Advertisement

ಮಗ ಮಾಡಿದ ತಪ್ಪುತಿದ್ದಿಕೊಳ್ಳಲು ಹೇಳಿ

06:00 AM Aug 04, 2018 | Team Udayavani |

ಬೆಂಗಳೂರು: ನಾನು ಅಧಿಕಾರ ಸಿಗದೆ ಹತಾಶೆ ಭಾವನೆಯಿಂದ ಮಾತನಾಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

Advertisement

ಉದಯವಾಣಿಗೆ ದೇವೇಗೌಡರು ನೀಡಿದ್ದ ಸಂದರ್ಶನದಲ್ಲಿ ಉತ್ತರ ಕರ್ನಾಟಕ ಭಾಗದ ಹೋರಾಟಗಾರರಿಗೆ ಯಡಿಯೂರಪ್ಪ ಕುಮ್ಮಕ್ಕು ನೀಡುತ್ತಿದ್ದಾರೆಂದು ಹೇಳಿದ್ದ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ದೇವೇಗೌಡರು ವಿನಾ ಕಾರಣ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ದೇವೇಗೌಡರಿಗೆ ಮೂರು ಪ್ರಶ್ನೆಗಳನ್ನು ಹಾಕಿರುವ ಯಡಿಯೂರಪ್ಪ ಇದಕ್ಕೆ ಉತ್ತರಿಸಲಿ ಎಂದೂ ಆಗ್ರಹಿಸಿದ್ದಾರೆ.

ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಕೊಡುಗೆ ಏನು ಎಂದು ಹುಬ್ಬಳ್ಳಿಯಲ್ಲಿ ಹೇಳಿದವರ್ಯಾರು? ಚನ್ನಪಟ್ಟಣದಲ್ಲಿ ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತ ಹಾಕಿದಿರಿ ಎಂದು ಹೇಳಿದವರು ಯಾರು? ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಪ್ರಶ್ನಿಸಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ದೇವೇಗೌಡರು ಉತ್ತರ ನೀಡಲಿ ಎಂದು ಒತ್ತಾಯಿಸಿದರು.

ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ನೀಡಿದ ಬೇಜವಾಬ್ದಾರಿ ಹೇಳಿಕೆಗಳಿಂದ ಉತ್ತರ ಕರ್ನಾಟಕ ಹೊತ್ತಿಕೊಂಡು ಉರಿಯುತ್ತಿದೆ. ಮಗ ಮಾಡಿದ ತಪ್ಪು ತಿದ್ದಿಕೊಳ್ಳಲು ಹೇಳ್ಳೋದು ಬಿಟ್ಟು  ಈ ರೀತಿ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಬಿಎಸ್‌ವೈ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಮಗೆ ಅಧಿಕಾರದ ಹಪಹಪಿಯಿಲ್ಲ. ನಾವು ಪ್ರತಿಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ನಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸುತ್ತೇವೆ. ಪ್ರತ್ಯೇಕ ರಾಜ್ಯದ ಬೇಡಿಕೆ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಆ ಭಾಗದ ಹೋರಾಟಗಾರರು ಹಾಗೂ ಮಠಾಧೀಶರು ಧರಣಿ ಕುಳಿತಿದ್ದಾಗ ಮುಖ್ಯಮಂತ್ರಿ ಸ್ಥಳಕ್ಕೆ ಹೋಗಿ ಸಮಾಧಾನ ಮಾಡಬೇಕಿತ್ತು. ಆದರೆ, ಆ ಕೆಲಸ ನಾನು ಮಾಡಿದ್ದೇನೆ. ಇದು ತಪ್ಪೇ ಎಂದರು. ಮುಖ್ಯಮಂತ್ರಿಯವರ ಗೊಂದಲದ ಹೇಳಿಕೆಗಳು ಹಾಗೂ ತೀರ್ಮಾನಗಳು ಎಲ್ಲ ಅವಾಂತರಕ್ಕೂ ಕಾರಣ. ಆದರೆ, ನನ್ನ ಮೇಲೆ  ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next