ಹುಮನಾಬಾದ: ಸಾಲದ ಸುಳಿಯಲ್ಲಿ ನರಳುತ್ತ ತನ್ನ ಬಾಗಿಲು ಮುಚ್ಚಿಕೊಂಡ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ 13 ಜನ ನಿರ್ದೇಶಕರ ಸ್ಥಾನಕ್ಕೆ ಏ.6ರಂದು ಚುನಾವನೆ ನಡೆಯಲಿದ್ದು, ಬಿಜೆಪಿ ಮುಖಂಡ ಸುಭಾಷ್ ಕಲ್ಲೂರ ಹಾಗೂ ಬಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಸಂಜಯ್ ಖೇಣಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸುಮಾರು 300 ಕೋಟಿಗೂ ಅ ಧಿಕ ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಕಾರ್ಖಾನೆ ಕಳೆದೆರಡು ವರ್ಷಗಳಿಂದ ಸಂಪೂರ್ಣ ಕಾರ್ಖಾನೆ ಬಾಗಿಲು ಬಂದ್ ಆಗಿದೆ. ಸುಮಾರು 25 ಸಾವಿರಕ್ಕೂ ಅ ಧಿಕ ಷೇರುದಾರರಿದ್ದು, ಕಬ್ಬು ನುರಿಸುವ ಕಾರ್ಯ ಸ್ಥಗಿತಗೊಂಡ ಕಾರಣ ಜಿಲ್ಲೆಯ ಬಹುತೇಕ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಎಲ್ಲ ಷೇರುದಾರರು ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದು, ಸಹಕಾರ ಕ್ಷೇತ್ರದ ಕಾರ್ಖಾನೆಯಲ್ಲಿ ರಾಜಕೀಯ ಸೇರಿಕೊಂಡು ಕಾರ್ಖಾನೆ ಹಾಳಾಗಿದೆ ಎಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಹೆಚ್ಚಾದ ಮತದಾರರು: ಫೆಬ್ರವರಿ ತಿಂಗಳಲ್ಲಿ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ 25 ಸಾವಿರ ಷೇರುದಾರರ ಪೈಕಿ ಕೆವಲ 636 ಜನರು ಮಾತ್ರ ಮತದಾನಕ್ಕೆ ಹಕ್ಕು ಪಡೆದುಕೊಂಡಿದ್ದರು. ವಿವಿಧ ನಿಯಮ ಪಾಲಿಸದ ಕಾರಣ ಬಹುತೇಕ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸುಭಾಷ ಕಲ್ಲೂರ ನೇತೃತ್ವದ ತಂಡ ಹೈಕೋರ್ಟ್ ಮೂಲಕ ಹಂತ ಹಂತವಾಗಿ ಸುಮಾರು ಎರಡು ಸಾವಿರ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ಸಂಜಯ್ ಖೇಣಿ ನೇತೃತ್ವದ ತಂಡ ಕೂಡ ಸುಮಾರು ಮೂರು ಸಾವಿರ ಸದಸ್ಯರಿಗೆ ಮತದಾನದ ಹಕ್ಕು ತಂದಿದ್ದಾರೆ.
ಸದ್ಯ 636 ಸದಸ್ಯರಿಂದ ಇದೀಗ ಸುಮಾರು 5,400ಕ್ಕೂ ಅಧಿ ಕ ಸದಸ್ಯರು ಮತದಾನ ಹಕ್ಕು ಪಡೆದಿದ್ದಾರೆ. ಮತದಾನಕ್ಕೆ ಭರ್ಜರಿ ತಯಾರಿ: ಏ.6ರಂದು ನಡೆಯಲಿರುವ ಚುನಾವಣೆಗೆ ಎರಡು ಪೆನಲ್ ಸದಸ್ಯರು ಮತ ಬೇಟೆ ಆರಂಭಿಸಿದ್ದು, ಹಳ್ಳಿಖೇಡ(ಬಿ) ಹೊರವಲಯದ ಕಾರ್ಖಾನೆಯಲ್ಲಿ ನಡೆಯಲ್ಲಿರುವ ಮತದಾನ ಕೇಂದ್ರಕ್ಕೆ ಜನರನ್ನು ಕರೆ ತರಲು ತಯಾರಿ ನಡೆಸುತ್ತಿದ್ದಾರೆ. ಬಂದ್ ಆಗಿರುವ ಕಾರ್ಖಾನೆಗೆ ಭಾರಿ ಪೈಪೋಟಿ ನಡೆಸುತ್ತಿರುವ ಎರಡೂ ಪೆನಲ್ ಸದಸ್ಯರಿಗೆ ರೈತರು ಯಾವುದೇ ಕಾರಣಕ್ಕೂ ಕಾರ್ಖಾನೆ ಆರಂಭಿಸುವ ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್‌ಎಸ್‌ಕೆ ಚುನಾವಣೆ ಕುರಿತು ವ್ಯಂಗ್ಯವಾಡುತ್ತಿದ್ದಾರೆ.
ದುರ್ಯೋಧನ ಹೂಗಾರ