Advertisement

ರೈತರ ಮೇಲಿನ ಕೇಸ್‌ ವಾಪಸ್‌ಗೆ ಬಿಎಸ್‌ವೈ ಆಗ್ರಹ

05:24 PM Aug 15, 2018 | Team Udayavani |

ಹುಬ್ಬಳ್ಳಿ: ಮಹದಾಯಿ ನೀರು ಬಳಕೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಗೋಕುಲ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರ ಸಹಯೋಗದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.

Advertisement

ಮಹದಾಯಿ ನೀರು ಪೂರೈಕೆಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ ಬಿಡಿಗಾಸನ್ನೂ ಘೋಷಿಸಿಲ್ಲ. ಈಗ ನ್ಯಾಯಾಧಿಕರಣದ ತೀರ್ಪು ಬಂದಿದ್ದು, ನಮ್ಮ ಪಾಲಿನ ನೀರಿನ ಪ್ರಮಾಣ ಘೋಷಿಸಲಾಗಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಉತ್ತರ ಕರ್ನಾಟಕದ ರೈತರು ಕಳೆದ ಮೂರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಈಗ ಫ‌ಲ ಸಿಕ್ಕಿದೆ. ರಾಜ್ಯ ಸರಕಾರ ಕೂಡಲೇ ರೈತರ ಮೇಲಿನ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಬರ-ನೆರೆ: ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಬರದ ಸ್ಥಿತಿಯಿದ್ದರೆ, ಕರಾವಳಿಯಲ್ಲಿ ನೆರೆಯಿಂದ ರೈತರು ತೊಂದರೆಗೀಡಾಗಿದ್ದಾರೆ. ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕಿದೆ ಎಂದು ತಿಳಿಸಿದರು. ಸಿಎಂ ಕುಮಾರಸ್ವಾಮಿ ಆಡಳಿತ ವೈಖರಿಯಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ರಾಜ್ಯ ಸರಕಾರದ ಖಜಾನೆ ದಿವಾಳಿಯಾಗಿದೆ. ಬೇಜವಾಬ್ದಾರಿ ಸರಕಾರದ ವಿರುದ್ಧ ಹೋರಾಡಬೇಕಿದೆ ಎಂದರು.

ರಾಹುಲ್‌ ಸೋಲಿಸ್ತೇವೆ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸೂಕ್ತ ಕ್ಷೇತ್ರಕ್ಕಾಗಿ ರಾಜ್ಯದಲ್ಲಿ ಹುಡುಕಾಡುತ್ತಿದ್ದಾರೆ. ಆದರೆ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಿಂದ ಕಣಕ್ಕಿಳಿದರೂ ಅವರನ್ನು ಸೋಲಿಸಲಾಗುವುದು ಎಂದರು. 

ಸಂಸದ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಸಂಸದೆ ಶೋಭಾ ಕರಂದ್ಲಾಜೆ, ಎನ್‌. ರವಿಕುಮಾರ ಮಾತನಾಡಿದರು. ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಎಸ್‌.ವಿ. ಸಂಕನೂರ, ಮುಖಂಡರಾದ ಮೋಹನ ಲಿಂಬಿಕಾಯಿ, ವೀರಭದ್ರಪ್ಪ ಹಾಲಹರವಿ, ಎಸ್‌.ಐ. ಚಿಕ್ಕನಗೌಡರ, ಈಶ್ವರ ಹೊಸಮನಿ, ನಾಗೇಶ ಕಲಬುರ್ಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next