ರ ಗೃಹ ಖಾತೆ ಹಾಗೂ ಹಣಕಾಸು ಸಚಿವರು ರಾಜ್ಯಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದ್ದಾರೆ. ಇದು ರಾಷ್ಟ್ರೀಯ ವಿಪತ್ತು ಎಂದು ಘೋಷಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎನ್‌ಡಿಆರ್‌ಎಫ್‌ ನಿಯಮದಡಿ ನೀಡುವ ಪರಿಹಾರವನ್ನು ಹೆಚ್ಚಿಸುವ ಬಗ್ಗೆ ಸಹ ಕೇಂದ್ರದೊಂದಿಗೆ ಮಾತನಾಡಲಾಗುವುದು. ಆದರೆ, ಇದು ರಾಷ್ಟ್ರವ್ಯಾಪಿ ನೀತಿಯಾಗಬೇಕಾಗಿರುವುದರಿಂದ ಈ ಬಗ್ಗೆ ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.

ಅತಿವೃಷ್ಟಿಯಲ್ಲೂ ರಾಜಕಾರಣ ಸಾಧುವಲ್ಲ
ಚಿಕ್ಕಮಗಳೂರು: ಅತಿವೃಷ್ಟಿಯಿಂದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಎಂದು ಸಚಿವ ಸಿ.ಟಿ.ರವಿ ಅವರು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಲು ತಡ ಮಾಡಿದೆ ಎಂದು ಆರೋಪಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಸಂದರ್ಭದಲ್ಲಿ ರಾಜಕೀಯ ಮಾತನಾಡಬಾರದು ಎಂದು ಉದ್ದೇಶಿಸಿದ್ದೆ. ಆದರೆ, ಕುಮಾರಸ್ವಾಮಿ, ದಿನೇಶ್‌ ಗುಂಡೂರಾವ್‌ ಅವರು ಇಲ್ಲಿಯೂ ರಾಜಕೀಯ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ರಾಜ್ಯವನ್ನು ಕಡೆಗಣಿಸಿಲ್ಲ: ಕೇಂದ್ರ ಸರ್ಕಾರ ಯಾವುದೇ ರಾಜ್ಯವನ್ನೂ ಕಡೆಗಣಿಸಿಲ್ಲ. ತಮಿಳುನಾಡು, ಕೇರಳ ಸೇರಿದಂತೆ ಎಲ್ಲ ರಾಜ್ಯಗಳಿಗೂ ನೆರವು ನೀಡಿದೆ. ಕರ್ನಾಟಕಕ್ಕೆ ಇನ್ನೂ ಸೂಕ್ತ ಅನುದಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಸಚಿವರು ಹೇಳಿದರು. ಎನ್‌ಡಿಆರ್‌ಎಫ್‌ ಗೈಡ್‌ಲೈನ್‌ ಪ್ರಕಾರ ಈಗಾಗಲೆ ಕೇಂದ್ರ ಸರ್ಕಾರ 180 ಕೋಟಿ ರೂ.ಗಳ ತಾತ್ಕಾಲಿಕ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 365 ಕೋಟಿ ರೂ.ಬಿಡುಗಡೆ ಮಾಡಿದೆ. ಈ ಹಣದಲ್ಲಿ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿಯೂ ಈಗ 7 ಕೋಟಿ ರೂ.ಲಭ್ಯವಿದ್ದು, ಹಣದ ಕೊರತೆ ಇಲ್ಲ. ಸದ್ಯದ ಮಾಹಿತಿಯಂತೆ ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 641 ಕೋಟಿ ರೂ. ನಷ್ಟವಾಗಿದೆ. ಇಲ್ಲಿನ ಪರಿಸ್ಥಿತಿಯ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ವಿಶೇಷ ಪ್ಯಾಕೇಜ್‌ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ನಿಮ್ಮೊಂದಿಗೆ ಸರ್ಕಾರವಿದೆ
ಸಿಂಧನೂರು: ನೆರೆಹಾವಳಿಗೆ ತುತ್ತಾದ ಜನ ಭಯ ಪಡಬೇಕಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ ಎಂದು ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ. ಪ್ರವಾಹದಿಂದ ನೆರೆಹಾವಳಿಗೆ ತುತ್ತಾದ ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳ ಗ್ರಾಮಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ನಿವೇಶನ ಕಳೆದುಕೊಂಡವರಿಗೆ ಶೀಘ್ರದಲ್ಲಿಯೇ ನಿವೇಶನ ಒದಗಿಸುವ ಕೆಲಸ ಹಾಗೂ ಭಾಗಶ: ಮನೆ ಬಿದ್ದವರಿಗೆ ಒಂದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಬದ್ಧವಿದೆ. ನೆರೆಹಾವಳಿಗೆ ತುತ್ತಾದ ಜನ ಭಯ ಪಡಬೇಕಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ ಎಂದರು. ಕಳೆದ ಬಾರಿ ನೆರೆ ಹಾವಳಿಗೆ ತುತ್ತಾದ ಸಿಂಧನೂರು ತಾಲೂಕಿನಲ್ಲಿ ಇದುವರೆಗೂ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸದಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದು ಸಂಬಂಧಿಸಿದ ಸಚಿವರ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೂಚಿಸಿದ್ದೇನೆ- ಬಿಎಸ್‌ವೈ
ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ನೂತನ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಂಪುಟ ವಿಸ್ತರಣೆಯಾಗಿದ್ದು, 17 ಸಚಿವರಿಗೂ ಜಿಲ್ಲಾ ಹೊಣೆಗಾರಿಕೆ ನೀಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಅಹವಾಲು ಸ್ವೀಕರಿಸಲು ಸೂಚಿಸಿದ್ದೇನೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಪುನರ್ವಸತಿ ಸಹಿತ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ರಾಜ್ಯದ ಜನತೆಯೂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದೆ. ಮಠಗಳು ಸಾಕಷ್ಟು ನೆರವು ನೀಡುತ್ತಿವೆ. ಧರ್ಮಸ್ಥಳ ಕ್ಷೇತ್ರ, ಸಿದ್ಧಗಂಗಾ ಮಠ ಸೇರಿ ಎಲ್ಲ ಸಂಘ-ಸಂಸ್ಥೆಗಳು ನೆರವಿನ ಹಸ್ತ ಚಾಚಿವೆ ಎಂದು ಹೇಳಿದರು.

ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ 1,028 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿದೆ. ಇನ್ನಷ್ಟು ಅನುದಾನಕ್ಕಾಗಿ ಬೇಡಿಕೆಯಿದೆ. ಈ ಕುರಿತು ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
-ಜಗದೀಶ್‌ ಶೆಟ್ಟರ್‌, ಸಚಿವ

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮಗ್ರ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಡುವ ಜವಾಬ್ದಾರಿ ಸರಕಾರದ ಮೇಲಿದೆ. ಸಂತ್ರಸ್ತರ ಜೊತೆ ಸರಕಾರ ಇದೆ ಎಂದು ಪ್ರವಾಹ ಪೀಡಿತ ಜನರಿಗೆ ಧೈರ್ಯ ತುಂಬುತ್ತೇವೆ.
-ಲಕ್ಷ್ಮಣ ಸವದಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next