ಶಿವಮೊಗ್ಗ: ಈ ಬಾರಿಯದು ಅದ್ಭುತ ಸಂಘಟನೆಯ ಚುನಾವಣೆಯಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಎಂಟು ವಿಧಾನಸಭಾ ಕೇÒತ್ರದಲ್ಲೂ ಹೆಚ್ಚಿನ ಲೀಡ್ ಸಿಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪನವರನ್ನು ಮುಗಿಸಲು ಮಧು ಬಂಗಾರಪ್ಪ ಅಥವಾ ಮೈತ್ರಿ ಪಕ್ಷದವರು ಬೇಕಿಲ್ಲ. ಸ್ವತ: ಅವರ ಪಕ್ಷದವರೇ ಯಡಿಯೂರಪ್ಪನವರನ್ನು ಮುಗಿಸಲಿದ್ದಾರೆ ಎಂದರು.
“ಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ನನಗೆ ಸಹಾಯ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಮೇ 23ರ ಬಳಿಕ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾರೆ. ಮೇ 23ರ ಬಳಿಕ ಸರ್ಕಾರ ಬೀಳುವುದು ಖಚಿತ. ಆದರೆ ರಾಜ್ಯ ಸರ್ಕಾರವಲ್ಲ. ಬದಲಿಗೆ ಕೇಂದ್ರ ಸರ್ಕಾರ ಪತನವಾಗಲಿದೆ’ ಎಂದು ಭವಿಷ್ಯ ನುಡಿದರು.
ಇದೇ ವೇಳೆ, ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯವರು ಸೊರಬ ಶಾಸಕರನ್ನು ರಾಜಕೀಯವಾಗಿ ಬಿಟ್ಟು ಬೇರೆ ರೀತಿ ಬಳಸಿಕೊಂಡರು. ಕುಮಾರ್ ಬಂಗಾರಪ್ಪ ಬಿಜೆಪಿಯವರಿಗೆ ಒಳ್ಳೆಯ ಪಿಆರ್ಒ ಆಗಿದ್ದಾನೆ ಅಷ್ಟೇ.
ಹೀಗಾಗಿ, ಕುಮಾರ್ ಬಂಗಾರಪ್ಪರಿಂದ ಒಗ್ಗಟ್ಟಾಗಿರುವುದಕ್ಕಿಂತ ಹೆಚ್ಚಿನ ಮತಗಳು ನನಗೆ ಬಂದಿರುವ ವಿಶ್ವಾಸವಿದೆ. ಅನಾವಶ್ಯಕವಾಗಿ ಶಿವರಾಜ್ ಕುಮಾರ್ ಹೆಸರನ್ನು ಎಳೆದು ತರಲಾಯಿತು. ಚುನಾವಣೆ ಸಮಯದಲ್ಲಿ ನಾನು ಟೀಕೆಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಸುಮ್ಮನಿದ್ದೆ. ಇನ್ನು ಸುಮ್ಮನಿರುವುದಿಲ್ಲ ಎಂದರು.