Advertisement

BSY ಭ್ರಷ್ಟಾಚಾರದ CD ಮಾತ್ರವಲ್ಲ; ಸಭ್ಯರು ನೋಡಲಾಗದ ಸಿ.ಡಿ ಕೂಡ ಇವೆ!: ಯತ್ನಾಳ್ ಹೊಸ ಬಾಂಬ್

07:53 PM Jan 14, 2021 | Team Udayavani |

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಎಸ್‌ವೈ ಭ್ರಷ್ಟಾಚಾರದ ಸಿ.ಡಿ ಅಷ್ಟೇ ಅಲ್ಲ, ಸಭ್ಯರು ನೋಡಲಾಗದಂತಹ ಸಿ.ಡಿ ಇವೆ. ಆ ಸಿಡಿ ಇಟ್ಟುಕೊಂಡೇ ಇಬ್ಬರು ಈಗ ಮಂತ್ರಿಯಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

Advertisement

ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಆರಂಭಗೊಂಡ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಅವರ ಮನೆಯಲ್ಲೇ ಅವರ ಮೊಮ್ಮಗ ಸಿ.ಡಿ ಮಾಡಿದ್ದಾರೆ. ಆ ಸಿ.ಡಿ ಯಾರೊಂದಿಗೆ ಇದೆ ಎಂಬುದು ಬಹುತೇರಿಗೆ ಗೊತ್ತೇ ಇದೆ. ನಾನು ಆ ಬಗ್ಗೆ ಏನೂ ಹೇಳಬೇಕಿಲ್ಲ. ಆ ಸಿ.ಡಿಯನ್ನೇ ಮೂವರು ನನ್ನ ಬಳಿ ತಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿ.ಡಿ ಇದ್ದರೆ ನಾನೇ ಉಪ ಮುಖ್ಯಮಂತ್ರಿಯಾಗುತ್ತಿದ್ದೆ ಎಂದರು.

ಯಡಿಯೂರಪ್ಪ ಅವರ ಆ ಸಿ.ಡಿ ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಆ ಸಿ.ಡಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿಯೇ ಇದೆ. ನಿಜವಾಗಿಯೂ ವಿರೋಧ ಪಕ್ಷ ಆಗಿದ್ದರೆ ಶಿವಕುಮಾರ್ ಸಿಡಿ ಬಿಡುಗಡೆ ಮಾಡಲಿ. ಡಿಕೆಶಿ ಮಾತನಾಡೋ ದಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತದೆ. ಸಿ.ಡಿ ಕುರಿತು ಸಿಬಿಐ ತನಿಖೆಯಾಗಲಿ. ಸಿದ್ದರಾಮಯ್ಯ, ಜಾರ್ಚ್, ಜಮೀರ್ ಅಹಮದ್, ಲಕ್ಷ್ಮಿ ಹೆಬ್ಬಾಳ್ಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗುವುದೇ ಸಿ.ಡಿ ಬ್ಲಾಕ್ ಮೇಲ್ ನಿಂದ ಎಂದು ಆರೋಪಿಸಿದರು.

ಅಮೀತ್ ಶಾಗೆ ದೂರು:

Advertisement

ಅಸಮಾಧಾನಗೊಂಡ ಶಾಸಕರು, ರಾಜ್ಯಕ್ಕೆ ಬರಲಿರುವ ಅಮೀತ್ ಶಾಗೆ ದೂರು ನೀಡುತ್ತೇವೆ. ಯಾರು ದೂರು ನೀಡುತ್ತಾರೋ, ಬಿಡುತ್ತಾರೆ ಗೊತ್ತಿಲ್ಲ. ದೂರು ನೀಡಿದರೆ ತಪ್ಪೇನು. ನಾವು ದೂರು ಕೊಡುತ್ತೇವೆ. ಎಲ್ಲ ಶಾಸಕರೂ ದೂರು ಕೊಡಲು ಸಿದ್ಧರಾಗಲಿ ಎಂದು ಹೇಳಿದರು.

ಎಲ್ಲ ಶಾಸಕರಿಗೆ ಅನ್ಯಾಯವಾಗುತ್ತಿದೆ. ಬಹಳ ನೋವಾಗಿದೆ. ನಮಗೆಲ್ಲ ಧೈರ್ಯ ಬಂದಿದೆ. ರಾಜಕೀಯ ಸ್ಥಾನಮಾನ ಸೇರಿ ನಮಗೆ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಗೇ ಕಿಮ್ಮತ್ತಿಲ್ಲ. ಬೇಕಾಬಿಟ್ಟಿಯಾಗಿ ನಿಗಮ ಮಂಡಳಿ ಸ್ಥಾನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅಸಮಾಧಾನಗೊಂಡ ಶಾಸಕರ ವಿರುದ್ಧ ಗರಂ ಆಗಲು ರಮೇಶ ಜಾರಕಿಹೋಳಿ ಯಾರು ಎಂದು ಪ್ರಶ್ನಿಸಿದ ಯತ್ನಾಳ, ತಮ್ಮ ತ್ಯಾಗದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಅದನ್ನು ಸ್ವಾಗತಿಸುತ್ತೇನೆ. ಆದರೆ, ಯಾವ ಶಾಸಕರೂ ಮಾತನಾಡಬಾರದು ಎಂದು, ಬಾಯಿಗೆ ಕೀಲಿ ಹಾಕಲು ಸಾಧ್ಯವಿಲ್ಲ. ಪಕ್ಷವನ್ನು ಯಡಿಯೂರಪ್ಪ ಅವರೊಬ್ಬರೇ ಕಟ್ಟಿಲ್ಲ. ಹಲವರ ಪರಿಶ್ರಮದಿಂದ ಪಕ್ಷ ಕಟ್ಟಿದ್ದೇವೆ ಎಂದರು.

ಇಡೀ ಕುಟುಂಬ ರಾಜಕೀಯದಲ್ಲ :

ಹಣ ಕೊಟ್ಟು ಸಚಿವರಾಗಿರುವ ವಿಷಯ ನಾನೊಬ್ಬನೇ ಹೇಳುತ್ತಿಲ್ಲ. ಎಲ್ಲರೂ ಹೇಳುತ್ತಿದ್ದಾರೆ ಎಂದ ಅವರು, ಯಡಿಯೂರಪ್ಪ ಮೊಮ್ಮಗ, ಸಂಬಂಧಿಕರೆಲ್ಲರೂ ರಾಜಕೀಯದಲ್ಲಿದ್ದಾರೆ. ಅವರ ಮಗಳು ಎರಡು ಇಲಾಖೆ ನೋಡಿಕೊಳ್ಳುತ್ತಿದ್ದಾರೆ. ಮೊಮ್ಮಕ್ಕಳು ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಪ್ರಧಾನಿ ಮೋದಿ ಅವರು ಆನುವಂಶಿಕ ರಾಜಕಾರಣ ವಿರೋಧಿಸಿದ್ದಾರೆ. ಅದಕ್ಕೆ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ಆನುವಂಶಿಕ ರಾಜಕಾರಣ ಮಾಡಿದವರ ರಾಜಕೀಯ ಅಂತ್ಯವಾಗಿದೆ ಎಂದರು.

ಸಿ.ಡಿ ನನ್ನ ಬಳಿ ಇಲ್ಲ:

ಯತ್ನಾಳ ಬಳಿ ಸಿ.ಡಿ ಇದೆ ಎಂದು ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಹೊಲಸು ಕೆಲಸ ನಾನು ಮಾಡೋದಿಲ್ಲ. ನಾನು ಮೌಲ್ಯಾಧಾರದ ಮೇಲೆ ರಾಜಕಾರಣ ಮಾಡುತ್ತೇನೆ. ನನ್ನ ಬಳಿ ಮೂವರು ಬಂದಿದ್ದರು. ಸಿ.ಡಿಯಲ್ಲಿ ಯಡಿಯೂರಪ್ಪ ಅವರ ಭ್ರಷ್ಟಾಚಾರ ಅಷ್ಟೇ ಇಲ್ಲ. ನೋಡಲಾರದಂತಹ ಸಿ.ಡಿ ಇವೆ. ಸಿಡಿ ಬಗ್ಗೆ ಸಿಬಿಐ ತನಿಖೆಯಾಗಲಿ. ನನ್ನ ಬಳಿ ಸಿ.ಡಿಯ ಬಗ್ಗೆ ಯಾರು ಮಾತನಾಡಿದರು ಎಂಬುದನ್ನು ತಿಳಿಸುತ್ತೇನೆ. ಈ ಕುರಿತ ತನಿಖೆ ರಾಜ್ಯದ ಪೊಲೀಸರಿಂದ ಸಾಧ್ಯವಿಲ್ಲ. ಯಡಿಯೂರಪ್ಪ ಪಾರದರ್ಶಕತೆ ಬಗ್ಗೆ ಮಾತನಾಡುತ್ತಾರೆ. ಸಿಡಿ ಬಗ್ಗೆ ತನಿಖೆಯಾಗಲಿ. ಅವರ ಮನೆಯಲ್ಲೇ ಸಿ.ಡಿ ಆಗಿವೆ. ಹೊರಗಿನವರು ಸಿ.ಡಿ ಮಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next