ಬೆಂಗಳೂರು: ಕೋವಿಡ್-19 ಸೋಂಕು ವಿರುದ್ಧದ ಹೋರಾಟಕ್ಕೆ ತನ್ನ ಒಂದು ವರ್ಷದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಒಂದು ವರ್ಷದ ವೇತನ 24.10 ಲಕ್ಷ ರೂ. ಚೆಕ್ ಅನ್ನು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಹಸ್ತಾಂತರ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಬಡವರಿಗೆ ಉಚಿತವಾಗಿ ಕೆಎಂಎಫ‌್ ಹಾಲು ನೀಡಲಾಗುವುದು. ಕೆಎಂಎಫ್ ಮೂಲಕ 7 ಲಕ್ಷ ಲೀಟರ್ ಹಾಲನ್ನು ಸರ್ಕಾರ ಖರೀದಿಸಿ ಕೊಳಚೆ ಪ್ರದೇಶಗಳು ಹಾಗೂ ಬಡಜನರ ವಾಸಿಸುವ ಪ್ರದೇಶಗಳಲ್ಲಿ ಉಚಿತವಾಗಿ ಏಪ್ರಿಲ್ 14 ರವರೆಗೆ ಹಾಲು ವಿತರಿಸಲಾಗುವುದು ಎಂದರು.
ಜನ ಆತಂಕದಿಂದ ಗುಂಪಾಗಿ ಹೋಗಿ ಅಗತ್ಯ ವಸ್ತು ಖರೀದಿಸುವ ಅಗತ್ಯವಿಲ್ಲ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲ್ಲ. ಸರ್ಕಾರದ ಜತೆ ಸಹಕಾರ ನೀಡಬೇಕು. ಯಾವುದೇ ಸಂಕಷ್ಟವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ.
ವಿಧವಾ ವೇತನ, ವೃದ್ದಾಪ್ಯ ವೇತನ ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಕಲಬುರ್ಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ನೀಡಲಾಗುವುದು ಎಂದರು.