Advertisement

ಬಿಎಸ್‌ವೈ ಮೀಸಲು ಸೌಲಭ್ಯ ನೀಡಬಹುದಿತ್ತು…

04:10 PM Sep 24, 2021 | Team Udayavani |

 ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜದ ಧೀಮಂತ ನಾಯಕರು. ಜೆ.ಎಚ್‌. ಪಟೇಲ್‌ ಮುಂತಾದ ನಾಯಕರಲ್ಲಿ ಸಾಲಿನಲ್ಲಿರುವಂತಹವರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಸಮಾಜಕ್ಕೆ 2ಎ ಮೀಸಲಾತಿ ನೀಡಬಹುದಾಗಿತ್ತು ಎಂಬ ನಿರೀಕ್ಷೆ ಇತ್ತು ಎಂದು ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಬೇಡಿಕೆ ಈಡೇರಿಸುವುದಕ್ಕೆ ಯಡಿಯೂರಪ್ಪ ಅವರಿಂದ ಆಗಲಿಲ್ಲ. ಈಗಿನ ಮುಖ್ಯಮಂತ್ರಿಗಳು ಸಹ ನಮ್ಮ ಸಮಾಜದವರೇ. ಸಮಾಜದ ಬಗ್ಗೆ ಎಲ್ಲವೂ ಗೊತ್ತಿರುವಂತಹವರು. ಹಾಗಾಗಿ 2ಎ ಮೀಸಲಾತಿ ನೀಡುವ ನಿರೀಕ್ಷೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ, ಇನ್ನುಳಿದ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಒತ್ತಾಯ. ಈಗಾಗಲೇ 28 ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡಲಾಗಿದೆ. ಇನ್ನುಳಿದವರಿಗೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರೇ ಮುಂದು ನಿಂತು ಮೀಸಲಾತಿ ಕೊಡಿಸಿದರೆ ಬಹಳ ಸಂತೋಷ ಎಂದರು.

ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹರಿಹರ ಪೀಠದ ಸ್ವಾಮೀಜಿಯ ವರನ್ನೂ ಆಹ್ವಾನಿಸಲಾಗುವುದು. ಹಿಂದೆ ನಡೆದ ಪಾದಯಾತ್ರೆಯಲ್ಲಿ ಅವರು ಭಾಗವಹಿಸಿದ್ದರು. ಕೆಲಸದ ಒತ್ತಡದ ಕಾರಣಕ್ಕೆ ಕೆಲವು ಸಭೆಗಳಿಗೆ ಆಗಮಿಸಿರಲಿಲ್ಲ. ಈಗ ಕೆಲಸದ ಒತ್ತಡ ಇಲ್ಲದೇ ಹೋದಲ್ಲಿ ಭಾಗವಹಿಸುವರು. ಅವರನ್ನೇ ಆಹ್ವಾನಿಸಿರುವಾಗ ಇಲ್ಲಿನ ಮುಖಂಡರೂ ಭಾಗವಹಿಸುವರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಉತ್ತರ ಕರ್ನಾಟಕದಲ್ಲಿನ ನಮ್ಮ ಸಮಾಜದ ಹಲವು ಸ್ವಾಮೀಜಿಗಳು ಸರ್ಕಾರ ನಮ್ಮ ಕಡೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮತ್ತೂಂದು ಪೀಠ ಸ್ಥಾಪನೆಯ ವಿಷಯ ಪ್ರಸ್ತಾಪಿಸಿದ ಬಗ್ಗೆ ಚರ್ಚೆ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ಸಮಾಜಕ್ಕೆ ಮೀಸಲಾತಿ, ಸರ್ಕಾರದ ಇತರೆ ಸೌಲಭ್ಯಕ್ಕೆ ಹೋರಾಟ ನಡೆಸಲಾಗುವುದು. ಮೂರು ಪೀಠಗಳು ಇದ್ದರೂ ಸಮಾಜ ಮಾತ್ರ ಒಂದೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next