ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಕರೆಯಬೇಡಿ’ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಯಡಿಯೂರಪ್ಪ ನನ್ನನ್ನು ಜೈಲಿಗೆ ಕಳುಹಿಸುವ ಮೊದಲು ತಾವು ಜೈಲಿಗೆ ಹೋಗುವುದನ್ನು ತಪ್ಪಿಸಿ ಕೊಳ್ಳಲಿ’ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯ ದಲ್ಲಿ ಅಧಿಕಾರಕ್ಕೆ ಬಂದರೆ ತಾನೆ ನಮ್ಮನ್ನು ಜೈಲಿಗೆ ಕಳುಹಿಸುವುದು. ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಕಂಡು ಅಮಿತ್ ಶಾ ಬೈದಿರುವುದರಿಂದ ಯಡಿಯೂರಪ್ಪ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, “ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮಾತನಾಡಿದ್ದೇನೆ. ಶೀಘ್ರವೇ ಸಂಪುಟ ವಿಸ್ತರಣೆ ಮಾಡಲಾಗುವುದು. ಗೃಹ ಖಾತೆ ಯಾರಿಗೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ” ಎಂದು ಹೇಳಿದರು.
ಯಡಿಯೂರಪ್ಪಗೆ ಯಾವುದೇ ಬೇಸಿಕ್ ನಾಲೆಡ್ಜ್ ಇಲ್ಲ. ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ದ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿರುವುದರ ಹಿಂದೆ ನನ್ನ ಪಾತ್ರ ಇಲ್ಲ. ಯಡಿಯೂರಪ್ಪತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದವರನ್ನು ಹಾಗೆಯೇ ಬಿಡಬೇಕೇ?
– ಸಿದ್ದರಾಮಯ್ಯ, ಮುಖ್ಯಮಂತ್ರಿ