Advertisement
ಸಾಲಮನ್ನಾ ಯೋಜನೆ ಕುರಿತು ಪ್ರತಿಪಕ್ಷ ನಾಯಕರು ಬಾಯಿ ಚಪಲಕ್ಕೆ ಉದ^ರಿಸುವ ಮಾತುಗಳಿಂದ ಅವರು ರೈತರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಇಲ್ಲದ ಗೊಂದಲ ಸೃಷ್ಟಿಸಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Related Articles
Advertisement
ಸುಮಾರು 1500 ಕೋಟಿ ರೂ. ಕೇಂದ್ರದಿಂದ ನಮಗೆ ಬಾಕಿಯಿದೆ. ಯಡಿಯೂರಪ್ಪ ಅವರ ವಾಸ್ತವತೆಯ ಅರಿವು ಇಲ್ಲದೆ ಆಧಾರ ರಹಿತ ಆರೋಪ ಮಾಡುವ ಬದಲು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸಿಕೊಟ್ಟಲ್ಲಿ ಬರ ಪರಿಹಾರ ಕಾರ್ಯ ನಿರ್ವಹಿಸಲು ಮತ್ತಷ್ಟು ಅನುಕೂಲವಾಗುತ್ತದೆ.
ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗಿದೆ. 4 ವರ್ಷದಲ್ಲಿ ಹಂತ ಹಂತವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದ ಯೋಜನೆ ಆರ್ಥಿಕ ಶಿಸ್ತಿನ ಇತಿಮಿತಿಯೊಳಗೆ ಒಂದೇ ವರ್ಷದಲ್ಲಿ ಪೂರ್ಣಗೊಳಿಸಲಾಗುತ್ತಿದೆ.
ಸಾಲಮನ್ನಾ ಸೌಲಭ್ಯ ಪಡೆದ ರೈತರಿಗೆ ಮತ್ತೆ ಸಾಲ ನೀಡಲು ಬ್ಯಾಂಕುಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಲ ಮನ್ನಾ ತೆರೆದ ಪುಸ್ತಕ ಇದ್ದಂತೆ, ಯಡಿಯೂರಪ್ಪ ಸಹ ಎಲ್ಲ ಮಾಹಿತಿಯನ್ನೂ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು.
ಕಳೆದ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶೇ.30 ರಷ್ಟು ಕಡಿಮೆಯಾಗಿದೆ . ಆದರೆ, ಇದನ್ನು ಸಾಧನೆ ಎಂದು ಹೇಳಿಕೊಳ್ಳಲಾಗದು. ರೈತರ ಆತ್ಮಹತ್ಯೆ ಪ್ರಕರಣ ಶೂನ್ಯವಾಗಬೇಕು ಎನ್ನುವುದು ನಮ್ಮ ಆಶಯ. ರೈತರ ಸ್ಥೈರ್ಯ ಕುಗ್ಗಿಸುವ ಯಾವ ಪ್ರಯತ್ನವೂ ಆರೋಗ್ಯಕರವಲ್ಲ.
ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ: ಐಎಂಎ ಹಗರಣದ ಕುರಿತು ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಎಸ್‌ಐಟಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಬಳಿ ಸರ್ಕಾರದ ಸಚಿವರು, ಶಾಸಕರು ಮತ್ತಿತರರು ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆ ಇದ್ದರೆ ಎಸ್‌ಐಟಿಗೆ ಕೊಡಲಿ.
ಪ್ರಕರಣವು ತನಿಖಾ ಹಂತದಲ್ಲಿರುವಾಗ ದಾಖಲೆಗಳಲ್ಲಿದೆ ರಾಜಕೀಯ ನಾಯಕರ ಹೆಸರು ಪ್ರಸ್ತಾಪಿಸಿ ತನಿಖೆಯ ಹಾದಿ ತಪ್ಪಿಸುವುದು ಸರಿಯಲ್ಲ ಎಂದಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಪಣ ತೊಟ್ಟಿದೆ. 1200 ಕೋಟಿ ರೂ.ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ.
ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ, ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಯಂತಹ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಶಿಥಿಲಗೊಂಡಿರುವ ಕಾಲು ಸೇತುವೆಗಳನ್ನು ಗುರುತಿಸಿ ಕಾಂಕ್ರೀಟ್ ಸೇತುವೆ ನಿರ್ಮಿಸುವ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೊಳಿಸಿದ್ದೇವೆ.
ಮಲೆನಾಡು ಭಾಗದಿಂದ ಬಂದಿರುವ ಯಡಿಯೂರಪ್ಪ ಅವರೂ ಇದನ್ನು ಮೆಚ್ಚುತ್ತಾರೆಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಟಾಂಗ್ ನೀಡಿದ್ದಾರೆ. ಜಿಂದಾಲ್ ಸಂಸ್ಥೆಯಿಂದ ಕಿಕ್‌ಬ್ಯಾಕ್ ಪಡೆದವರು ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಸಂಸ್ಥೆಗೆ ಭೂಮಿ ನೀಡುವ ಕುರಿತು ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಂದು ಸಿಹಿಯಾಗಿದ್ದು, ಇಂದೇಕೆ ಕಹಿ?: ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ಅಭಿವೃದ್ಧಿ ಕುರಿತು ಯಡಿಯೂರಪ್ಪ ಅವರು ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ನಾನು ಇದಕ್ಕೆ ಮುಂಚಿತವಾಗಿಯೇ ಈ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ.
ನಾನು ಅಧಿಕಾರದಲ್ಲಿದ್ದ 20 ತಿಂಗಳಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದು ಆ ಗ್ರಾಮಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೂ ಲಗತ್ತಿಸಿದ್ದೇನೆ. ನನ್ನ ಗ್ರಾಮ ವಾಸ್ತವ್ಯ ಪರಿಕಲ್ಪನೆ ಕೇವಲ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ. ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುವುದು. ಜನರ ಆಶಯ ಅರ್ಥೈಸಿಕೊಂಡು ಕಾರ್ಯಕ್ರಮ ರೂಪಿಸುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗ್ರಾಮ ವಾಸ್ತವ್ಯ ವ್ಯರ್ಥ, ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ. ಇದೇ ಸಂದರ್ಭ ಬಳಸಿ ವಿವಿಧ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ/ಉದ್ಘಾಟನೆ ಮಾಡಿದರೆ ಅವು ಗ್ರಾಮ ವಾಸ್ತವ್ಯದ ವೆಚ್ಚಕ್ಕೆ ಬರುವುದಿಲ್ಲ.
ಚಂಡರಗಿ ಗ್ರಾಮದಲ್ಲಿ 58 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಯಡಿಯೂರಪ್ಪ ಅವರು ವಾಸ್ತವ ಅರಿತು ಮಾತನಾಡಬೇಕು. ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ. ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿ¿ಲ್ಲಿ ಹಾಸನ ಜಿಲ್ಲೆ, ಅರಕಲಗೂಡು ತಾಲೂಕು ಶ್ರೀರಾಮಪುರ ಗ್ರಾಮದಲ್ಲಿ ನಸುಕಿನ ಜಾವದವರೆಗೆ ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಯಡಿಯೂರಪ್ಪನವರಿಗೆ ಅಂದು ಸಿಹಿಯಾಗಿದ್ದು ಇಂದು ಕಹಿಯಾಗಿರುವುದು ಯಾಕೆ ಎಂದು ಲೇವಡಿ ಮಾಡಿದ್ದಾರೆ.