ಆನೇಕಲ್: ದೇಶದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಹೇಳಿದ ಕೇಂದ್ರ ಹಾಗೂರಾಜ್ಯ ಬಿಜೆಪಿ ಸರ್ಕಾರ ಇಂದು ಜನರನ್ನು ಶೋಷಣೆ ಮಾಡಿ ಅವರ ರಕ್ತ ಹೀರುವಂತ ಕೆಲಸ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ಕಿಡಿಕಾರಿದರು.
ತಾಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದಿನಬಳಕೆವಸ್ತುಗಳು ಮತ್ತು ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದ ಕೇಂದ್ರ -ರಾಜ್ಯ ಸರ್ಕಾರ ಮೂಕ ಪಕ್ಷಿಯಂತೆ ಕುಳಿತಿದೆ ಎಂದರು.
ಖಾಸಗೀಕರಣ: ಭೂ ಮಾಫಿಯಾಗಳ ಕೈಗೊಂಬೆಯಾಗಿ ಕೇಂದ್ರ ಬಿಜೆಪಿ ಸರ್ಕಾರ ಮೂರು ಕೃಷಿ ಮಸೂದೆ ಜಾರಿಗೆ ತರುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದೆ. ಜತೆಗೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಇಲಾಖೆ, ವಿಮಾನ ನಿಲ್ದಾಣ, ಕಾರ್ಖಾನೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನು ಅಂಬಾನಿಯಂತಹ ಬಲಾಡ್ಯರಿಗೆ ಬಿಜೆಪಿ ಸರ್ಕಾರ ಮಾರಾಟ ಮಾಡಲು ಮುಂದಾಗಿದ್ದಾರೆಂದರು.
ಆಯ್ಕೆಗೆ ಸಿದ್ಧತೆ: ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಆನೇಕಲ್ ತಾಲೂಕಿನಾದ್ಯಂತ ಬಹುಜನ ಸಮಾಜ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಯಾವುದೇ ಪಕ್ಷಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಹುಜನ ಸಮಾಜಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್.ಮುನಿಯಲ್ಲಪ್ಪ, ಜಿಲ್ಲಾಉಪಾಧ್ಯಕ್ಷ ಗೌರಿಶಂಕರ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಮುನಿರ್ ಭಾಷಾ, ತಾಲೂಕುಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರಿ,ಜಿಲ್ಲಾ ಖಜಾಂಚಿ ಶಂಭಯ್ಯ, ತಾಲೂಕುಕಾರ್ಯದರ್ಶಿಗಳಾದ ಟಿ.ಎಸ್.ಕುಮಾರ್‌ಆಚಾರಿ, ಸರ್ಜಾಪುರ ಲೋಕೇಶ್, ಗೆರಟಿಗನಬೆಲೆಮಾದೇಶ್, ಷಣ್ಮುಗಂ, ನೆರಳೂರುಮುನಿಯಲ್ಲಪ್ಪ, ಶಾಂತರಾಜು, ಮುದ್ದುಕೃಷ್ಣಮತ್ತಿತರರು ಇದ್ದರು.