ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಿಂದೆ ಇಬ್ಬರು ಗನ್‌ಮ್ಯಾನ್‌ಗಳಿದ್ದು ಒಬ್ಬರು ಜಾರಿ ನಿರ್ದೇಶನಾಲಯದಿಂದ (ಇಡಿ) ನಿಯೋಜನೆಗೊಂಡಿರುವವರು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ “ಬಾಂಬ್’ ಸಿಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿಯಿಂದ ನಿಯೋಜನೆಗೊಂಡಿರುವ ಗನ್‌ಮ್ಯಾನ್ ಯಡಿಯೂರಪ್ಪ ಅವರ ಚಲನವಲನ ನಿಗಾ ಇಟ್ಟು ಬಿಜೆಪಿ ವರಿಷ್ಠರಿಗೆ ಮಾಹಿತಿ ನೀಡುವುದು, ಜತೆಗೆ ವರಿಷ್ಠರ ಸಂದೇಶ ರವಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಡಿ ಮೂಲಕ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ನಿಯಂತ್ರಣದಲ್ಲಿಟ್ಟುಕೊಳ್ಳಲಾಗಿದೆ. ಬಿಜೆಪಿ ರಾಜ್ಯದಲ್ಲಿ ಆಧಿಕಾರಕ್ಕೆ ತಂದ ನಾಯಕನನ್ನು ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿ, ಬಿಜೆಪಿಯಲ್ಲಿ ಬಿಎಸ್‌ವೈ ಚಲಾವಣೆಯಲ್ಲಿ ಇಲ್ಲದ ನಾಣ್ಯದಂತಾಗಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗ ಸಂತೋಷ ಕೂಟಕ್ಕೆ ಹೈಜಂಪ್ ಮಾಡಿದರೇ ಎಂದು ಕಾಲೆಳೆದಿದೆ.
ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಯಡಿಯೂರಪ್ಪ ಅವರ ಫೋಟೋಗೆ ಜಾಗ ನೀಡದ ಬಿಜೆಪಿ ಅಸಲಿಗೆ ಮಾಡಲು ಹೊರಟಿರುವುದು ಬಿಎಸ್‌ವೈ ಮುಕ್ತ ಬಿಜೆಪಿ ಸಂಕಲ್ಪ ಎಂದು ಕುಟುಕಿದೆ. ಗುರುವಿಗೆ ಅವಮಾನಿಸುವ ನೇತೃತ್ವವನ್ನು ಸ್ವತಃ ಬೊಮ್ಮಾಯಿಯವರೇ ವಹಿಸಿರುವಂತಿದೆ ಎಂದು ಹೇಳಿದೆ.
ಮತ್ತೊಂದೆಡೆ ಕೆಪಿಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಬಿಜೆಪಿಯದು ಮನೆಯೊಂದು ಮೂರು ಬಾಗಿಲು ಅಲ್ಲ, ನೂರು ಬಾಗಿಲು ಎಂಬ ಪರಿಸ್ಥಿತಿಯಾಗಿದೆ. ಯಡಿಯೂರಪ್ಪ ಅವರು ಜನಸಂಕಲ್ಪ ಯಾತ್ರೆ ಹೋಗದಿರಲು ಅವರಿಗೆ ಅಸಮಾಧಾನ ಆಗಿರುವುದೇ ಕಾರಣ ಎಂದು ಹೇಳಿದ್ದಾರೆ.