ಉಡುಪಿ: ಅಯೋಧ್ಯೆಯಲ್ಲಿ ರಾಮನನ್ನು ಪ್ರತಿಷ್ಠೆ ಮಾಡಿದ್ದ ಪೇಜಾವರ ಶ್ರೀಗಳು ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯನ್ನೂ ನೋಡುವಂತಾ ಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾರೈಸಿದ್ದಾರೆ.
ಶನಿವಾರ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಯೋಧ್ಯೆ ಕರಸೇವೆಯ ಸಮಯದಲ್ಲಿ ಅಲ್ಲಿ ರಾಮನ ಮೂರ್ತಿಯನ್ನು ಪೇಜಾವರ ಶ್ರೀಗಳು ಗಡಿಬಿಡಿಯಲ್ಲಿ ಪ್ರತಿಷ್ಠೆ ಮಾಡುವಾಗ ಅಲ್ಲಿದ್ದ ಹತ್ತಾರು ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ. ಮುಂದೆ ಭವ್ಯ ರಾಮಮಂದಿರ ನಿರ್ಮಾಣವಾಗುವಾಗ ಶ್ರೀಗಳು ಗುಣಮುಖರಾಗಿ ಅದರಲ್ಲಿ ಪಾಲ್ಗೊಳ್ಳಬೇಕೆಂಬುದು ದೇಶದ ಸಾವಿರಾರು ಜನರ ಅಪೇಕ್ಷೆಯಾಗಿದೆ ಎಂದರು.
ಅಪೂರ್ವ ಸ್ವಾಮೀಜಿ: ಪೇಜಾವರ ಶ್ರೀಗಳು ಸ್ವತಂತ್ರ ಭಾರತ ಕಂಡ ಅಪೂರ್ವ ಸ್ವಾಮೀಜಿ. ಅವರಷ್ಟು ರಸ್ತೆ ಮಾರ್ಗದಲ್ಲಿ ದೇಶ ಪರ್ಯಟನೆ ಮಾಡಿದ ಸ್ವಾಮೀಜಿ ಇನ್ನೊಬ್ಬರು ಇರಲಿಕ್ಕಿಲ್ಲ. ಓಡಾಟ ಜಾಸ್ತಿಯಾಗುತ್ತಿದೆ, ಕಡಿಮೆ ಮಾಡಿ ಎಂದು ನಾನೇ ವಿನಂತಿಸಿದ್ದೆ. ಆದರೂ, ಅವರು ನಾನಾ ಕಡೆ ಸಂಚರಿಸಿ ಭಕ್ತರನ್ನು ಅನುಗ್ರಹಿಸುತ್ತಿದ್ದರು.
ಒಂದು ತಿಂಗಳ ಹಿಂದೆ ಭೇಟಿ ಮಾಡಿದಾಗ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆ ನಿರ್ಮಿಸುತ್ತಿರುವುದು ತಿಳಿದು ಅನುದಾನವನ್ನೂ ಮಂಜೂರು ಮಾಡಿದ್ದೆ. ಭಕ್ತರು ಆಸ್ಪತ್ರೆಗೆ ಭೇಟಿ ಕೊಡುವುದು ಕಡಿಮೆ ಮಾಡಬೇಕು, ಶ್ರೀಗಳು ಗುಣಮುಖರಾಗಿ ಮತ್ತೆ ಶ್ರೀಕೃಷ್ಣ ಮಠಕ್ಕೆ ಬಂದು ಪೂಜೆ ಮಾಡುವ ಸುಯೋಗ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಸ್ವಾಮೀಜಿಗೆ 90 ವರ್ಷ ವಯಸ್ಸಾಗಿದೆ.
ತಜ್ಞ ವೈದ್ಯರು ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಎರಡು ದಿನಗಳಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾತನಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದರು.