ಹಾಸನ: ರಾಜ್ಯದಲ್ಲಿ ಮೂವರು ನಾಯಕರಿದ್ದಾರೆ. ಜನನಾಯಕ ಎಂದರೆ ಬಿ.ಎಸ್.ಯಡಿಯೂರಪ್ಪ. ಖಳನಾಯಕ ಸಿದ್ದರಾಮಯ್ಯ. ಇನ್ನು ಕಣ್ಣೀರು ನಾಯಕ
ಎಚ್.ಡಿ. ಕುಮಾರಸ್ವಾಮಿ. ಈ ವಿಷಯವನ್ನು ಭವಾನಿ ಅಕ್ಕನಿಗೆ ಕೇಳಿಸುವ ಹಾಗೆ ಬಿಜೆಪಿ ಕಾರ್ಯಕರ್ತರು ಹೇಳಿದರೆ ಭವಾನಿ ಅಕ್ಕನಿಗೆ ಖುಷಿಯಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಅಧ್ಯಕ್ಷರು ಹಾಗೂ ಬಿಎಲ್‌ಎ-2 ಸಂಕಲ್ಪ ಸಭೆಯಲ್ಲಿ ಮಾತನಾಡಿ, ರಾವಣ ರಾಜ್ಯವಾಗಿರುವ ಹಾಸನ ಜಿಲ್ಲೆಯನ್ನು ರಾಮರಾಜ್ಯ ವನ್ನಾಗಿ ಮಾಡುವ ಮೂಲಕ ಜೆಡಿಎಸ್ ಮುಕ್ತ ಜಿಲ್ಲೆ ಯಾಗಿಸಲು ಬಿಜೆಪಿ ಸಜ್ಜಾಗಿದೆ ಎಂದು ಹೇಳಿದರು.
ದೇವೇಗೌಡರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ ದೇವೇಗೌಡರನ್ನು ತುಳಿದು ಖಳನಾಯಕ ನಾದರು. ಕಾಂಗ್ರೆಸ್ ಪಕ್ಷಕ್ಕೆ ಹೋದ ಸಿದ್ದರಾಮಯ್ಯ ಅಲ್ಲಿಯೂ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಅವರ ಮುಗಿಸಿದರು. ಇನ್ನು ಕಣ್ಣಿರ ಕಥೆಯ ನಾಯಕ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಆಡಳಿತ ಮಾಡಲು ಬಿಡುತ್ತಿಲ್ಲ ಎಂದು ಕಣ್ಣಿರು ಹಾಕಿದರು ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಆಡಳಿತ ನಡೆಸಲಿಲ್ಲ ತಾಜ್ ಹೊಟೇಲ್ ನಲ್ಲಿ ಆಡಳಿತ ನಡೆಸಿದರು. ಶಾಸಕರು, ಮಂತ್ರಿಗಳು ಹೋದರೂ ಕುಮಾರಸ್ವಾಮಿ ಸಿಗುತ್ತಿರಲಿಲ್ಲ. ತಾಜ್ ಹೊಟೇಲ್‌ನ ಗೇಟ್ ಬಾಗಿಲು ಶಾಸಕ, ಮಂತ್ರಿಗಳಿಗೆ ತೆರೆಯಲಿಲ್ಲ. ಈ ರಾಜ್ಯದ ಅಭಿವೃದ್ಧಿಗಾಗಿ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಈಗಲೂ ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್, ಶಾಸಕ ಪ್ರೀತಂ ಜೆ. ಗೌಡ ಸೇರಿ ಹಲವರು ಉಪಸ್ಥಿತರಿದ್ದರು.