ಹಾಸನ: ಮುಖ್ಯ ಎಂಜಿನಿಯರ ಹುದ್ದೆಗೆ ಬಡ್ತಿ ನೀಡುವಾಗ ಮುಖ್ಯಮಂತ್ರಿಯವರು ಜಾತಿ ರಾಜಕಾರಣ ಮಾಡಿದ್ದಾರೆ. ಒಂದು ಸಮುದಾಯದವರಿಗೆ ಉದ್ದೇಶಪೂರ್ವಕವಾಗಿ ಅವಕಾಶ ತಪ್ಪಿಸಿದ್ದಾರೆ. ಬಡ್ತಿ ನೀಡುವಲ್ಲಿ ಬಿಡ್ಡಿಂಗ್ ನಡೆದಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ವಿವಿಧ ಇಲಾಖೆಗಳ ಮುಖ್ಯ ಎಂಜಿನಿಯರಿಗೆ ಬಡ್ತಿ ನೀಡುವ ಪ್ರಕ್ರಿಯೆ ಒಂದೂವರೆ ತಿಂಗಳಿನಿಂದಲೂ ನಡೆದಿತ್ತು. 24 ಮುಖ್ಯ ಎಂಜಿನಿಯರ ಪಟ್ಟಿಯಲ್ಲಿ 17 ಮಂದಿಗೆ ಮಾತ್ರ ಬುಧವಾರ ಬಡ್ತಿ ನೀಡಿ ಇನ್ನುಳಿದ 7 ಜನರಿಗೆ ಬಡ್ತಿ ನೀಡಿಲ್ಲ. ಒಂದು ಸಮುದಾಯದವರಿಗೆ ಮುಖ್ಯ ಎಂಜಿನಿ ಯರ್ ಹುದ್ದೆ ಸಿಗಬಾರದೆಂದು 17 ಜನರಿಗೆ ಬಡ್ತಿ ನೀಡಿ, 7 ಜನರಿಗೆ ಬಡ್ತಿ ನೀಡಿಲ್ಲ. ಈ ಏಳು ಜನರಲ್ಲಿ 4-5 ಮಂದಿ ಒಂದೇ ಸಮುದಾಯದವರು ಇದ್ದಾರೆ. ಹೀಗಾಗಿ 17 ಜನರಿಗೆ ಬಡ್ತಿ ನೀಡದೆ ತಡೆ ಹಿಡಿದ್ದಾರೆ.
ಒಂದು ಸಮುದಾಯವನ್ನು ( ಒಕ್ಕಲಿಗರು) ಗುರಿಯಾಗಿಟ್ಟುಕೊಂಡು ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ದೂರಿದರು. ಡಿಪಿಎಆರ್ ಅಧೀನ ಕಾರ್ಯದರ್ಶಿ ಮಂಜುಳಾ ಅವರು ಇದ್ದರೆ ಆಕ್ಷೇಪಣೆ ಎತ್ತುತ್ತಾರೆಂದು ಅವರನ್ನು ರಜೆ ಮೇಲೆ ಕಳುಹಿಸಿ ಬಡ್ತಿಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗಪಡಿಸಲಿ: ಪಟ್ಟಿಯಲ್ಲಿದ್ದ 17 ಮಂದಿಗೆ ಬಡ್ತಿ ನೀಡಿ 7 ಜನರ ಬಡ್ತಿ ತಡೆ ಹಿಡಿದಿರುವುದೇಕೆ? ನಿಗದಿತ ಬಿಡ್‌ಗೆ ಬರಲಿಲ್ಲ ವೆಂದು ತಡೆ ಹಿಡಿಯಲಾಗಿದೆಯೇ? ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರು ಬಹಿರಂಗಪಡಿಸಲಿ. ದ್ವೇಷದ ರಾಜಕಾರಣಕ್ಕೆ ಶಿಕ್ಷೆ ನೀಡುವ ಕಾಲ ಬಂದೇ ಬರುತ್ತದೆ ಎಂದು ದೂರಿದರು.
ಬೀದಿ ಪಾಲಾಗಿದ್ದಾರೆ: ಪ್ರವಾಹ ಸಂತ್ರಸ್ತರು ಬೀದಿ ಪಾಲಾಗಿದ್ದಾರೆ. ಅವರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ ಅಧಿಕಾರಿಗಳ ವರ್ಗಾವಣೆ, ಬಡ್ತಿಯಲ್ಲಿ ಅವ್ಯವಹಾರಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ಉತ್ತರಾಧಿಕಾರಿಯೆಂದು ಬಿಂಬಿಸುತ್ತಾ ಇದ್ದಷ್ಟು ದಿನ ಮಜಾ ಮಾಡಿಯೇ ಬಿಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ ಎಂದು ದೂರಿದರು.ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ: 12 ಜಿಲ್ಲೆಗಳಲ್ಲಿ ಪ್ರವಾಹ ಸಂತ್ರಸ್ತರು ನೊಂದು ಹೋಗಿದ್ದಾರೆ. ಸರ್ಕಾರ ಮನೆ ಕಳೆದುಕೊಂಡವರಿಗೆ 1000 ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆಗಳ ದುರಸ್ತಿಗೆ 500 ಕೋಟಿ ರೂ. ನೀಡುತ್ತಿದೆ. ಸರ್ಕಾರವೇ 35,000 ಕೋಟಿ ರೂ. ಹಾನಿಯಾಗಿದೆ ಎಂದು ವರದಿ ನೀಡಿದೆ.
ಆ ಪೈಕಿ 1500 ಕೋಟಿ ರೂ. ನೀಡಿದರೆ ಸಂತ್ರಸ್ತರ ಸಂಕಷ್ಟ ಪರಿಹಾರವಾಗುತ್ತದೆಯೇ? ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ಕಾಳಜಿ ಇದ್ದಿದ್ದರೆ, 25 ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಾರೆ ಎಂಬ ಕೃತಜ್ಞತೆ ಇದ್ದಿದ್ದರೆ ಈ ವೇಳೆ ಗಾಗಲೇ ರಾಜ್ಯಕ್ಕೆ 10-15 ಸಾವಿರ ಕೋಟಿ ರೂ.ಪರಿ ಹಾರ ಘೋಷಣೆ ಮಾಡಬೇಕಾಗಿತ್ತು ಎಂದರು.
ಕೇಂದ್ರ- ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ವಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬ ಜನರ ಭಾವನೆಯೂ ಈಗ ಹುಸಿ ಯಾಗಿದೆ ಎಂದು ತಿಳಿಸಿದರು. ಜಿಪಂ ಉಪಾಧ್ಯಕ್ಷಎಚ್.ಪಿ.ಸ್ವರೂಪ್ ಉಪಸ್ಥಿತರಿ ಇದ್ದರು.