ದಾವಣಗೆರೆ: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವುದು ಕನಸಿನ ಮಾತು. ಮುಂದಿನ ಮೂರು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರುವರು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನ ನಡೆಯುವುದೇ ಇಲ್ಲ. ಮೂರು ವರ್ಷ ಅವರೇ ಮುಖ್ಯಮಂತ್ರಿ ಅಗಿರುವರು ಎಂದರು.
ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುತ್ತದೆ ಎಂಬ ಊಹಾಪೋಹ ಮೊದಲನಿಂದಲೂ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿ ಊಹಾಪೋಹಗಳು ಇದ್ದವು. ಪ್ರಧಾನಿ ಮೋದಿ ಅವರನ್ನು ಎಲ್ಲರೂ ಅಧಿಕಾರದಲ್ಲಿದ್ದಾಗ ಇಂತಹ ಊಹಾಪೋಹ ಇರುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಮಾಹಿತಿ ಇಲ್ಲ, ಪಕ್ಷದ ತೀರ್ಮಾನಕ್ಕೆ ಬದ್ಧ: ಸಚಿವ ಕೋಟ
ಯಡಿಯೂರಪ್ಪ ವರಿಷ್ಠರ ಮುಂದಿಟ್ಟಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದೇ ಇರಬಹುದು. ಆದರೆ, ಯಡಿಯೂರಪ್ಪ ಅವರ ಮನಸಿನಲ್ಲಿ ನನ್ನ ಹೆಸರು ಇದೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಆರು ತಿಂಗಳ ಮುಂಚೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವನು ನಾನು. ಹಿಂದಿನಿಂದಲೂ ಯಡಿಯೂರಪ್ಪ ಅವರ ಬೆನ್ನಿಗೆ ನಿಂತುಕೊಂಡಿದ್ದೇನೆ ಎಂದರು.
ನನಗೂ ಸಚಿವನಾಗ ಬೇಕು ಎಂಬ ಆಸೆ ಇದೆ. ಯಾವುದೇ ಶಾಸಕರಿಗೆ ಮಂತ್ರಿ ಅಗುವ ಆಸೆ ಇರುತ್ತದೆ. ಮಂತ್ರಿಯಾದವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇರುವುದು ಸಹಜ ಎಂದ ಅವರು ನಿಮಗೆ ಯಾವ ಖಾತೆ ಬೇಕಿತ್ತು ಎಂಬ ಪ್ರಶ್ನೆಗೆ ಕೂಸು ಹುಟ್ಟು ವ ಮುನ್ನವೇ ಕುಲಾಯಿ ಯಾಕೆ ಎಂದು ಹಾಸ್ಯ ಚಟಾಕಿ ಹಾರಿಸಿದರು.