Advertisement

ಅತಿವೃಷ್ಟಿಯಿಂದ ಅಡಕತ್ತರಿಯಲ್ಲಿ ಬಿಎಸ್‌ವೈ?

08:34 AM Aug 12, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 14 ದಿನಗಳಾದರೂ ಸಂಪುಟ ರಚನೆಯಾಗದಿರುವುದು ಒಂದೆಡೆಯಾದರೆ, ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಈ ಎರಡನ್ನೂ ಸಮರ್ಥವಾಗಿ ನಿಭಾಯಿಸುವ ಅನಿವಾರ್ಯತೆ ಎದುರಾಗಿದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಡಕತ್ತರಿಯಲ್ಲಿ ಸಿಕ್ಕಿಕೊಂಡರೇ ಎಂಬ ಪ್ರಶ್ನೆ ಮೂಡಿಸಿದೆ.

Advertisement

ಸರ್ಕಾರ ರಚನೆಯಾಗಿ 2 ವಾರವಾದರೂ ಸಂಪುಟ ರಚನೆಯಾಗದಿರುವುದು ಬಿಜೆಪಿಯ ಹಲವು ಆಕಾಂಕ್ಷಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಹಾಗಿದ್ದರೂ ಪ್ರವಾಹದಿಂದ ಜನ ಸಂಕಷ್ಟದಲ್ಲಿ ರುವಾಗ ಸಂಪುಟ ರಚನೆಗೆ ಒತ್ತಾಯಿಸುವ ಸ್ಥಿತಿಯಲ್ಲಿ ಇಲ್ಲ. ದಿನ ಕಳೆದಂತೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಹಾನಿ ಪ್ರಮಾಣ ಹೆಚ್ಚಾಗುತ್ತಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿಗಳೇ ಎಲ್ಲ ಆದೇಶ, ಸೂಚನೆ ನೀಡಬೇಕಿದೆ. ಈ ಎಲ್ಲ ಬೆಳವಣಿಗೆಗಳಿಂದ ಯಡಿಯೂರಪ್ಪ ಅವರು ಒತ್ತಡಕ್ಕೆ ಸಿಲುಕಿದಂತಿದೆ.

ಸಂಪುಟ ರಚನೆ ವಿಳಂಬ: ಸರ್ಕಾರ ರಚನೆಯಾಗಿ ಎರಡು ವಾರವಾದರೂ ಸಂಪುಟ ರಚನೆಯಾಗದಿ ರುವುದು ಸಹಜವಾಗಿಯೇ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ. ಆರು ವರ್ಷಗಳ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ವಿಳಂಬ ಮಾಡದೆ ಸಂಪುಟ ರಚಿಸಬೇಕು ಎಂಬುದು ಆಕಾಂಕ್ಷಿಗಳ ನಿರೀಕ್ಷೆ. ಆದರೆ ಸಂಪುಟ ರಚನೆ ನಿರಂತರವಾಗಿ ಮುಂದೂಡಿಕೆಯಾಗುತ್ತಿ ರುವುದು ಅಸಮಾಧಾನಕ್ಕೆ ಕಾರಣ ವಾಗಿದೆ. ಸಂಪುಟ ರಚನೆಗೆ ವರಿಷ್ಠರ ಅನುಮತಿ ಅಗತ್ಯವಿರು ವುದರಿಂದ ಯಾರೊಬ್ಬರೂ ಬಹಿರಂಗ ವಾಗಿ ಅಸಮಾಧಾನ ತೋರಿಸಿಕೊಳ್ಳುತ್ತಿಲ್ಲ. ಹಾಗಾಗಿ ಸಚಿ ವಾಕಾಂಕ್ಷಿಗಳನ್ನು ಸಮಾಧಾನಪಡಿಸಿ ವಿಶ್ವಾಸದಲ್ಲಿ ಟ್ಟುಕೊಳ್ಳುವತ್ತ ಯಡಿಯೂರಪ್ಪ ಗಮನ ನೀಡಬೇಕಿದೆ.

ಸಂಪುಟ ರಚನೆಗೆ ವರಿಷ್ಠರ ಅನುಮತಿ ಪಡೆಯುವಲ್ಲಿ ಹಿನ್ನಡೆಯಾಗುವುದಕ್ಕೆ ಕೆಲ ನಾಯಕರ ನಡೆಯೂ ಸ್ವಲ್ಪ ಮಟ್ಟಿಗೆ ಕಾರಣ ಎಂಬ ಮಾತುಗಳಿವೆ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೆಲ ಹಿರಿಯ ನಾಯಕರು, ಅಧಿಕಾರಿಗಳು ದೆಹಲಿಗೆ ತೆರಳಿದ್ದರು. ಪ್ರಧಾನಿ ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ನಾನಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಆನಂತರ ಸಂಪುಟ ರಚನೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಚರ್ಚೆ ಸಾಧ್ಯವಾಗಲಿಲ್ಲ.

ಏಕಾಂಗಿ ಪ್ರಯತ್ನ: ಸಂಪುಟ ರಚನೆಯಾಗದ ಕಾರಣ ಯಡಿಯೂರಪ್ಪ ಅವರೇ ಎಲ್ಲ ನಿರ್ಧಾರ ವನ್ನು ಕೈಗೊಳ್ಳಬೇಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ನಷ್ಟವಾಗಿದೆ. ಎಲ್ಲೆಡೆ ಅವರೇ ಪರಿಶೀಲನೆ ನಡೆಸಿ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಬೇಕಿದ್ದು, ಏಕಾಂಗಿ ಪ್ರಯತ್ನದಂತಾಗಿದೆ. ಒಂದೊಮ್ಮೆ ಸಂಪುಟ ರಚನೆಯಾಗಿದ್ದರೆ ಯಡಿಯೂರಪ್ಪ ಅವರ ಮೇಲೆ ಹೆಚ್ಚಿನ ಕಾರ್ಯ ಒತ್ತಡ ಉಂಟಾಗುತ್ತಿರಲಿಲ್ಲ.

Advertisement

ಈ ನಡುವೆ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಧಾವಿಸು ತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡಲಾ ರಂಭಿಸಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆರೋಪ ಮಾಡುತ್ತಿ ದ್ದಂತೆ ಯಡಿಯೂರಪ್ಪ ಅವರು ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿ ಮತ್ತೆ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ತೆರಳಿ ಪ್ರಗತಿ ಪರಿಶೀಲನೆ ನಡೆಸಿದರು. ಪ್ರವಾಹಪೀಡಿತ ಪ್ರದೇಶದಲ್ಲಿ ಸಮೀ ಕ್ಷೆಗಾಗಿ ನಾಲ್ಕು ಪ್ರತ್ಯೇಕ ತಂಡ ರಚಿಸಿದ್ದರೂ ಅದರಲ್ಲಿ ಬಿಜೆಪಿ ಸಂಸದರು, ಶಾಸಕರೇ ಇದ್ದಾರೆ. ಹಾಗಾಗಿ ಇದು ಪಕ್ಷದ ಕಾರ್ಯಕ್ರಮದಂತಾಗಿದೆ ಎಂಬ ಆರೋಪವೂ ಪ್ರತಿಪಕ್ಷಗಳಿಂದ ಕೇಳಿಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಕಾರ್ಯ ಒತ್ತಡದಲ್ಲಿದ್ದು, ಅಡಕತ್ತರಿಯಲ್ಲಿ ಸಿಕ್ಕಿಕೊಂ ಡಿದ್ದಾರೆಯೇ ಎಂಬ ಭಾವನೆ ಮೂಡಿಸುವಂತಿದೆ.

ಹಿಂದೆಯೂ ವಿಳಂಬ
2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿಯಾಗಿ ಡಾ.ಜಿ.ಪರಮೇಶ್ವರ್‌ ಪ್ರಮಾಣ ವಚನ ಸ್ವೀಕರಿಸಿದ್ದರು.

ಆನಂತರ 14 ದಿನ ಕಳೆದ ಮೇಲೆ ಸಂಪುಟ ರಚನೆಯಾಗಿತ್ತು. ಆಗ ಸಮ್ಮಿಶ್ರ ಸರ್ಕಾರವಿದ್ದ ಕಾರಣ ಕಾಂಗ್ರೆಸ್‌- ಜೆಡಿಎಸ್‌ಗೆ ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಸಂಬಂಧ ವಿಸ್ತೃತ ಚರ್ಚೆ ನಡೆದ ಕಾರಣ ವಿಳಂಬವಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಈಗಾಗಲೇ 14 ದಿನ ಕಳೆದಿವೆ. ಸೋಮವಾರದ ನಂತರ ಯಡಿಯೂರಪ್ಪ ಅವರು ದೆಹಲಿಗೆ ತೆರಳಲಿದ್ದು, ವರಿಷ್ಠರನ್ನು ಭೇಟಿಯಾಗಿ ಅನುಮತಿ ದೊರೆತರೆ ಮುಂದಿನ ವಾರ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.

ವಿಶ್ವಾಸ ಮೂಡಿದ ನಂತರ ಒಪ್ಪಿಗೆ
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಅರಿತಿರುವ ವರಿಷ್ಠರು ಈ ಬಾರಿ ಉತ್ತಮ ಆಡಳಿತಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಪ್ರಾರಂಭಿಕ ಹಂತಗಳಲ್ಲೇ ತೆಗೆದುಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ವಿಳಂಬ,ಕೊನೆಯ ಕ್ಷಣದಲ್ಲಿ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕೆ.ಜಿ.ಬೋಪಯ್ಯ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿಯೋಜನೆಯಂತಹ ಘಟನೆಗಳು ನಡೆದಿವೆ.ಆರು ವರ್ಷದ ಬಳಿಕ ಸರ್ಕಾರ ರಚನೆಯಾಗಿರುವುದರಿಂದ ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ಆಯ್ದ ಪ್ರಭಾವಿಗಳ ಆಪ್ತರು, ಹಿಂಬಾಲಕರಿಗೆ ಸಂಪುಟದಲ್ಲಿ ಸಿಂಹಪಾಲು ಸಿಕ್ಕರೆ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದೆ. ರಾಜ್ಯ ನಾಯಕರು ಸಿದಟಛಿಪಡಿಸಿರುವ ಸಚಿವಾಕಾಂಕ್ಷಿಗಳ ಪಟ್ಟಿ ಬಗ್ಗೆ ವರಿಷ್ಠರಿಗೆ ವಿಶ್ವಾಸವಿದ್ದಿದ್ದರೆ ತ್ವರಿತವಾಗಿ ಒಪ್ಪಿಗೆ ನೀಡುವ ಸಾಧ್ಯತೆ ಇತ್ತು. ಆದರೆ ಎಲ್ಲವನ್ನೂ ಪರಿಶೀಲಿಸಿ ಆಯ್ಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೆಲ ಗೊಂದಲಗಳಿಂದ ಹಿನ್ನಡೆ
ರಾಜ್ಯದ ಅಭಿವೃದ್ಧಿ ವಿಚಾರ ಕುರಿತಂತೆ ಕೇಂದ್ರ ಸಚಿವರ ಭೇಟಿಗೆ ತೆರಳಿದ ಯಡಿಯೂರಪ್ಪ ನೇತೃತ್ವದ ನಿಯೋಗವು ಸಂಪುಟ ರಚನೆ ಕುರಿತು ಚರ್ಚೆಗೆ ವರಿಷ್ಠರ ಭೇಟಿಗೆ ಸಮಯವನ್ನೇ ಪಡೆದಿರಲಿಲ್ಲ. ರಾಜ್ಯದ ವಿಚಾರ ಸಂಬಂಧ ಭೇಟಿಗೆ ತೆರಳಿದವರು ನಂತರ ವರಿಷ್ಠರ ಭೇಟಿಗೆ ಪ್ರಯತ್ನಿಸಿದರು. ಇನ್ನೊಂದೆಡೆ ಹಲವರೊಂದಿಗೆ ನಿಯೋಗದಲ್ಲಿ ತೆರಳಿದ್ದು ಸಹ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿರಬಹುದು. ಸಾಮಾನ್ಯವಾಗಿ ವರಿಷ್ಠರು ಸಂಬಂಧಪಟ್ಟವರನ್ನಷ್ಟೇ ಭೇಟಿಯಾಗಿ ಚರ್ಚಿಸಲು ಒಲವು ತೋರುತ್ತಾರೆ. ತಂಡದಲ್ಲಿ ತೆರಳಿದರೆ ಚರ್ಚೆಗೆ ಆಹ್ವಾನಿಸುವುದು ಕಡಿಮೆ ಎಂಬುದು ಹಿಂದಿನ ಘಟನಾವಳಿಗಳಿಂದ ಗೊತ್ತಾಗಿದೆ. ಈ ರೀತಿಯ ಕೆಲ ಲೋಪಗಳಿಂದ ಸಂಪುಟ ರಚನೆಗೆ ತುಸು ಹಿನ್ನಡೆಯಾದಂತಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

-ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next