ಮಸ್ಕಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಾವುದೋ ಒಂದು ಜಾತಿ, ವರ್ಗಕ್ಕೆ ಸೀಮಿತವಾದವರಲ್ಲ. ಸರ್ವಜನಾಂಗದ ನಾಯಕ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬೂತ್ ಮಟ್ಟದ ಸದಸ್ಯರಿಗೆ ನಾಮಫಲಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನುಡಿದಂತೆ ನಡೆಯುವ ಎದೆಗಾರಿಕೆ ಕೇವಲ ಯಡಿಯೂರಪ್ಪ ಅವರಲ್ಲಿ ಮಾತ್ರವಿದೆ. ರಾಜ್ಯದ ಅಭಿವೃದ್ಧಿ ಕನಸು ಹೊತ್ತು ರೈತರು, ಶ್ರಮಿಕರು, ಬಡವರಿಗಾಗಿ ನೂರಾರು ಯೋಜನೆಗಳನ್ನು ಕೊಟ್ಟಿದ್ದಾರೆ. ಎಲ್ಲರನ್ನೂ ಸಮಬಾಳು, ಸಮಪಾಲು ಮಾದರಿಯಲ್ಲಿ ಕಾಣುತ್ತಾರೆ.
ಆದರೆ 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಕೇವಲ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದೆ. ಹೀಗಾಗಿ ಜನರು ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈಗ ಮಣ್ಣು ಮುಕ್ಕಿಸುತ್ತಿದ್ದಾರೆ. ಹಿಂದೆಂದೂ ಕಮಲ ಅರಳದೇ ಇದ್ದ ಕೆ.ಆರ್. ಪೇಟೆ, ಸಿರಾ ಮಾದರಿಯಲ್ಲಿ ಮಸ್ಕಿಯಲ್ಲೂ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಗಲಿದೆ ಎಂದರು.
ಸಚಿವ ಬಿ. ಶ್ರೀರಾಮುಲು ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಪ್ರತಾಪಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಫಲವಾಗಿ ಈ ಉಪಚುನಾವಣೆ ಬಂದಿದೆ.
ಪ್ರತಾಪಗೌಡ ಪಾಟೀಲ ಅವರನ್ನು ಪುನರಾಯ್ಕೆ ಮಾಡಬೇಕು ಎಂಬ ಉದ್ದೇಶದಿಂದ ಪಕ್ಷದ ಎಲ್ಲ ಮುಖಂಡರು ಉಪ ಚುನಾವಣೆಯಲ್ಲಿ ಶ್ರಮಿಸುತ್ತಿದ್ದಾರೆ. ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು. ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕ ರಾಜುಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿದರು. ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ ದಡೇಸೂಗೂರು, ಹಾಲಪ್ಪ ಆಚಾರ್, ಬಿಜೆಪಿ ಮುಖಂಡರಾದ ಹನುಮ ಸಿದ್ದೇಶ ಯಾದವ್, ಭಾರತಿ ಶೆಟ್ಟಿ, ವಿದ್ಯುತ್ ಕಾರ್ಖನೆ ನಿಗಮದ ಅದ್ಯಕ್ಷ ತಮ್ಮೇಶಗೌಡ, ಜಿಪಂ ಅಧ್ಯಕ್ಷೆ ಹಾದಿಮನಿ ವೀರಲಕ್ಷ್ಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್, ಹನುಮನಗೌಡ ಬೇಳಗುರ್ಕಿ, ಮಾಜಿ ಶಾಸಕ ನೇಮಿರಾಜ ನಾಯ್ಕ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಇದ್ದರು.