Advertisement

ಸಿದ್ದು ವಿರುದ್ಧ ಹಿಂದುಳಿದವರು ಒಟ್ಟಾಗಬೇಕೆಂದ ಬಿಎಸ್‌ವೈ

11:42 AM Jul 24, 2017 | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದೀಗ ಜಾತಿಯ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುವ ಮೂಲಕ ಜನರ ಮನಸ್ಸು ಕೆಡಿಸುತ್ತಿದೆ. ಇದರ ವಿರುದ್ಧ ಹಿಂದುಳಿದ ವರ್ಗಗಳು ಒಟ್ಟಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

 ಅರಮನೆ ಮೈದಾನದಲ್ಲಿ ಭಾನುವಾರ ತಮಗೆ ಹಾಗೂ ಬಿಜೆಪಿಯ ಎಲ್ಲಾ ಹಿರಿಯ ನಾಯಕರಿಗೆ ಕೆ.ಪಿ.ನಂಜುಂಡಿ ನೇತೃತ್ವದ ವಿಶ್ವಕರ್ಮ ಮಹಾಸಭಾ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ, ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಕ್ಕೆ ಶಾಪ ಹಾಕುತ್ತಿರುವ ರಾಜ್ಯದ ಜನ ಈ  ಸರ್ಕಾರ ಯಾವಾಗ ಹೋಗುತ್ತದೆ ಎಂದು ಕಾಯುತ್ತಿದ್ದಾರೆ ಎಂದರು. 

ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಭವ್ಯ ಕರ್ನಾಟಕದ ಕಲ್ಪನೆಯೊಂದಿಗೆ ಆಡಳಿತ ನಡೆಸಿದ್ದೆವು. ಆದರೆ, ಕಾಂಗ್ರೆಸ್‌ ಕಳೆದ ನಾಲ್ಕೂಕಾಲು ವರ್ಷದಲ್ಲಿ ರಾಜ್ಯ ದುಸ್ಥಿತಿಗೆ ತಲುಪಿದೆ. ಎಲ್ಲರ ನಾಯಕರಾಗಬೇಕಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಒಂದೆರಡು ಸಮಾಜದ ನಾಯಕರಾಗಿ ಅಧಿಕಾರ ನಡೆಸುತ್ತಿದ್ದಾರೆಯೇ ಹೊರತು ಇತರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. 

ವಿಶ್ವಕರ್ಮ ಸಮುದಾಯದ ಕುರಿತು ಮಾತನಾಡಿದ ಅವರು, ಈಗಾಗಲೆ ಸಮುದಾಯದ ನಾಯಕ ಕೆ.ಪಿ.ನಂಜುಂಡಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲೂ ಸಮುದಾಯದವರಿಗೆ ಜವಾಬ್ದಾರಿ ನೀಡಲಾಗುವುದು. ಅಲ್ಲದೆ, ಮುಂದೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಸಮುದಾಯ ಗೌರವದಿಂದ ಬದುಕಲು ಅಗತ್ಯ ವ್ಯವಸ್ಥೆ ಮತ್ತು ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಎಲ್ಲರನ್ನೂ ಮುಳುಗಿಸುವ ಪಕ್ಷ ಕಾಂಗ್ರೆಸ್‌: ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದರೆ, ಸಿದ್ದರಾಮಯ್ಯ ಅವರ ಸರ್ಕಾರ ಸಮಾಜ ಒಡೆಯುವಂತಹ ಕಾರ್ಯಕ್ರಮಗಳತ್ತ ಗಮನಹರಿಸುತ್ತಿದೆ.

ಇನ್ನೊಂದೆಡೆ ಎಸಿಬಿ, ಸಿಐಡಿ ಮೂಲಕ ಭ್ರಷ್ಟರಿಗೆ ಕ್ಲೀನ್‌ಚಿಟ್‌ ನೀಡಿ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಎಲ್ಲರನ್ನೂ ಮುಳುಗಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್‌ ಪಕ್ಷವಾಗಿದ್ದು, ಇದೆಲ್ಲಕ್ಕೂ ಅಂತ್ಯ ಹಾಡಬೇಕಾಗಿದೆ ಎಂದರು. ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಕಾಳಹಸ್ತೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಶಾಸಕರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಅರವಿಂದ್‌ ಬೆಲ್ಲದ್‌, ವಿಶ್ವಕರ್ಮ ಸಮುದಾಯದ ಮುಖಂಡರು, ವಿವಧ ಮಠಗಳ ಮಠಾಧೀಶರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next