Advertisement

ಕೋವಿಡ್ ಸಮರದ ಸೇನಾನಿಗಳು ರಾಜ್ಯದ ಅಮೂಲ್ಯ ಆಸ್ತಿ : ಮುಖ್ಯಮಂತ್ರಿ ಬಿಎಸ್ ವೈ

06:45 PM May 15, 2021 | Team Udayavani |

ಬೆಂಗಳೂರು : ರಾಜ್ಯದ ಉದ್ದಗಲಕ್ಕೂ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಇತರರ ಜೀವ ಉಳಿಸಲು ತಮಗೆ ಬಂದೊದಗಬಹುದಾದ ಅಪಾಯ ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತ ಸಮೂಹವನ್ನು ರಾಜ್ಯದ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಣ್ಣಿಸಿದರು.

Advertisement

ರಾಜ್ಯದ ಎಲ್ಲ ಜಿಲ್ಲೆಯ ಕೋವಿಡ್ ಸಮರದ ಸೇನಾನಿಗಳೊಂದಿಗೆ ಸಿಎಂ ವಿಡಿಯೋ ಸಂವಾದ ನಡೆಸಿ ಕೋವಿಡ್ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯರೊಂದಿಗೆ ವೀಡಿಯೋ ಸಂವಾದ ನಡೆಸಿ ವೈದ್ಯರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರಲ್ಲದೆ, ವೈದ್ಯರು ಸೇವೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಶ್ನಿಸಿ, ವೈದ್ಯರಲ್ಲಿ ಆತ್ಮ ವಿಶ್ವಾಸ ತುಂಬಿದರು.

ಈ ವೇಳೆ ಮಾತನಾಡಿದ ಅವರು ಕೋವಿಡ್-19 ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ, ಇಂತಹ ಸಂದರ್ಭದಲ್ಲಿ ಅವರಿಗೆ ಮನೋಸ್ಥೈರ್ಯವನ್ನು ತುಂಬುವುದು ನಮ್ಮ ಜವಾಬ್ಧಾರಿಯಾಗಿದೆ ಎಂದರು.

ಇದನ್ನೂ ಓದಿ :ಸಂಕಷ್ಟದ ಸಮಯದಲ್ಲಿ ರಾಜಕಾರಣ ಸರಿಯಲ್ಲ : ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಕೋವಿಡ್ ಸಂದರ್ಭ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಿ. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕತೆಯಿಂದ ಬಳಸಿ ಎಂದು ಹಿತ ನುಡಿದ ಅವರು ಇತರರ ಜೀವ ಉಳಿಸಲು ತಮಗೆ ಬಂದೊದಗಬಹುದಾದ ಅಪಾಯ ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತ ಸಮೂಹವನ್ನು ರಾಜ್ಯದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರಲ್ಲದೆ, ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಈ ವೃಂದಕ್ಕೆ ರಾಜ್ಯದ ಜನತೆಯ ಪರವಾಗಿ ಹಾಗೂ ವೈಯುಕ್ತಿಕವಾಗಿಯೂ ಕೃತಜ್ಞತೆ ಸಲ್ಲಿಸಿದರು.

Advertisement

ಈಗಾಗಲೇ ಸ್ವತಃ ಕೋವಿಡ್ ಸೋಂಕಿಗೆ ತುತ್ತಾಗಿ, ಗುಣಮುಖರಾಗಿ ತಮ್ಮ ಸೇವೆಗೆ ಹಿಂದಿರುಗಿರುವ ವೈದ್ಯರ ಆರೋಗ್ಯ ಮತ್ತು ಅವರ ಮನೆಯವರ ಆರೋಗ್ಯವನ್ನು ವಿಚಾರಿಸಿದ ಮುಖ್ಯಮಂತ್ರಿಗಳ ನಡೆಗೆ ವೈದ್ಯರು ಸಹ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಯ ಡಾ ಲಕ್ಷ್ಮೀಪತಿ ಅವರು ಮಾತನಾಡಿ ಕೋವಿಡ್ ಪ್ರಾರಂಭವಾದ ದಿನದಿಂದಲೂ ಮನೆಗೇ ತೆರಳದೇ ಆಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿರುವ ತಮ್ಮ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸೇವೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದರು.

ಉಡುಪಿ ಜಿಲ್ಲೆಯ ಮಣಿಪಾಲದ ಡಾ ಶಶಿಕಿರಣ್ ಉಮಾಕಾಂತ್ ಅವರು ಕಿರಿಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿರುವುದನ್ನು ಶ್ಲಾಘೀಸಿದ ಮುಖ್ಯಮಂತ್ರಿಗಳಿಗೆ ಹೊಸದಾಗಿ ಸರ್ಕಾರ ನಿರ್ಧರಿಸಿರುವ ಅಂತಿಮ ವರ್ಷದ ವೈದ್ಯಕೀಯ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next