ಬೀದರ: ಕಾಂಗ್ರೆಸ್ ನಂಬಿರುವ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಅಖೈರುಗೊಳ್ಳಿಸಿದ್ದು, ಏ.4ರಂದು ನಾಮಪತ್ರ ಸಲ್ಲಿಕೆಗೆ ಸಜ್ಜಾಗಿದೆ.
ಮುಸ್ಲಿಂ ಯುನೈಟೆಡ್ ಫ್ರಂಟ್ ಸಂಘಟನೆಯ ಅಧ್ಯಕ್ಷ ಸೈಯದ್ ಶಾನ್ ಉಲ್ ಹಕ್ ಬುಕಾರಿ ಬಿಎಸ್‌ಪಿಯ ಅಧಿಕೃತ ಅಭ್ಯರ್ಥಿಯಾಗಿ ರವಿವಾರ ಬೆಂಗಳೂರಿನಲ್ಲಿ ಪಕ್ಷದ ಮುಖಂಡರಿಂದ ಬಿ.ಫಾರ್ಮ್ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ರಾಜಕೀಯಕ್ಕೆ ಬಂದ ಬುಕಾರಿ, ಚಿಟಗುಪ್ಪ ಪುರಸಭೆ ಅಧ್ಯಕ್ಷ, ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಸದಸ್ಯರಾಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಮತ ಪಡೆಯಲು ಮಾತ್ರ ಬಳಸುತ್ತಿವೆ ಹೊರತೂ ಟಿಕೆಟ್ ನೀಡಿ ಚುನಾವಣೆಯಲ್ಲಿ ಗೆಲ್ಲಿಸಲು ಯಾವ ಪಕ್ಷದವರು ಮುಂದಾಗುತ್ತಿಲ್ಲ. ಟಿಕೆಟ್‌ಗಾಗಿ ಸಮಾಜದ ಅನೇಕ ಮುಖಂಡರು ಬೇಡಿಕೆ ಸಲ್ಲಿಸಿದರೂ ಪಕ್ಷಗಳು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ ಬುಕಾರಿ
ಅವರು, ಇದೀಗ ಬಿಎಸ್‌ಪಿ ಪಕ್ಷಕ್ಕೆ ಸೆರ್ಪಡೆಗೊಂಡು ಚುನಾವಣೆ ಕಣಕ್ಕೆ ಧಮುಕಿದ್ದಾರೆ.
ಸಾಥ್ ನೀಡುವರೆ ಅಲ್ಪಸಂಖ್ಯಾತರು?: ಸದ್ಯ ಜಿಲ್ಲೆಯಲ್ಲಿ ಅಲ್ಪಂಖ್ಯಾತ ಮತಗಳ ಕುರಿತು ಚರ್ಚೆ ನಡೆದಿದ್ದು,
ಅಲ್ಪಸಂಖ್ಯಾತರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಎಲ್ಲಾ ಪಕ್ಷಗಳಿಗೆ ತಲೆ ನೋವಾಗಿದೆ. ಕೆಲವರು ಕಾಂಗ್ರೆಸ್ ಪಕ್ಷದ ನಡೆ ವಿರುದ್ಧ ಇದ್ದರೆ, ಇನ್ನು ಕೆಲವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನೀಡುವುದು ಬೇಡ ಎನ್ನುತ್ತಿದ್ದಾರೆ. ಇನ್ನು ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಉಂಟುಮಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರನ್ನು ಮುಂದು ಮಾಡಲಾಗುತ್ತಿದೆ
ಎಂಬ ಆರೋಪ ಕೂಡ ಮಾಡುತ್ತಿದ್ದಾರೆ. ಸದ್ಯ ಬಿಎಸ್‌ಪಿಯಿಂದ ಸ್ಪರ್ಧೆ ನಡೆಸಲಿರುವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಅಲ್ಪಸಂಖ್ಯಾತರು ಸಾಥ್ ನೀಡುತ್ತಾರೆಯೇ ಕಾದು ನೋಡಬೇಕಾಗಿದೆ.
ಬಿಎಸ್‌ಪಿ ಮೊದಲ ಗೆಲುವು: 1994ರ ವಿಧಾನಸಭೆ ಚುನಾವಣೆಯಲ್ಲಿ ಬೀದರ ಕ್ಷೇತ್ರದಿಂದ ಮೊದಲ ಬಾರಿಗೆ ಬಿಎಸ್‌ಪಿ ಜಯಗಳಿಸಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಇಲ್ಲಿಂದಲ್ಲೇ ಅಸಂಬ್ಲಿ ಪ್ರವೇಶ ಮಾಡಿತ್ತು. ಸೈಯದ್ ಜುಲ್ಫೆàಕರ್ ಹಶ್ಮಿ ಬಿಎಸ್ ಪಿಯಿಂದ ಶಾಸಕರಾಗಿ ಆಯ್ಕೆ ಆಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಗನ್ನಾಥ
ಜಮಾದರ 22,568 (ಶೇ.2.90ರಷ್ಟು ) ಮತ ಪಡೆದಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಶಂಕರ ಭಯ್ಯ ಸ್ಪರ್ಧೆ ನಡೆಸಿ 15,079 (ಶೇ.1.58ರಷ್ಟು) ಮತ ಗಳಿಸಿದ್ದರು.
ಅಲ್ಪಸಂಖ್ಯಾತ ಅಭ್ಯರ್ಥಿ ಕಣದಲ್ಲಿರುವ ಕಾರಣ ಎಂಐಎಂ ಸೇರಿದಂತೆ ಹತ್ತಾರು ಮುಸ್ಲಿಂ ಸಂಘಟನೆಗಳು ಹಾಗೂ ಹಿಂದುಳಿದ ವರ್ಗಗಳ ಜನರು ಬೆಂಬಲ ನೀಡುವ ವಿಶ್ವಾಸವಿದೆ. ಅಲ್ಲದೆ, ಯಾರಿಂದ ಅನ್ಯಾಯ ಆಗಿದೆಯೋ ಅವರ ವಿರುದ್ಧ
ಮತ ಚಲಾಯಿಸುವ ಮೂಲಕ ಜನರು ಬಿಸಿ ಮುಟ್ಟಿಸುತ್ತಾರೆ ಎಂಬ ವಿಶ್ವಾಸವಿದೆ. ಬಿಎಸ್‌ಪಿ ಈ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಠಿ ಮಾಡುತ್ತದೆ. ಕಾಂಗ್ರೆಸ್-ಬಿಜೆಪಿ ಎರಡು ಪಕ್ಷಗಳಿಗೆ ಸೂಕ್ತ ಪೈಪೋಟಿ ನೀಡುತ್ತೇವೆ.
ಅಂಕುಶ ಗೋಖಲೆ, ಬಿಎಸ್‌ಪಿ ಜಿಲ್ಲಾಧ್ಯಕ್ಷ